ಕೊಪ್ಪಳ ಜಿಲ್ಲೆಯ 11 ಗ್ರಾಮಗಳು ಸ್ವಯಂಪ್ರೇರಣೆಯಿಂದ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಮದ್ಯಮುಕ್ತ ಗ್ರಾಮಗಳಾಗಿ ರೂಪುಗೊಂಡಿದ್ದು, ಈ ಗ್ರಾಮಗಳಿಗೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗಾಂಧಿ ಜಯಂತಿ ಅಂಗವಾಗಿ ಅ. 2ರಂದು ಗಾಂಧಿ ಪುರಸ್ಕಾರದ ಗೌರವ ಸಲ್ಲಿಕೆಯಾಗಲಿದೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ: ಮಹಾತ್ಮ ಗಾಂಧೀಜಿ ಕಂಡ ಮದ್ಯಮುಕ್ತ ಸಮಾಜದ ಕನಸನ್ನು ಕೊಪ್ಪಳ ಜಿಲ್ಲೆಯ ಹಳ್ಳಿಗಳ ಮಹಿಳೆಯರು ಸಾಕಾರಗೊಳಿಸಿದ್ದಾರೆ. ಮದ್ಯದಿಂದ ಕುಟುಂಬಗಳಲ್ಲಿ ಉಂಟಾಗುತ್ತಿದ್ದ ಕಲಹ, ಆರ್ಥಿಕ ಸಂಕಷ್ಟ ಹಾಗೂ ಸಾಮಾಜಿಕ ಅಶಾಂತಿಗೆ ಕಡಿವಾಣ ಹಾಕಲು ಗ್ರಾಮಸ್ಥರು, ಅದರಲ್ಲೂ ಮಹಿಳೆಯರು ಒಗ್ಗೂಡಿ ನಡೆಸಿದ ಹೋರಾಟಕ್ಕೆ ಇದೀಗ ರಾಜ್ಯಮಟ್ಟದ ಗೌರವ ದೊರೆತಿದೆ.ಕೊಪ್ಪಳ ಜಿಲ್ಲೆಯ 11 ಗ್ರಾಮಗಳು ಸ್ವಯಂಪ್ರೇರಣೆಯಿಂದ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಮದ್ಯಮುಕ್ತ ಗ್ರಾಮಗಳಾಗಿ ರೂಪುಗೊಂಡಿದ್ದು, ಈ ಗ್ರಾಮಗಳಿಗೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗಾಂಧಿ ಜಯಂತಿ ಅಂಗವಾಗಿ ಅ. 2ರಂದು ಬೆಳಗ್ಗೆ 11 ಗಂಟೆಗೆ ಕುಮಾರ ಪಾರ್ಕ್‌ನಲ್ಲಿರುವ ಮಹಾದೇವ ದೇಸಾಯಿ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮದ್ಯಮುಕ್ತ ಗ್ರಾಮಗಳಿಗೆ ಇದೇ ಮೊದಲ ಬಾರಿಗೆ ಗಾಂಧಿ ಪುರಸ್ಕಾರದ ಗೌರವ ಸಲ್ಲಿಕೆಯಾಗಲಿದೆ.
ರಾಜ್ಯ ಮದ್ಯಪಾನ ಸಂಯಮ ಮಂಡಳಿಯಿಂದ ಮದ್ಯಮುಕ್ತ ಗ್ರಾಮ ಗೌರವ ಇತ್ತೀಚೆಗೆ ಪಡೆದ ಕೊಪ್ಪಳ ತಾಲೂಕಿನ ಹಟ್ಟಿಗೂ ಪುರಸ್ಕಾರ ಸಿಗಲಿದೆ. ಇದೇ ತಾಲೂಕಿನ ಲೇಬಗೇರಿ, ತಾಳಕನಕಾಪುರ, ಹನುಮನಹಳ್ಳಿ, ಕಾಮನೂರು, ಕುಕನೂರು ತಾಲೂಕಿನ ಬಿನ್ನಾಳ, ಚಿಕ್ಕೇನಕೊಪ್ಪ, ಕುಷ್ಟಗಿ ತಾಲೂಕಿನ ಮದ್ನಾಳ, ನಾಗರಾಳ, ಬೋದೂರು ತಾಂಡಾ ಹಾಗೂ ಹಿರೇಬನ್ನಿಗೋಳ ಗ್ರಾಮಗಳಿಗೆ ಮುಖ್ಯಮಂತ್ರಿ ಪುರಸ್ಕಾರ ನೀಡುವರು.ಕೊಪ್ಪಳ ತಾಲೂಕಿನ ತಾಳಕನಕಾಪುರ, ಕಾಮನೂರು, ಹನುಮನಹಳ್ಳಿ, ಲೇಬಗೇರಿ, ಹಟ್ಟಿ ಸೇರಿದಂತೆ ಕುಕನೂರು ಹಾಗೂ ಕುಷ್ಟಗಿ ತಾಲೂಕಿನ ಹಲವು ಗ್ರಾಮಗಳಲ್ಲಿ ಮದ್ಯ ಮಾರಾಟಕ್ಕೆ ಗ್ರಾಮಸ್ಥರೇ ಕಡಿವಾಣ ಹಾಕಿದ್ದಾರೆ. ಕೆಲವೆಡೆ ಮದ್ಯದ ಜತೆಗೆ ಗುಟ್ಕಾ, ತಂಬಾಕು ಹಾಗೂ ಸಿಗರೇಟ್ ಮಾರಾಟಕ್ಕೂ ನಿರ್ಬಂಧ ಹೇರಲಾಗಿದೆ.
ಹನುಮನಹಳ್ಳಿ ಗ್ರಾಮವು ಸುಮಾರು ನಾಲ್ಕು ದಶಕಗಳಿಂದ ಮದ್ಯಮುಕ್ತವಾಗಿದೆ. ಮದ್ಯದ ಜತೆಗೆ ತಂಬಾಕು ಹಾಗೂ ಸಿಗರೇಟ್ ಮುಕ್ತ ಗ್ರಾಮವಾಗಿಯೂ ಗುರುತಿಸಿಕೊಂಡಿದೆ.ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಮದ್ಯ ಮಾರಾಟದಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಒಗ್ಗೂಡಿ ಮದ್ಯ ಮಾರಾಟ ನಿಲ್ಲಿಸುವ ನಿರ್ಧಾರ ಕೈಗೊಂಡರು. ಇದರ ಪ್ರೇರಣೆಯಿಂದ ಚಿಕ್ಕಕೇನಕಲಕೋಪ್ಪ ಗ್ರಾಮದಲ್ಲೂ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಯಿತು.
ಕುಷ್ಟಗಿ ತಾಲೂಕಿನ ಮದನಾಳ ಗ್ರಾಮದಲ್ಲಿ ಜಾತಿ ಸಂಘರ್ಷಗಳಿಗೆ ಮದ್ಯ ಪ್ರಮುಖ ಕಾರಣವಾಗುತ್ತಿದೆ ಎಂಬುದನ್ನು ಅರಿತ ಗ್ರಾಮಸ್ಥರು ಐದು ವರ್ಷಗಳ ಹಿಂದೆಯೇ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿದರು. ಇದರಿಂದ ಗ್ರಾಮದಲ್ಲಿ ಸಾಮಾಜಿಕ ನೆಮ್ಮದಿ ಮೂಡಿದೆ.ನಾಗರಾಳ ಗ್ರಾಮದಲ್ಲಿ ಯುವಕರು ಅಕ್ರಮ ಮದ್ಯ ಮಾರಾಟದ ವಿರುದ್ಧ ಧ್ವನಿ ಎತ್ತಿದರು. ಯುವಕರ ಮನವಿಗೆ ಸ್ಪಂದಿಸಿದ ಪೊಲೀಸರು ಕ್ರಮ ಕೈಗೊಂಡು ಅಕ್ರಮ ಮದ್ಯ ಮಾರಾಟ ನಿಲ್ಲಿಸಿದರು.
ಬೋದೂರು ತಾಂಡಾದಲ್ಲಿ ಹಿಂದೆ 23 ಅಕ್ರಮ ಮದ್ಯ ಮಾರಾಟದ ಸ್ಥಳಗಳಿದ್ದವು. ಗ್ರಾಮಸ್ಥರೇ ಮುಂದೆ ಬಂದು ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿದರು.ಹಿರೇಬನ್ನಿಗೊಳ ಗ್ರಾಮದಲ್ಲಿ ಮಹಿಳೆಯರು ಅಕ್ರಮ ಮದ್ಯ ಮಾರಾಟದ ವಿರುದ್ಧ ಹೋರಾಟ ನಡೆಸಿದರು. ಪೊಲೀಸರ ಸಹಕಾರದೊಂದಿಗೆ ಗ್ರಾಮದಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು.
ಹಟ್ಟಿಗೆ ರಾಜ್ಯಮಟ್ಟದ ಸಂಯಮ ಪ್ರಶಸ್ತಿ: ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದಲ್ಲೂ ಮಹಿಳೆಯರು ಹಾಗೂ ಗ್ರಾಮಸ್ಥರು ಒಗ್ಗೂಡಿ ಮದ್ಯ ಮಾರಾಟ ನಿಷೇಧಿಸುವ ಸಂಕಲ್ಪ ಕೈಗೊಂಡರು. ಮದ್ಯ ಮಾರಾಟಗಾರರಿಗೆ ಒಂದು ತಿಂಗಳ ಕಾಲಾವಕಾಶ ನೀಡಿದ ಬಳಿಕ ಗ್ರಾಮದಲ್ಲಿ ಮದ್ಯ ಮಾರಾಟ ಸಂಪೂರ್ಣ ಸ್ಥಗಿತಗೊಳಿಸಲಾಯಿತು.ಈ ಹೋರಾಟಕ್ಕೆ ಗವಿಮಠದ ಶ್ರೀಗಳು, ಗಾಂಧಿ ಬಳಗ ಹಾಗೂ ಪೊಲೀಸ್ ಇಲಾಖೆಯ ಪಿಐ ವಿಶ್ವನಾಥ ಹಿರೇಗೌಡ್ರ ಸೇರಿದಂತೆ ಹಲವರು ಬೆಂಬಲ ನೀಡಿದ್ದರಿಂದ ಸಾಕಾರವಾಗಿದೆ.
ಕೊಪ್ಪಳದಲ್ಲಿ ದೊಡ್ಡ ಕ್ರಾಂತಿ: ಮದ್ಯ ಮುಕ್ತ ಗ್ರಾಮಗಳನ್ನು ಮಾಡುವ ದಿಸೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ದೊಡ್ಡ ಕ್ರಾಂತಿಯಾಗಿದೆ. ಈ ಕಾರಣಕ್ಕಾಗಿಯೇ ಕೊಪ್ಪಳದ ಈ ಗ್ರಾಮಗಳಿಗೆ ಗಾಂಧಿ ಪುರಸ್ಕಾರ ನೀಡಲಾಗುತ್ತಿದೆ. ಜಿಲ್ಲೆಯೊಂದರಲ್ಲೇ 11 ಗ್ರಾಮಗಳು ಮದ್ಯಮುಕ್ತವಾಗಿರುವುದು ಉತ್ತಮ ಬೆಳವಣಿಗೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ.ಮದ್ಯಪಾನ ಸಂಯಮ ಪ್ರಶಸ್ತಿಯನ್ನು ನಾವು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳಿಗೆ ನೀಡಲು ಮುಂದಾಗಿದ್ದೆವು. ಮಹಿಳೆಯರೇ ಹೋರಾಟ ಮಾಡಿ ಮದ್ಯಮುಕ್ತ ಮಾಡಿರುವ ಹಟ್ಟಿ ಗ್ರಾಮಕ್ಕೆ ಮದ್ಯಪಾನ ಸಂಯಮ ಪ್ರಶಸ್ತಿ ನೀಡುವಂತೆ ಅವರೇ ಸೂಚಿಸಿದ್ದರಿಂದ ಮೊದಲ ಬಾರಿಗೆ ಹಟ್ಟಿ ಗ್ರಾಮಕ್ಕೆ ಈ ಪ್ರಶಸ್ತಿ ನೀಡಿದ್ದೇವೆ ಎಂದು ಹೇಳುತ್ತಾರೆ.
ಇತರ ಗ್ರಾಮಗಳು ಅನುಸರಿಸಲಿ: ಸ್ವಯಂಪ್ರೇರಿತವಾಗಿ ಗ್ರಾಮಸ್ಥರೇ ತಮ್ಮೂರು ಮದ್ಯಮುಕ್ತ ಮಾಡಿಕೊಳಬೇಕು. ಹಟ್ಟಿ ಗ್ರಾಮದ ಮಹಿಳೆಯರ ನಡೆಯನ್ನು ಇತರ ಗ್ರಾಮಗಳು ಅನುಸರಿಸಬೇಕು ಎಂದು ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.ಇದೇ ದಾರಿ ತುಳಿಯುತ್ತಿದ್ದಾರೆ: ರಾಜ್ಯದಲ್ಲಿಯೇ ಅತ್ಯಂತ ಬಹುದೊಡ್ಡ ಕ್ರಾಂತಿ ಮಾಡಿರುವ ಕೊಪ್ಪಳ ಜಿಲ್ಲೆಯ ಮುದ್ಯಮುಕ್ತ 11 ಗ್ರಾಮಗಳಿಗೆ ರಾಜ್ಯಮಟ್ಟದ ಗಾಂಧಿ ಪುರಸ್ಕಾರ ನೀಡಲಾಗುತ್ತದೆ. ಇನ್ನು ಅನೇಕ ಗ್ರಾಮಗಳು ಕೊಪ್ಪಳ ಜಿಲ್ಲೆಯಲ್ಲಿ ಇದೇ ದಾರಿ ತುಳಿಯುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಹೇಳಿದರು.