ಗಾಂಧಿ ತತ್ವಗಳು ಇಂದಿಗೂ ಪ್ರಸ್ತುತ: ನ್ಯಾ.ರಾಜೇಶ್ವರಿ ಹೆಗಡೆ

| Published : Oct 03 2024, 01:17 AM IST

ಸಾರಾಂಶ

ಅಹಿಂಸೆ ಮತ್ತು ಸತ್ಯಾಗ್ರಹ, ಅಸಹಕಾರ ಚಳವಳಿಗಳ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ಅವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಜಿಲ್ಲಾ ಕೋರ್ಟ್ ಆವರಣದಲ್ಲಿ ಸ್ವಚ್ಛತಾ ಸೇವಾ ದಿವಸ್ ನಿಮಿತ್ತ ಶ್ರಮದಾನ, ಚಿಂತನ ಮಂಥನ ಕಾರ್ಯಕ್ರಮಕ್ಕೆ ಚಾಲನೆ- - - ಕನ್ನಡಪ್ರಭ ವಾರ್ತೆ ದಾವಣಗೆರೆ ಅಹಿಂಸೆ ಮತ್ತು ಸತ್ಯಾಗ್ರಹ, ಅಸಹಕಾರ ಚಳವಳಿಗಳ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ಅವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿ ಬುಧವಾರ ರಾಷ್ಟ್ರಪಿತ ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಸ್ವಚ್ಛತಾ ಸೇವಾ ದಿವಸ್ ನಿಮಿತ್ತ ಶ್ರಮದಾನ ನಡೆಸಿ, ಮಾನವ ಸರಪಳಿ, ಚಿಂತನ ಮಂಥನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜೀವನದಲ್ಲಿ ಸತ್ಯ ಮತ್ತು ಅಹಿಂಸಾ ತತ್ವಗಳನ್ನು ಪಾಲಿಸುವ ಮೂಲಕ ನ್ಯಾಯ ಮತ್ತು ಸೌಹಾರ್ದತೆ ನೆಲೆಸುವ ಜಗತ್ತು ನಿರ್ಮಾಣಕ್ಕೆ ಶ್ರಮಿಸಬೇಕಾಗಿದೆ. ಸರಳತೆ ಮತ್ತು ಸತ್ಯದ ಮಹತ್ವನ್ನು ಕಲಿಸಿದ ಮಹಾತ್ಮಾ ಗಾಂಧೀಜಿ ಅವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ಅವರ ತತ್ವಗಳಿಗೆ ಬದ್ಧರಾಗಬೇಕಿದೆ. ವೈಯಕ್ತಿಕ ಯೋಗಕ್ಷೇಮ ಮತ್ತು ರಾಷ್ಟ್ರೀಯ ಪ್ರಗತಿಗೆ ಎರಡಕ್ಕೂ ಸ್ವಚ್ಛತೆ ಅತ್ಯಗತ್ಯ ಎಂದು ಗಾಂಧೀಜಿ ಬಲವಾಗಿ ನಂಬಿದ್ದರು ಎಂದರು.

2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಂ. ಅಣ್ಣಯ್ಯನವರ ಮಾತನಾಡಿ, ಗಾಂಧೀಜಿ ಅವರು ಹಲವಾರು ಚಳವಳಿಗಳ ಮೂಲಕ ಶಾಂತಿಯುತ ಹೋರಾಟ ಕಟ್ಟಿ, ಶಾಂತಿ ಮತ್ತು ಅಹಿಂಸಾ ಮಾರ್ಗಗಳ ಮೂಲಕ ಸ್ವಾತಂತ್ರ್ಯ ಸಾಧಿಸಿದ್ದು, ಜಗತ್ತಿನಲ್ಲಿಯೇ ಇತಿಹಾಸವಾಗಿದೆ ಎಂದರು.

ಜಿಲ್ಲಾ ನ್ಯಾಯಾಂಗದ ಮುಖ್ಯ ಆಡಳಿತಾಧಿಕಾರಿ ಬಿ.ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಗಾಂಧೀಜಿ ತಮ್ಮ ಬದುಕು ಹಾಗೂ ಚಿಂತನೆಗಳಲ್ಲಿ ನುಸುಳಿದ ಹಲವು ಬಗೆಯ ವೈರುಧ್ಯಗಳನ್ನು ಪರೀಕ್ಷೆಗೆ ಒಳಪಡಿಸಿಕೊಂಡ ಸ್ವಪರೀಕ್ಷಕ. ಆಳವಾಗಿ ಚಿಂತಿಸಿ, ಪ್ರಯೋಗ ಮಾಡಿದ ಪ್ರಯೋಗಶೀಲ ಎಂದು ಅಭಿಪ್ರಾಪಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ್, ಜಿಲ್ಲಾ ನ್ಯಾಯಾಧೀಶರಾದ ಆರ್.ಎನ್. ಪ್ರವೀಣ್‌ಕುಮಾರ್, ಶ್ರೀರಾಮ ನಾರಾಯಣ ಹೆಗಡೆ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಟಿ.ಎಂ.ನಿವೇದಿತಾ, ನ್ಯಾಯಾಧೀಶರಾದ ರೇಷ್ಮಾ, ನಾಗೇಶ್, ಅಮರ್, ಗಾಯತ್ರಿ, ಮಲ್ಲಿಕಾರ್ಜುನ್, ಪ್ರಶಾಂತ್, ಸಿದ್ದರಾಜ್, ನಾಝೀಯಾ ಕೌಸರ್, ವಕೀಲರ ಸಂಘದ ಕಾರ್ಯದರ್ಶಿ ಎಸ್.ಬಸವರಾಜ, ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಂ. ನೀಲಕಂಠಯ್ಯ, ಆರ್.ಭಾಗ್ಯಲಕ್ಷ್ಮೀ, ಎಂ.ರಾಘವೇಂದ್ರ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿ ಇದ್ದರು.

- - -

ಬಾಕ್ಸ್ * ತರ್ಕಬದ್ಧ ಹೋರಾಟ ಕಟ್ಟಿದ ಗಾಂಧಿ ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಮಾತನಾಡಿ, ಕಾನೂನು ಕಲಿತು ಸ್ಪಷ್ಟವಾಗಿ ಯೋಚಿಸಿದ, ನ್ಯಾಯಯುತ ಹೋರಾಟವನ್ನು ತರ್ಕಬದ್ಧವಾಗಿ ಕಟ್ಟಿದ, ಸತ್ಯ ಪ್ರತಿಪಾದನೆ ಮಾಡಿದವರು ಗಾಂಧೀಜಿ. ನ್ಯಾಯವಾದಿ, ಪತ್ರಕರ್ತ, ಬರಹಗಾರ, ತತ್ವಜ್ಞಾನಿಯಾಗಿ ನಮ್ಮೊಡನೆ ಅವರು ಇದ್ದಾರೆ. ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಒಂದು ದೇಶದ ಸ್ವಾತಂತ್ರ್ಯ ಹೋರಾಟವನ್ನು ಸಾಮಾಜಿಕ ಪರಿವರ್ತನೆ ಹೋರಾಟವನ್ನಾಗಿ ಪರಿವರ್ತಿಸಿ, ದೇಶದ ಮೂಲ ಕಾಯಿಲೆಗಳಾದ ಅಸ್ಪೃಶ್ಯತೆ, ಅಸಮಾನತೆ, ಮೂಲಭೂತವಾದ, ಕೋಮುವಾದಗಳನ್ನು ನಿವಾರಣೆ ಮಾಡಲು ಶ್ರಮಿಸಿದರು ಎಂದು ತಿಳಿಸಿದರು.

- - - -2ಕೆಡಿವಿಜಿ33ಃ:

ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಸೇವಾ ದಿವಸ್ ನಿಮಿತ್ತ ನಡೆದ ಶ್ರಮದಾನ ಕಾರ್ಯಕ್ರಮದಲ್ಲಿ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಇತರರು ಪಾಲ್ಗೊಂಡರು. -2ಕೆಡಿವಿಜಿ34:

ಕಾರ್ಯಕ್ರಮಕ್ಕೆ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಚಾಲನೆ ನೀಡಿದರು.