ಸಾರಾಂಶ
ಗೌರಿಬಿದನೂರು ತಾಲೂಕಿನಿಂದ ತೊಂಡೇಬಾವಿ ಪಂಚಾಯಿತಿಗೆ ಆ ಪ್ರಶಸ್ತಿ ದೊರೆತಿದೆ. 150 ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಗ್ರಾಮ ಪಂಚಾಯತಿ ತೋರಿದ ಪ್ರಗತಿಯನ್ನು ಆಧರಿಸಿ ಪಂಚಾಯಿತಿಯನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಪ್ರತಿ ವರ್ಷ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಸಂದರ್ಭದಲ್ಲಿ ಪ್ರದಾನ ಮಾಡುವ ಗಾಂಧಿ ಗ್ರಾಮ ರಾಜ್ಯ ಮಟ್ಟದ ಪ್ರಶಸ್ತಿಗೆ ತಾಲೂಕಿನ ತೊಂಡೇಬಾವಿ ಪಂಚಾಯಿತಿ ಆಯ್ಕೆಯಾಗಿದೆ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅ. 2 ಗಾಂಧಿ ಜಯಂತಿಯಂದು, ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪುರಸ್ಕಾರಕ್ಕೆ ಆಯ್ಕೆಯಾದ ಗ್ರಾಪಂಗಳಿಗೆ ₹5 ಲಕ್ಷ ಚೆಕ್, ಪಾರಿತೋಷಕ ಹಾಗೂ ಅಭಿನಂದನಾ ಪತ್ರ ನೀಡಿ ಪುರಸ್ಕರಿಸಲಾಗುವುದು. ಜಿಲ್ಲೆಯಿಂದ 8 ಗ್ರಾಮ ಪಂಚಾಯಿತಿಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದು, ತಾಲೂಕಿನಿಂದ ತೊಂಡೇಬಾವಿ ಪಂಚಾಯಿತಿಗೆ ಆ ಪ್ರಶಸ್ತಿ ದೊರೆತಿದೆ. 150 ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಗ್ರಾಮ ಪಂಚಾಯತಿ ತೋರಿದ ಪ್ರಗತಿಯನ್ನು ಆಧರಿಸಿ ಪಂಚಾಯಿತಿಯನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.ಕಸ ವೈಜ್ಞಾನಿಕ ವಿಲೇವಾರಿ
ಪಂಚಾಯತಿ ವ್ಯಾಪ್ತಿಯಲ್ಲಿ 21 ಸದಸ್ಯರಿದ್ದು, 14 ಹಳ್ಳಿಗಳ ಪೈಕಿ 9787 ಜನಸಂಖ್ಯೆ ಹೊಂದಿದೆ. ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ. ಪ್ರತಿ ದಿನ ಮನ ಮನೆಗೆ ತೆರಳಿ ಕಸ ಸಂಗ್ರಹಣೆ ಮಾಡಿ ತ್ಯಾಜ್ಯ ಘಟಕಕ್ಕೆ ವಿಲೇವಾರಿ ಮಾಡಲಾಗುತ್ತದೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ಕೆಲಸವನ್ನು ತೊಂಡೇಬಾವಿ ಗ್ರಾಪಂ ಮಾಡುತ್ತಿದೆ. ಕಂದಾಯ ವಸೂಲಾತಿಯಲ್ಲಿ ತಾಲೂಕಿನಲ್ಲಿ ಪಂಚಾಯಿತಿ ಮೊದಲ ಸ್ಥಾನದ ಹೆಗ್ಗಳಿಕೆ ಸಂಪಾದಿಸಿದೆ. 15ನೇ ಹಣಕಾಸು ಯೋಜನೆ, ಪರಿಶಿಷ್ಟ ಜಾತಿ ಹಾಗೂ ಪಂಗಡ ಮತ್ತು ಶೇ.5ರ ವಿಶೇಷ ಚೇತನರ ಯೋಜನೆಗೆ ಅನುಷ್ಠಾನ, ಸ್ವಚ್ಛತೆ, ಬೀದಿ ದೀಪ ನಿರ್ವಹಣೆ. ಗ್ರಾಪಂಗೆ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲಾಗಿದೆ. ಪಿಡಿಒ ಬಸವರಾಜ್ ಬಳೂಟಗಿ ಮಾತನಾಡಿ, ಗ್ರಾ.ಪಂ.ಚುನಾಯಿತ ಪ್ರತಿನಿಧಿಗಳು ಹಾಗೂ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣಾಭಿವೃದ್ಧಿ ಕೆಲಸಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿದೆ. ಜನತೆಯ ಸಹಕಾರದಿಂದ ಮತ್ತಷ್ಟು ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಶ್ರಮಿಸಲಾಗುವುದು ಎಂದರು.ಗ್ರಾಪಂ ಅಧ್ಯಕ್ಷೆ ಕಾಮಾಕ್ಷಿ ರಾಮಧಾಸ್ ಪ್ರತಿಕ್ರಿಯೆ ವ್ಯಕ್ತಪಡಿಸಿ, ನಮ್ಮ ಅವಧಿಯಲ್ಲಿ ಪಂಚಾಯಿತಿಗೆ ರಾಜ್ಯ ಮಟ್ಟದ ಗಾಂಧಿ ಗ್ರಾಮ ಪ್ರಶಸ್ತಿಗೆ ಆಯ್ಕೆಯಾಗಿರುವುದು ಖುಷಿ ನೀಡಿದೆ. ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಪ್ರೇರಣೆ ದೊರೆತಿದೆ ಎಂದರು.