ದಕ್ಷತೆಯ ಕೆಲಸದಿಂದ ನಾಗಲಾಪುರ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ
KannadaprabhaNewsNetwork | Published : Oct 13 2023, 12:15 AM IST
ದಕ್ಷತೆಯ ಕೆಲಸದಿಂದ ನಾಗಲಾಪುರ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ
ಸಾರಾಂಶ
ದಕ್ಷತೆಯ ಕೆಲಸದಿಂದ ನಾಗಲಾಪುರ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ
ವರ್ಗಾವಣೆಗೊಂಡ ನಾಗಲಾಪುರ ಗ್ರಾಪಂ ಪಿ.ಡಿ.ಒ. ಮಂಜುಳಾ ಬೀಳ್ಕೊಡಿ ವೇಳೆ ರೀನಾ ಬೆನ್ನಿ ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ ನಾಗಲಾಪುರ ಗ್ರಾಮ ಪಂಚಾಯಿತಿ ಪಿಡಿಒ ಮಂಜುಳಾ ದಕ್ಷತೆಯಿಂದ ಕೆಲಸ ಮಾಡಿದ್ದರಿಂದ ನಾಗಲಾಪುರ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಸಿಕ್ಕಿದೆ ಎಂದು ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ಬೆನ್ನಿ ತಿಳಿಸಿದರು. ಗುರುವಾರ ನಾಗಲಾಪುರ ಗ್ರಾಪಂ ಆವರಣದಲ್ಲಿ ಆಡುವಳ್ಳಿ ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಂಡ ಪಿಡಿಒ ಮಂಜುಳಾ ಅವರಿಗೆ ಬೀಳ್ಕೊಡಿಗೆ ಹಾಗೂ ಕರ್ಕೇಶ್ವರ ಗ್ರಾಪಂನಿಂದ ನಾಗಲಾಪುರ ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಂಡು ಅಧಿಕಾರ ಸ್ವೀಕಾರ ಮಾಡಿದ ಪ್ರೇಂ ಕುಮಾರ್ ಅವರ ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ 2 ವರ್ಷಗಳಿಂದ ನಾಗಲಾಪುರ ಗ್ರಾಪಂ ನಲ್ಲಿ ಪಿಡಿಒ ಆಗಿ ಕಾರ್ಯ ನಿರ್ವಹಿಸಿದ್ದ ಮಂಜುಳಾ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರನ್ನು ಒಂದು ತಂಡವಾಗಿ ಸೇರಿಸಿ ಉತ್ತಮ ಕೆಲಸ ಮಾಡಿದ್ದಾರೆ. ಗಾಂಧಿ ಗ್ರಾಮ ಪುರಸ್ಕಾರ ಅಲ್ಲದೆ ಜಿಲ್ಲೆಯಲ್ಲೇ ನಾಗಲಾಪುರ ಗ್ರಾಪಂ 2 ನೇ ಸ್ಥಾನ ಪಡೆದಿತ್ತು. ಮುಂದೆ ಕೆಲಸ ಮಾಡುವ ಆಡುವಳ್ಳಿ ಗ್ರಾಪಂ ನಲ್ಲೂ ಉತ್ತಮ ಸೇವೆ ಮಾಡಿ ಹೆಸರು ಪಡೆಯಲಿ ಎಂಬ ಆಶಯ ವ್ಯಕ್ತಪಡಿಸಿದರು. ಕರ್ಕೇಶ್ವರ ಗ್ರಾಮ ಪಂಚಾಯಿತಿ ಪಿಡಿಒ ಆಗಿದ್ದ ಪ್ರೇಂ ಕುಮಾರ್ , ನಾಗಲಾಪುರ ಗ್ರಾಮ ಪಂಚಾಯಿತಿಗೆ ಬಂದಿದ್ದು ಈ ಹಿಂದೆಯೂ ಇದೇ ಗ್ರಾಪಂ ನಲ್ಲಿ ಕೆಲಸ ಮಾಡಿದ್ದರು. ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಅಭಿವೃದ್ದಿ ಕೆಲಸ ಮಾಡಿ ಇನ್ನಷ್ಟು ಒಳ್ಳೆಯ ಹೆಸರು ತರೋಣ ಎಂದರು. ಸನ್ಮಾನ ಸ್ವೀಕರಿಸಿದ ಪಿಡಿಒ ಮಂಜುಳಾ ಮಾತನಾಡಿ, ನಾನು ಕೆಲಸ ಮಾಡುವ ಸಂದರ್ಭದಲ್ಲಿ ಕೆಲವು ಬಾರಿ ಕಠಿಣವಾಗಿ ಮಾತನಾಡಿದ್ದೇನೆ. ಅಧ್ಯಕ್ಷರು, ಉಪಾಧ್ಯಕ್ಷರು,ಕಾರ್ಯದರ್ಶಿಗಳ ಹಾಗೂ ಎಲ್ಲಾ ಸಿಬ್ಬಂದಿ ಸಹಕಾರದಿಂದ ಉತ್ತಮ ಕೆಲಸ ಮಾಡಲು ಸಾಧ್ಯವಾಯಿತು. ನಾಗಲಾಪುರ ಗ್ರಾಪಂ 2 ವರ್ಷದ ಅವಧಿಯ ಸೇವೆ ನನಗೆ ಆತ್ಮ ತೃಪ್ತಿ ತಂದಿದೆ ಎಂದರು. ನೂತನ ಪಿಡಿಒ ಪ್ರೇಂ ಕುಮಾರ್ ಮಾತನಾಡಿ, ನಾನು ಈ ಹಿಂದೆಯೂ ನಾಗಲಾಪುರ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡಿದ್ದು ಮರಳಿ ತವರು ಮನೆಗೆ ಬಂದಿದ್ದೇನೆ. ಉತ್ತಮ ಕೆಲಸ ಮಾಡಲು ನನಗೆ ಎಲ್ಲರ ಸಹಕಾರ ಅಗತ್ಯ ಎಂದರು. ನಾಗಲಾಪುರ ಗ್ರಾಪಂ ಉಪಾಧ್ಯಕ್ಷೆ ಆಶಾ, ಸದಸ್ಯರಾದ ಎಂ.ಮನೋಜ್ ಕುಮಾರ್, ಸುಮಿತ್ರ , ಕಾರ್ಯದರ್ಶಿ ಶ್ರೀದೇವಿ ಹಾಗೂ ಸಿಬ್ಬಂದಿ ಇದ್ದರು.