ಸ್ವಯಂಪ್ರೇರಿತವಾಗಿ ತಮ್ಮ ಗ್ರಾಮಗಳನ್ನು ಮದ್ಯ ಮಾರಾಟ ಮುಕ್ತ ಮಾಡಿದ ಕೊಪ್ಪಳ ಜಿಲ್ಲೆಯ 11 ಗ್ರಾಮಗಳು ಹಾಗೂ ಗಾಂಧೀಜಿ ಅವರ ಚಿಂತನೆಗಳನ್ನು ಹಳ್ಳಿಗಳಲ್ಲಿ ಬಿತ್ತುತ್ತಿರುವ ಕೊಪ್ಪಳದ ಗಾಂಧಿ ಬಳಗಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಮಹಾತ್ಮ ಗಾಂಧೀಜಿ 157ನೇ ಜಯಂತಿ ಅಂಗವಾಗಿ ಗಾಂಧಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಗಾಂಧಿ ಪುರಸ್ಕಾರ ಪ್ರದಾನ ಮಾಡಿದರು.

ಬೆಂಗಳೂರು: ಸ್ವಯಂಪ್ರೇರಿತವಾಗಿ ತಮ್ಮ ಗ್ರಾಮಗಳನ್ನು ಮದ್ಯ ಮಾರಾಟ ಮುಕ್ತ ಮಾಡಿದ ಕೊಪ್ಪಳ ಜಿಲ್ಲೆಯ 11 ಗ್ರಾಮಗಳು ಹಾಗೂ ಗಾಂಧೀಜಿ ಅವರ ಚಿಂತನೆಗಳನ್ನು ಹಳ್ಳಿಗಳಲ್ಲಿ ಬಿತ್ತುತ್ತಿರುವ ಕೊಪ್ಪಳದ ಗಾಂಧಿ ಬಳಗಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಮಹಾತ್ಮ ಗಾಂಧೀಜಿ 157ನೇ ಜಯಂತಿ ಅಂಗವಾಗಿ ಗಾಂಧಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಗಾಂಧಿ ಪುರಸ್ಕಾರ ಪ್ರದಾನ ಮಾಡಿದರು.

ವಾರ್ತಾ ಮತ್ತು ಸಾರ್ವಜನಿಕ‌ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿ 157ನೇ ಜಯಂತಿ ಅಂಗವಾಗಿ ಗಾಂಧಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಗಾಂಧಿ ಸೇವಾ ಪ್ರಶಸ್ತಿ-2026 ಪ್ರದಾನ ಹಾಗೂ ಕೊಪ್ಪಳ ಜಿಲ್ಲೆಯ 11 ವ್ಯಸನಮುಕ್ತ ಗ್ರಾಮಗಳಿಗೆ ಗಾಂಧಿ ಪುರಸ್ಕಾರ ನೀಡಿ ಅವರು ಮಾತನಾಡಿದರು.

ರಾಜ್ಯ ಮದ್ಯಪಾನ ಸಂಯಮ ಮಂಡಳಿಯಿಂದ ಮದ್ಯ ಮಾರಾಟ ಮುಕ್ತ ಗ್ರಾಮ ಗೌರವ ಪಡೆದ ಕೊಪ್ಪಳ ತಾಲೂಕಿನ ಹಟ್ಟಿ, ತಮ್ಮ ಗ್ರಾಮಗಳನ್ನು ‌ಮದ್ಯ‌ ಮಾರಾಟ ಮುಕ್ತ ಮಾಡಿದ ಇದೇ ತಾಲೂಕಿನ ಲೇಬಗೇರಿ, ತಾಳಕನಕಾಪುರ, ಹನುಮನಹಳ್ಳಿ, ಕಾಮನೂರು, ಕುಕನೂರು ತಾಲೂಕಿನ ಬಿನ್ನಾಳ, ಚಿಕ್ಕೇನಕೊಪ್ಪ, ಕುಷ್ಟಗಿ ತಾಲೂಕಿನ ಮದ್ನಾಳ, ನಾಗರಾಳ, ಬೋದೂರು ತಾಂಡಾ ಹಾಗೂ ಹಿರೇಬನ್ನಿಗೋಳ ಗ್ರಾಮಗಳಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು. ಪುರಸ್ಕಾರವು ಚರಕ, ಪುಸ್ತಕ ಒಳಗೊಂಡಿದೆ.

ಪಾದಯಾತ್ರೆ: ಮದ್ಯ ಮಾರಾಟ ಮುಕ್ತ ಗ್ರಾಮಗಳಿಗೆ ಪಾದಯಾತ್ರೆ ಮಾಡಿ ನೈತಿಕ‌ ಬಲ ತುಂಬುತ್ತಿರುವ ಕೊಪ್ಪಳ ಗಾಂಧಿ ಬಳಗ ಖಾದಿ ಬಿಳಿ ದಿರಿಸಿನಲ್ಲಿ ಕಂಗೊಳಿಸಿತು. ಇಲ್ಲಿನ ಮೌರ್ಯ ಹೋಟೆಲ್ ಮುಂಭಾಗದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ನಮಸ್ಕರಿಸಿದ ಬಳಿಕ ಅಲ್ಲಿಂದ ಗಾಂಧಿ‌ ಭವನದ ವರೆಗೆ ಸದ್ಭಾವನೆ ಪಾದಯಾತ್ರೆ ನಡೆಸಿತು.

ಗಾಂಧಿ‌ ಸ್ಮಾರಕ‌ನಿಧಿ ಅಧ್ಯಕ್ಷ ಡಾ. ವೂಡೇ ಪಿ. ಕೃಷ್ಣ ‌ಅವರು ಪಾದಯಾತ್ರೆಗೆ ಚಾಲನೆ ನೀಡಿದರು. ಕೊಪ್ಪಳದ ಸಮಾನ ಮನಸ್ಕರು ಸೇರಿಕೊಂಡು ರಚಿಸಿಕೊಂಡಿರುವ ಕೊಪ್ಪಳ ಗಾಂಧಿ ಬಳಗ ಗ್ರಾಮಗಳಲ್ಲಿ ಸ್ವಾಸ್ಥ್ಯ ಕಾಯುವ ಕೆಲಸ ಮಾಡುತ್ತಿದೆ. ನಿಸ್ವಾರ್ಥವಾಗಿ ಈ ತಂಡದ ಕಾರ್ಯ ಎಲ್ಲರಿಗೂ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, ಗಾಂಧಿ‌ ಸ್ಮಾರಕ ನಿಧಿ ಕೋಶಾಧ್ಯಕ್ಷ ಎಚ್.ಬಿ. ದಿನೇಶ್, ರಾಜ್ಯ ಸರ್ಕಾರದ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ ಪಾಲ್ಗೊಂಡಿದ್ದರು.