ಗಾಂಧಿಬಜಾರ್‌ ಮಲ್ಟಿಲೆವಲ್‌ ಕಾರ್‌ ಪಾರ್ಕಿಂಗ್‌ ಶೀಘ್ರವೇ ಜನಾರ್ಪಣೆ: ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌

| Published : Jul 26 2025, 01:30 AM IST

ಗಾಂಧಿಬಜಾರ್‌ ಮಲ್ಟಿಲೆವಲ್‌ ಕಾರ್‌ ಪಾರ್ಕಿಂಗ್‌ ಶೀಘ್ರವೇ ಜನಾರ್ಪಣೆ: ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌
Share this Article
  • FB
  • TW
  • Linkdin
  • Email

ಸಾರಾಂಶ

ಗಾಂಧಿ ಬಜಾರ್‌ನಲ್ಲಿ 22 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಮಲ್ಟಿಲೆವಲ್‌ ಕಾರ್‌ ಪಾರ್ಕಿಂಗ್‌ ಹಾಗೂ ವಾಣಿಜ್ಯ ಮಳಿಗೆಯ ಕಟ್ಟಡವನ್ನು ಸಾರ್ವಜನಿಕರ ಬಳಕೆಗೆ ನೀಡುವಂತೆ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗಾಂಧಿ ಬಜಾರ್‌ನಲ್ಲಿ 22 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಮಲ್ಟಿಲೆವಲ್‌ ಕಾರ್‌ ಪಾರ್ಕಿಂಗ್‌ ಹಾಗೂ ವಾಣಿಜ್ಯ ಮಳಿಗೆಯ ಕಟ್ಟಡವನ್ನು ಸಾರ್ವಜನಿಕರ ಬಳಕೆಗೆ ನೀಡುವಂತೆ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಸೂಚಿಸಿದ್ದಾರೆ.

ದಕ್ಷಿಣ ವಲಯದಲ್ಲಿ ಶುಕ್ರವಾರ ವಿವಿಧ ಕಡೆ ಪರಿಶೀಲನೆ ನಡೆಸಿದ ಅವರು, ಸ್ಮಾರ್ಟ್ ಸಿಟಿಯಡಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಾಮಗಾರಿ ಪೂರ್ಣಗೊಂಡಿದ್ದು. ಕಟ್ಟಡ ಉದ್ಘಾಟನೆಗೆ ಉಪ ಮುಖ್ಯಮಂತ್ರಿಯೊಂದಿಗೆ ಚರ್ಚೆ ಮಾಡಿ ದಿನಾಂಕ ನಿಗದಿ ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಟ್ಟಡ ತಳ ಹಾಗೂ ನೆಲ ಮಹಡಿಯಲ್ಲಿ ವ್ಯಾಪಾರಕ್ಕೆ 50 ಮಳಿಗೆಗಳನ್ನು ನಿರ್ಮಿಸಲಾಗಿದ್ದು, 1ನೇ ಮಹಡಿಯಿಂದ 4ನೇ ಮಹಡಿಯವರೆಗೆ ಕಾರು ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ತಲಾ ಒಂದು ಮಹಡಿಯಲ್ಲಿ 31 ವಾಹನದಂತೆ ಒಟ್ಟು 124 ವಾಹನ ನಿಲುಗಡೆ ಮಾಡಬಹುದು. ಕಟ್ಟಡದಲ್ಲಿ ಲಿಪ್ಟ್, 6 ಶೌಚಾಲಯ ಸೇರಿದಂತೆ ಮೊದಲಾದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಗಾಂಧಿ ಬಜಾರ್ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಈಗಾಗಲೇ ಗಡಿಗಳನ್ನು ನಿಗದಿಪಡಿಸಿದ್ದು, ಆ ಗಡಿಯಲ್ಲೇ ವ್ಯಾಪಾರ ಮಾಡಲು ಅವಕಾಶ ನೀಡಬೇಕು. ಹೆಚ್ಚುವರಿಯಾಗಿ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ಜತೆಗೆ ಪಾದಚಾರಿ ಮಾರ್ಗಗಳಲ್ಲಿ ಪಾರ್ಕಿಂಗ್ ಮಾಡುವುದನ್ನು ತಡೆಯಬೇಕು. ಇನ್ನು ಪ್ರಮುಖವಾಗಿ ಮಾರುಕಟ್ಟೆ ಆಕರ್ಷಕವಾಗಿ ಕಾಣಬೇಕಾದರೆ ಎಲ್ಲಾ ವ್ಯಾಪಾರಿಗಳಿಗೆ ಒಂದೇ ಮಾದರಿಯ ಛತ್ರಿಯನ್ನು ವಿನ್ಯಾಸಗೊಳಿಸಿ ಅದನ್ನು ವ್ಯಾಪಾರಿಗಳಿಗೆ ನೀಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಈ ವೇಳೆ ವಲಯ ಆಯುಕ್ತರಾದ ದಿಗ್ವಿಜಯ್ ಬೋಡ್ಕೆ, ಸ್ನೇಹಲ್, ಜಂಟಿ ಆಯುಕ್ತ ಡಾ. ಮಧು, ಉಪ ಆಯುಕ್ತೆ ಲಕ್ಷ್ಮಿ ದೇವಿ, ಮುಖ್ಯ ಎಂಜಿನಿಯರ್‌ ಬಸವರಾಜ್ ಕಬಾಡೆ, ಲೋಕೇಶ್, ಅಧೀಕ್ಷಕ ಎಂಜಿನಿಯರ್ ಹೇಮಲತಾ ಉಪಸ್ಥಿತರಿದ್ದರು.