ಶಾಂತಿಯುತ ಹೋರಾಟದ ಹರಿಕಾರ ಗಾಂಧೀಜಿ: ಶಾಸಕ ಬಸವರಾಜ ಶಿವಣ್ಣನವರ

| Published : Oct 03 2024, 01:28 AM IST

ಸಾರಾಂಶ

ಅಹಿಂಸೆ ಮತ್ತು ಸತ್ಯದ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ನಾಯಕ ಗಾಂಧೀಜಿ ಎಂದು ಶಾಸಕ ಬಸವರಾಜ ಶಿವಣ್ಣನವರ ಬಣ್ಣಿಸಿದರು.

ಬ್ಯಾಡಗಿ: ಶಾಂತಿಯುತ ಪ್ರತಿಭಟನೆ ಪ್ರತಿಪಾದಿಸಿದ ಮಹಾತ್ಮಾ ಗಾಂಧಿಯವರು ಹಿಂಸೆಯನ್ನು ಆಶ್ರಯಿಸದೇ ಬ್ರಿಟಿಷರ ದಬ್ಬಾಳಿಕೆ ವಿರೋಧಿಸಿದ್ದಲ್ಲದೇ ಅಹಿಂಸೆ ಮತ್ತು ಸತ್ಯದ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ನಾಯಕರಾಗಿದ್ದಾರೆ ಎಂದು ಶಾಸಕ ಬಸವರಾಜ ಶಿವಣ್ಣನವರ ಬಣ್ಣಿಸಿದರು.

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ತಾಲೂಕು ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಗಾಂಧಿ ನಡಿಗೆ ಸ್ವಚ್ಛತೆಯ ಕಡೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮಾತೃದೇಶದ ವಿರುದ್ಧ ಬ್ರಿಟಿಷರ ದಬ್ಬಾಳಿಕೆ ವಿರೋಧಿಸಿದ ಗಾಂಧಿಯವರು ಅಹಿಂಸೆ ಮತ್ತು ಸತ್ಯಾಗ್ರಹ ಧ್ಯೇಯಗಳೊಂದಿಗೆ ಬಿಹಾರದ ಚಂಪಾರಣ್‌ನಲ್ಲಿ ಚಳುವಳಿ ಪ್ರಾರಂಭಿಸಿದರು. ಬಳಿಕ ಸ್ವಾತಂತ್ರ್ಯಕ್ಕಾಗಿ ದೇಶದೆಲ್ಲೆಡೆ ಚಳುವಳಿಗಳಿಗೆ ಪ್ರೇರಣೆ ನೀಡಿತು ಎಂದರು.

ಗಾಂಧಿ ಜಯಂತಿಯಂದು, ಜನರು ಪ್ರಾರ್ಥನೆ, ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗೌರವ ಸಲ್ಲಿಸುತ್ತಾರೆ, ನ್ಯಾಯ ಮತ್ತು ಶಾಂತಿಗಾಗಿ ವಿಶ್ವದ ಹೋರಾಟಕ್ಕೆ ಅವರ ಮಹತ್ವದ ಕೊಡುಗೆಗಳನ್ನು ನೆನಪಿಸಿಕೊಳ್ಳುತ್ತಾರೆ. ಇದನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವೆಂದೂ ಆಚರಿಸಲಾಗುತ್ತದೆ ಎಂದರು.

ಸರಳತೆಯಿಂದ ರಾಷ್ಟ್ರಪಿತನಾದ ಗಾಂಧಿ

ಗಾಂಧೀಜಿ ಸರಳ ಜೀವನಶೈಲಿಗೆ ಹೆಸರುವಾಸಿಯಾಗಿದ್ದರು, ಸ್ವತಃ ಕೈಯಿಂದ ಮಾಡಿದ ಬಟ್ಟೆಗಳನ್ನು ಧರಿಸುತ್ತಿದ್ದ ಅವರು, ಸ್ವಾವಲಂಬನೆಯನ್ನು ಉತ್ತೇಜಿಸಲು ಸಣ್ಣ ಸಮುದಾಯದಲ್ಲಿ ವಾಸಿಸುತ್ತಿದ್ದರು, ಮಹಿಳೆಯರ ಹಕ್ಕುಗಳ ವಿಸ್ತರಣೆ, ಬಡತನ ನಿವಾರಣೆ, ಅಸ್ಪೃಶ್ಯತೆ ಕೊನೆಗೊಳಿಸಲು, ಜನಾಂಗೀಯ ಮತ್ತು ಧಾರ್ಮಿಕ ಸೌಹಾರ್ದ ನಿರ್ಮಾಣ ಮತ್ತು ಗ್ರಾಮ ಸ್ವರಾಜ್ಯ ಸಾಧಿಸಲು ಗಾಂಧಿಯವರು ಶಾಂತಿಯುತ ಅಭಿಯಾನಗಳನ್ನು ನಡೆಸಿದರು ಎಂದು ತಿಳಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಪಾತ್ರ

ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲ ಕಳೆದರು. ಅಲ್ಲಿಯೂ ಬ್ರಿಟಿಷರಿಂದ ತಾರತಮ್ಯ ನೀತಿ ಎದುರಿಸಬೇಕಾಯಿತು. 1915ರಲ್ಲಿ ಭಾರತಕ್ಕೆ ಮರಳಿದ ಬಳಿಕ ಭಾರತೀಯರು ಎದುರಿಸುತ್ತಿರುವ ತಾರತಮ್ಯದ ವಿರುದ್ಧ ಶಾಂತಿಯುತ ಆಂದೋಲನ ಪ್ರಾರಂಭಿಸಿದರು. ಚಂಪಾರಣ್ ಸತ್ಯಾಗ್ರಹ, ಖೇಡಾ ಸತ್ಯಾಗ್ರಹ, ಅಹಮದಾಬಾದ್ ಗಿರಣಿ ಮುಷ್ಕರ, ಅಸಹಕಾರ ಚಳುವಳಿ, ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಮೂವಮೆಂಟ್ ಗಳು ಬ್ರಿಟಿಷರು ಭಾರತವನ್ನು ತೊಲಗುವಂತೆ ಮಾಡಿತು ಎಂದರು.

ಮೆರವಣಿಗೆ

ಕಾಂಗ್ರೆಸ್ ಕಚೇರಿಯಿಂದ ವಿವಿಧ ಘೋಷಣೆಗಳೊಂದಿಗೆ ಪಟ್ಟಣದ ಬೆಟ್ಟದ ಮಲ್ಲೇಶ್ವರ ಬಡಾವಣೆವರೆಗೂ ಮೆರವಣಿಗೆ ಮೂಲಕ ಸಾಗಿದ ಕಾಂಗ್ರೆಸ್ ಕಾರ್ಯಕರ್ತರು, ಬಳಿಕ ಸ್ವಚ್ಛತಾ ಕಾರ್ಯಗಳನ್ನು ನಡೆಸಿದರು. ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಮುಖಂಡರಾದ ಬೀರಣ್ಣ ಬಣಕಾರ, ಶಂಭನಗೌಡ ಪಾಟೀಲ, ನಾಗರಾಜ ಆನ್ವೇರಿ, ಚನ್ನಬಸಪ್ಪ ಹುಲ್ಲತ್ತಿ, ವೀರನಗೌಡ ಪೊಲೀಸ್ ಪಾಟೀಲ, ದುರ್ಗೇಶ ಗೋಣೆಮ್ಮನವರ, ಮುನಾಫ್ ಎರೆಶೀಮಿ, ಖಾದರಸಾಬ್ ದೊಡ್ಮನಿ, ರಾಜಣ್ಣ ಕಳ್ಯಾಳ, ಸೋಮಣ್ಣ ಸಂಕಣ್ಣನವರ, ಲಿಂಗರಾಜ ಕುಮ್ಮೂರ, ಗಿರೀಶ್ ಇಂಡಿಮಠ, ರಮೇಶ ಸುತ್ತಕೋಟಿ, ಪ್ರೇಮಾ ಅಂಗಡಿ, ಮಜೀದ್ ಮುಲ್ಲಾ, ರವಿ ಪೂಜಾರ, ಕರಬಸಪ್ಪ ಹಾದರಗೇರಿ ಸೇರಿದಂತೆ ಇನ್ನಿತರರಿದ್ದರು.