ಗಾಂಧೀ ಎಂದರೆ ಒಂದು ಆದರ್ಶ ಜೀವನ ವಿಧಾನ: ಪ್ರೊ.ಡಿ.ಎಸ್.ಸೋಮಶೇಖರ್

| Published : Oct 03 2024, 01:24 AM IST

ಸಾರಾಂಶ

ಸತ್ಯ ಅಹಿಂಸೆಯನ್ನೇ ತಮ್ಮ ಹೋರಾಟದ ಮಾರ್ಗವಾಗಿರಿಕೊಂಡಿದ್ದ ಮಹಾತ್ಮರ ಆಶಯವನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಪ್ರೊ.ಡಿ.ಎಸ್.ಸೋಮಶೇಖರ್ ಹೇಳಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ / ಸಾಗರಸತ್ಯ ಅಹಿಂಸೆಯನ್ನೇ ಹೋರಾಟ ಮಾರ್ಗವಾಗಿ ಕಂಡುಕೊಂಡಿದ್ದ ಮಹಾತ್ಮಗಾಂಧಿಯವರನ್ನು ಮಾತುಗಳಿಂದ ವಿಶ್ಲೇಷಣೆ ಮಾಡುವುದು ಅಸಾಧ್ಯದ ಮಾತು. ಗಾಂಧಿಯವರ ಪ್ರಸ್ತುತತೆಯನ್ನು ನಾವು ಕಾಣಬೇಕಿದೆ ಎಂದು ತುಂಗಾ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಪ್ರೊ.ಡಿ.ಎಸ್.ಸೋಮಶೇಖರ್ ಹೇಳಿದರು.ಗಾಂಧಿ ಜಯಂತಿ ಅಂಗವಾಗಿ ಬುಧವಾರ ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಶತಮಾನದ ವ್ಯಕ್ತಿಯಾಗಿದ್ದ ಮಹಾತ್ಮಗಾಂಧಿಯವರು ಕೇವಲ ಒಬ್ಬ ವ್ಯಕ್ತಿ ಅಥವಾ ಸಿದ್ಧಾತವಾಗಿರದೇ ಅವರ ಆದರ್ಶ ಜೀವನ ವಿಧಾನವಾಗಿದೆ. ತಮ್ಮ ಜೀವನದುದ್ದಕ್ಕೂ ಸತ್ಯ ಅಹಿಂಸೆಯನ್ನೇ ತಮ್ಮ ಹೋರಾಟದ ಮಾರ್ಗವಾಗಿರಿಕೊಂಡಿದ್ದ ಮಹಾತ್ಮರ ಆಶಯವನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.ಮಹಾತ್ಮರು ಪ್ರತಿಪಾದಿಸಿದ ಐದು ಪ್ರಮುಖ ವಿಚಾರಗಳಲ್ಲಿ ನಾವು ಇಂದಿಗೂ ಸಮಾಜದಲ್ಲಿ ಕಾಣುತ್ತಿರುವ ಅಸ್ಪೃಶ್ಯತೆ ನಿವಾರಣೆ, ಮದ್ಯವರ್ಜನ, ಸ್ತ್ರೀ ಪುರುಷ ಸಮಾನತೆ, ಸ್ವದೇಶಿ ಭಾವನೆ ಹಾಗೂ ಹಿಂದೂ ಮುಸ್ಲೀಂ ಏಕತೆಯೊಂದಿಗೆ ಬಾಳುವ ಮೂಲಕ ಗಾಂಧಿಯವರ ಪ್ರಸ್ತುತತೆಯನ್ನು ನಾವು ಕಾಣಬೇಕಿದೆ. ಗಾಂಧಿ ಇಂದಿಗೂ ಪ್ರಸ್ತುತರಾಗಿದ್ದಾರೆ ಎಂದರು. ಸ್ವಚ್ಛತೆಯ ಕುರಿತಂತೆ ಮಹಾತ್ಮ ಗಾಂಧಿಯವರ ಆಶಯದ ಪ್ರತಿಜ್ಞಾವಿಧಿಯನ್ನು ಪಪಂ ಸದಸ್ಯೆ ಶಬನಂ ಬೋಧಿಸಿದರು. ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಅಧ್ಯಕ್ಷತೆ ವಹಿಸಿದ್ದು ಉಪಾಧ್ಯಕ್ಷೆ ಗೀತಾ ರಮೇಶ್ ಮತ್ತು ಪಪಂಯ ಎಲ್ಲಾ ಸದಸ್ಯರು, ಚಿಂತಕ ಕಡಿದಾಳು ದಯಾನಂದ್, ಕ್ರಿಸ್ಚಿಯನ್ ಧರ್ಮಗುರು ಫಾ. ವೀರೇಶ್ ಮೊರೆಸ್, ಸಹಕಾರಿ ಮುಖಂಡರಾದ ಎಚ್.ಎನ್.ವಿಜಯದೇವ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗ್ಡೆ, ನಂದಕುಮಾರ್ ಪೈ, ಡಾ. ಅರುಣಾಚಲ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.ಸರಳತೆಯ ಶಾಸ್ತ್ರಿ:

ಅಂತೆಯೇ ಈ ದೇಶದ ಪ್ರಧಾನ ಮಂತ್ರಿಯಾಗಿ ಗಾಂಧಿಯವರ ತತ್ವ-ಸಿದ್ಧಾಂತದೊಂದಿಗೆ ಆಡಳಿತ ನಡೆಸಿ ಸರಳತೆಯಿಂದಲೆ ಮಾದರಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದ್ದ ಸಂದರ್ಭದಲ್ಲಿ ಒಂದು ಹೊತ್ತು ಊಟವನ್ನೇ ಬಿಟ್ಟಿದ್ದರು ಎಂದು ಪ್ರೊ.ಡಿ.ಎಸ್.ಸೋಮಶೇಖರ್ ಇತಿಹಾಸ ನೆನೆದರು.

ಗಾಂಧಿ ಕೊಂದ ಪಾಪಿಯ ವಿಜೃಂಭಣೆ ಸಲ್ಲದು: ಶಾಸಕ ಬೇಳೂರು

ಸಾಗರ: ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿಯವರನ್ನು ಅವಮಾನಿಸುವುದನ್ನು ಕಂಡರೆ ತೀರ ಬೇಸರವಾಗುತ್ತದೆ ಎಂದು ಶಾಸಕ ಹಾಗೂ ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

ಪಟ್ಟಣದ ಗಾಂಧಿಮಂದಿರದಲ್ಲಿ ಬುಧವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿಯವರನ್ನು ಗುಂಡಿಟ್ಟು ಕೊಂದ ಪಾಪಿಯನ್ನು ಕೆಲವರು ವಿಜೃಂಭಿಸುತ್ತಾರೆ. ಸ್ವಚ್ಚಭಾರತಕ್ಕೆ ಗಾಂಧಿಜಿ ಹೆಸರು ಬಳಸಿಕೊಳ್ಳುವವರು, ಅವರನ್ನು ತೆಗಳುವ ಮೂಲಕ ಅವಮಾನಿಸುತ್ತಿದ್ದಾರೆ ಎಂದರು.ಕಾಂಗ್ರೆಸ್ ಪಕ್ಷ ಯಾವಾಗಲೂ ಗಾಂಧೀಜಿಯವರ ತತ್ವಾದರ್ಶ ಪಾಲಿಸಿಕೊಂಡು ಬರುತ್ತಿದೆ ಎಂದ ಶಾಸಕರು, ಗಾಂಧೀ ತತ್ವಾದರ್ಶವನ್ನು ಪಾಲನೆ ಮಾಡಿದರೆ ಮಾತ್ರ ಅವರಿಗೆ ನಿಜವಾಗಿ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.

ಗಾಂಧೀಜಿ ಕುರಿತು ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಡಾ.ಸರ್ಫ್ರಾಜ್ ಚಂದ್ರಗುತ್ತಿ, ಬ್ರಿಟೀಷರಿಗೆ ಗಾಂಧೀಜಿಯವರ ಬಗ್ಗೆ ವಿರೋಧವಿದ್ದರೂ ಅವರಿಗೆ ಕಿಂಚಿತ್ ತೊಂದರೆ ಆಗದಂತೆ ೩೩ ವರ್ಷ ಜತನದಿಂದ ಕಾಪಾಡಿಕೊಂಡು ಬಂದಿದ್ದರು. ಆದರೆ ಸ್ವಾತಂತ್ರ್ಯ ಬಂದು ಒಂದು ವರ್ಷದಲ್ಲಿ ನಾವು ಗಾಂಧೀಜಿ ಯವರನ್ನು ಕಳೆದುಕೊಳ್ಳಬೇಕಾಯಿತು. ರಾಜ್ಯ ಸರ್ಕಾರ ಗಾಂಧೀಜಿಯವರನ್ನು ನೆನಪು ಮಾಡಿಕೊಳ್ಳಲು ಒಳ್ಳೆಯ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.ಇದಕ್ಕೂ ಮೊದಲು ಗಾಂಧಿ ಮಂದಿರದಿಂದ ಪ್ರಮುಖ ಬೀದಿಗಳಲ್ಲಿ ಗಾಂಧಿಜಿಯವರ ಭಾವಚಿತ್ರ ಸಹಿತ ರ್‍ಯಾಲಿ ನಡೆಸಲಾಯಿತು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ವಿಧಾನ ಪರಿಷತ್ ಸದಸ್ಯೆ ಪ್ರಫುಲ್ಲಾ ಮಧುಕರ್, ಗ್ಯಾರಂಟಿ ಸಮಿತಿ ತಾಲ್ಲೂಕು ಅಧ್ಯಕ್ಷ ಬಿ.ಆರ್.ಜಯಂತ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಅನಿತಾ ಕುಮಾರಿ, ಉಷಾ, ಪ್ರಭಾವತಿ, ಅಶೋಕ ಬೇಳೂರು, ಜ್ಯೋತಿ ಕೋವಿ, ಲಲಿತಮ್ಮ, ಹೊಳೆಯಪ್ಪ, ಮಕ್ಬೂಲ್ ಹಾಜರಿದ್ದರು.