ಸಾರಾಂಶ
ಗಾಂಧಿ ಜಯಂತಿ ಪ್ರಯುಕ್ತ ಸಮಾಜ ಮಂದಿರದಲ್ಲಿ ಬುಧವಾರ ಗಾಂಧಿ ಸ್ಮೃತಿ ಮತ್ತು ಪಾನಮುಕ್ತರ ಸಮಾವೇಶ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ತಮ್ಮ ಕುಟುಂಬವನ್ನು ಉತ್ತಮವಾಗಿ ನಡೆಸಿಕೊಂಡು ಹೋಗಬೇಕಾದರೆ ದುಶ್ಚಟಗಳಿಂದ ಮುಕ್ತರಾಗಿ ಬಾಳುವಂತೆ ಸಮಾಜ ಮಂದಿರ ಸಭಾದ ಅಧ್ಯಕ್ಷ , ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಕರೆ ನೀಡಿದರು.ಅವರು ಗಾಂಧಿ ಜಯಂತಿಯ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮೂಡುಬಿದಿರೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಮತ್ತು ಮೂಡುಬಿದಿರೆ, ಗಾಂಧಿ ವಿಚಾರ ವೇದಿಕೆ ಹಾಗೂ ತಾಲೂಕು ಪಿಂಚಣಿದಾರರ ಸಂಘ ಮೂಡುಬಿದಿರೆ ತಾಲೂಕು ಇವುಗಳ ಸಂಯಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸಮಾಜ ಮಂದಿರದಲ್ಲಿ ಬುಧವಾರ ನಡೆದ ಗಾಂಧಿ ಸ್ಮೃತಿ ಮತ್ತು ಪಾನಮುಕ್ತರ ಸಮಾವೇಶವನ್ನು ಉದ್ಘಾಟಿಸಿ, ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ಶಿಕ್ಷಣವಿರಲಿಲ್ಲ ಇದ್ದರೂ ಅದು ಶ್ರೀಮಂತವರ್ಗಕ್ಕೆ ಮೀಸಲಾಗಿತ್ತು ಆದರೆ ಸ್ವಾತಂತ್ರ್ಯ ಸಿಕ್ಕಿದ ನಂತರ ಎಲ್ಲರ ಪರಿಸ್ಥಿತಿ ಬದಲಾಗಿದೆ. ಶಿಕ್ಷಣ ಪಡೆಯುವ ಅವಕಾಶ ಸಿಕ್ಕಿದೆ. ನಾವು ದುಶ್ಚಟಗಳಿಗೆ ಬಲಿಯಾಗದೆ ಪರಿಶ್ರಮಪಟ್ಟು ದುಡಿದರೆ ನಮ್ಮ ಬದುಕನ್ನು ಸಾರ್ಥಕ ಮಾಡಲು ಸಾಧ್ಯವಿದೆ ಆದ್ದರಿಂದ ಮಹಾತ್ಮಗಾಂಧಿ ಅವರು ಕಂಡ ಕನಸನ್ನು ವಿರೇಂದ್ರ ಹೆಗ್ಗಡೆ ಅವರು ಅನುಷ್ಠಾನ ಮಾಡುವ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆಂದು ಹೇಳಿದರು. ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಸುಭಾಶ್ಚಂದ್ರ ಚೌಟ ಅಧ್ಯಕ್ಷತೆ ವಹಿಸಿದ್ದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿ ಸಂಪತ್ ಸಾಮ್ರಾಜ್ಯ, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ವಿಠ್ಠಲ ಬೇಲಾಡಿ, ಜನಜಾಗೃತಿ ವೇದಿಕೆಯ ಕಾನೂನು ಸಲಹೆಗಾರ ಎಂ. ಬಾಹುಬಲಿ ಪ್ರಸಾದ್, ಪಿಂಚಣಿದಾರರ ಸಂಘದ ಅಧ್ಯಕ್ಷ ಟಿ.ಎನ್. ಕೆಂಬಾರೆ, ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಸುನೀತಾ ನಾಯ್ಕ್ ಅತಿಥಿಗಳಾಗಿ ಭಾಗವಹಿಸಿದ್ದರು.
ಮೇಲ್ವೀಚಾರಕಿ ಮಮತಾ ಸ್ವಾಗತಿಸಿದರು. ಪಾನಮುಕ್ತರಾದವರನ್ನು ಗುರುತಿಸಿ ಗೌರವಿಸಲಾಯಿತು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿದ್ಯಾ ಸ್ವಾಗತಿಸಿದರು. ಮೇಲ್ವೀಚಾರಕ ವಿಠ್ಠಲ್ ವಂದಿಸಿದರು.