ಸಾರಾಂಶ
- ಹರಿಹರ ತಾಲೂಕು ಕಚೇರಿ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ.ಹರೀಶ್ ಅಭಿಮತ - - - ಕನ್ನಡಪ್ರಭ ವಾರ್ತೆ ಹರಿಹರ
ಶಾಂತಿ, ಅಹಿಂಸೆ ಪಾಲನೆ ಹೋರಾಟದಿಂದಲೇ ದೇಶಕ್ಕೆ ಸ್ವಾತಂತ್ರ್ಯ ಸಿಗಬಹುದು ಎಂದು ವಿಶ್ವಕ್ಕೇ ತಿಳಿಸಿಕೊಟ್ಟ ಮಹಾನ್ ವ್ಯಕ್ತಿ ಮಹಾತ್ಮ ಗಾಂಧೀಜಿ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಮಹಾತ್ಮ ಗಾಂಧಿ ಅವರ 155ನೇ ಜನ್ಮ ದಿನಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 120ನೇ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಬಳಿಕ ಮಾತನಾಡಿದರು.
ಶಾಂತಿ ಮತ್ತು ಅಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ತ್ಯಾಗ- ಬಲಿದಾನಗಳನ್ನು ಭಾರತೀಯರು ನಿತ್ಯ ಸ್ಮರಿಸಬೇಕಿದೆ. ಮಹಾತ್ಮ ಗಾಂಧಿ ಅವರ ಗುಡಿಸಲುಮುಕ್ತ ಹಾಗೂ ಸ್ವಚ್ಛ ಭಾರತದ ಕಲ್ಪನೆ ಬಹುತೇಕ ಈಡೇರಿದೆ ಎಂದರು.ಸ್ವಾತಂತ್ರ್ಯಪೂರ್ವದಲ್ಲಿ ದೇಶ ಆರ್ಥಿಕವಾಗಿ ಹಿಂದುಳಿದಿತ್ತು. ಬಹುತೇಕ ಗ್ರಾಮಗಳು ಗುಡಿಸಲಿನಿಂದ ಹಾಗೂ ನಗರ ಪ್ರದೇಶಗಳು ಕೊಳಚೆಯಿಂದ ಕೂಡಿದ್ದವು. ಪ್ರಸ್ತುತ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಗುಡಿಸಲುಗಳು ಶೇ.95ರಷ್ಟು ಕಡಿಮೆ ಆಗಿವೆ. ಪ್ರಧಾನಿ ಕರೆ ಮೇರೆಗೆ ದೇಶಾದ್ಯಂತ ಸೆ.14ರಿಂದ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ ಎಂದರು.
ಪ್ರಸ್ತುತ ದೇಶ ಆರ್ಥಿಕವಾಗಿ ಸದೃಢವಾಗಿದ್ದು, ಅಭಿವೃದ್ಧಿ ಕಡೆ ಹೆಜ್ಜೆ ಹಾಕುತ್ತಿದೆ. ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ಜ್ಞಾಪಕಾರ್ಥ ದೇಶದ ಸುಮಾರು 100 ನಗರಗಳಲ್ಲಿ ಅಮೃತ ಯೋಜನೆಯಡಿ ವಿವಿಧ ಕಾರ್ಯಕ್ರಮಗಳನ್ನು ಪ್ರಧಾನಮಂತ್ರಿಗಳು ವರ್ಚುವಲ್ ಉದ್ಘಾಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದರಲ್ಲಿ ತಾಲೂಕಿನ ಮಲೇಬೆನ್ನೂರು ಸೇರಿದೆ ಎಂದು ಹರ್ಷ ವ್ಯಕ್ತಪಡಿಸಿದರು.ತಹಸೀಲ್ದಾರ್ ಗುರು ಬಸವರಾಜ್ ಮಾತನಾಡಿ, ಯಾವುದೇ ಯುದ್ಧ ಸಲಕರಣೆ ಇಲ್ಲದೇ ಇರುವ ಕಾಲದಲ್ಲಿ ಮಾನವ ಸಂಪನ್ಮೂಲವನ್ನು ಬಳಸಿ, ಸ್ವಾತಂತ್ರ್ಯ ಸಿಗುವಂತೆ ಮಾಡಿದ್ದು ಗಾಂಧೀಜಿ ಅವರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶ ಹಾಗೂ ಪ್ರಪಂಚ ಕಂಡ ಅಪ್ಪಟ ದೇಶಭಕ್ತ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಅವರ ಬ್ಯಾಂಕ್ ಖಾತೆಯಲ್ಲಿ ನಿಗದಿತ ಹಣ ಕೂಡ ಇರುತ್ತಿರಲಿಲ್ಲ. ಎಲ್ಲೋ ರೈಲು ದುರಂತವಾದರೆ, ಅದರ ನೈತಿಕ ಹೊಣೆ ಹೊತ್ತು ತಕ್ಷಣ ರಾಜಿನಾಮೆ ಸಲ್ಲಿಸಿದ ಮಹಾನ್ ವ್ಯಕ್ತಿಯಾಗಿದ್ದರು ಎಂದರು.
ತಾಪಂ ಇಒ ಸುಮಲತಾ, ಬಿಇಒ ದುರುಗಪ್ಪ ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ತಾಲೂಕು ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು.- - -
ಕೋಟ್ ದೇಶದ ಜನತೆ ಹಸಿವಿನಿಂದ ಬಳಲುತ್ತಿದ್ದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಎಂಬ ಮೂಲಮಂತ್ರ ಪಠಿಸಿ ರೈತರ ಬಲವರ್ಧನೆಗೆ ಮುಂದಾದರು. ಪ್ರತಿಯೊಬ್ಬರೂ ಸೋಮವಾರ ಒಪ್ಪತ್ತಿನ ಊಟ ಬಿಡಲು ಕರೆ ನೀಡಿದ್ದರು. ಅದನ್ನು ಅಂದು ದೇಶದ ಜನತೆ ಒಪ್ಪಿ ಪಾಲಿಸಿದರು. ಆದರೆ, ಇಂದಿನ ಕಾಲದಲ್ಲಿ ಸಭೆ- ಸಮಾರಂಭಗಳಲ್ಲಿ ಬೇಕಾಬಿಟ್ಟಿಯಾಗಿ ಆಹಾರ ಹಾಳು ಮಾಡೋದು ಕಾಣುತ್ತಿದ್ದೇವೆ- ಗುರು ಬಸವರಾಜ್, ತಹಸೀಲ್ದಾರ್
- - - -2ಎಚ್‍ಆರ್‍ಆರ್1:ಹರಿಹರದ ತಾಲೂಕು ಕಚೇರಿಯಲ್ಲಿ ಗಾಂಧೀಜಿ- ಶಾಸ್ತ್ರೀಜಿ ಜಯಂತಿ ಅಂಗವಾಗಿ ಶಾಸಕ ಬಿ.ಪಿ. ಹರೀಶ್ ಅವರು ಗಣ್ಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದರು. ತಹಸೀಲ್ದಾರ್ ಗುರು ಬಸವರಾಜ್, ತಾಪಂ ಇಒ ಸುಮಲತಾ, ಬಿಇಒ ದುರುಗಪ್ಪ ಇತರರು ಇದ್ದರು.