ದೊಡ್ಡಬಳ್ಳಾಪುರ: ಮಹಾತ್ಮ ಗಾಂಧೀಜಿ ಅವರ ಕುರಿತು ಪಠ್ಯ ಪುಸ್ತಕಗಳನ್ನು ಓದಿದರೆ ಸಾಲದು ಅವರ ಆದರ್ಶ, ತತ್ವಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗಾಂಧಿ ತತ್ವಾದರ್ಶಗಳ ಪಾಲನೆ ಸುಸ್ಥಿರ ಅಭಿವೃದ್ಧಿಗೆ ಪೂರಕ ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಹೇಳಿದರು
ದೊಡ್ಡಬಳ್ಳಾಪುರ: ಮಹಾತ್ಮ ಗಾಂಧೀಜಿ ಅವರ ಕುರಿತು ಪಠ್ಯ ಪುಸ್ತಕಗಳನ್ನು ಓದಿದರೆ ಸಾಲದು ಅವರ ಆದರ್ಶ, ತತ್ವಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗಾಂಧಿ ತತ್ವಾದರ್ಶಗಳ ಪಾಲನೆ ಸುಸ್ಥಿರ ಅಭಿವೃದ್ಧಿಗೆ ಪೂರಕ ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 157 ನೇ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಲಣಗಳು ಇಲ್ಲದ ಹಿಂದಿನ ಕಾಲದಲ್ಲಿ ಮಹಾತ್ಮ ಗಾಂಧೀಜಿಯವರು ಪ್ರಭಾವಿ ವ್ಯಕ್ತಿಯಾಗಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೂಜಿಸಲ್ಪಡುವ ವ್ಯಕ್ತಿಗಳೆಂದರೆ ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಎಂದು ತಿಳಿಸಿದರು.ಗಾಂಧೀಜಿಯವರು ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಜಗತ್ತಿಗೆ ಪರಿಚಯಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಮಹಿಳೆಯರಿಗೆ ಪ್ರೊತ್ಸಾಹ ನೀಡಿದರು. ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದರು. ಅವರ ಸತ್ಯ, ಅಹಿಂಸೆ, ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನು ಬಳಸುವುದು ದೇಶದ ಬಡವರ ಉದ್ದಾರಕ್ಕೆ ಮತ್ತು ಆರ್ಥಿಕ ಸ್ವಾವಲಂಬನೆಗೆ ದಾರಿ ಎಂದು ನಂಬಿದ್ದರು. ಸತ್ಯವೇ ದೇವರೆಂದು ನಂಬಿದ್ದ ಅವರು ಮಾತು ಮತ್ತು ಕೃತಿಯಲ್ಲಿ ಸತ್ಯವನ್ನು ಪಾಲಿಸಬೇಕೆಂದು ಹೇಳಿದರು.
ಜಿಪಂ ಸಿಇಒ ಡಾ.ವಾಸಂತಿ ಅಮರ್ ಮಾತನಾಡಿ, ಗಾಂಧೀಜಿಯವರ ತತ್ವಗಳನ್ನು ಮಕ್ಕಳು ಬೆಳೆಸಿಕೊಂಡು ನಡೆನುಡಿಯಲ್ಲಿ ಪ್ರಾಮಾಣಿಕರಾಗಿ, ವಿದ್ಯಾವಂತರಾಗಿ, ಗುಣವಂತರಾಗಬೇಕು ಎಂದು ತಿಳಿಸಿದರು.ಶಿಕ್ಷಕ ಬಸವರಾಜು ಉಪನ್ಯಾಸ ನೀಡಿ, ಮಹಾತ್ಮ ಗಾಂಧೀಜಿಯವರು ಜೀವನದುದ್ದಕ್ಕೂ ಸತ್ಯ, ಸರಳತೆ, ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡಿದ್ದರು. ಗಾಂಧೀಜಿಯವರ ಬದುಕು ತೆರದ ಪುಸ್ತಕ. ಗಾಂಧೀಜಿ ಅವಮಾನವನ್ನು ಕಡೆಗಣಿಸಿ ಸಾಧನೆಯ ಮಟ್ಟಿಲು ಏರಿದ ಮಹಾನ್ ಚೈತನ್ಯ ಎಂದು ಹೇಳಿದ ಅವರು, ಲಾಲ್ ಬಹದ್ದೂರ್ ಶಾಸ್ತ್ರಿ ಸರಳ, ಪ್ರಾಮಾಣಿಕ ವ್ಯಕ್ತಿತ್ವದವರಾಗಿದ್ದರು. ಮುಗ್ದ ಚೇತನ ಅವರ ಆದರ್ಶಗಳನ್ನು ನಾವು ಪಾಲನೆ ಮಾಡಬೇಕು ಎಂದು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಡಿ.ಅಶೋಕ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.2ಕೆಡಿಬಿಪಿ2-
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದಿಂದ ನಡೆದ ಮಹಾತ್ಮ ಗಾಂಧೀಜಿ, ಲಾಲ್‌ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧಾ ಮತ್ತಿತರರು ಭಾಗವಹಿಸಿದ್ದರು.