ಸಾರಾಂಶ
ಕನ್ನಡಪ್ರಭಾ ವಾರ್ತೆ ಯಾದಗಿರಿ
ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಸಮಗ್ರ ಅಭಿವೃದ್ಧಿ ಕನಸನ್ನು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಕಂಡಿದ್ದರು ಎಂದು ಜಿಲ್ಲಾಧಿಕಾರಿ ಡಾ.ಬಿ. ಸುಶೀಲಾ ಹೇಳಿದರು.ನಗರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಬುಧವಾರ ನಡೆದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸತ್ಯ, ಅಂಹಿಸೆ, ಶಾಂತಿ ಗಾಂಧೀಜಿ ಅವರ ಮೂಲಮಂತ್ರಗಳಾಗಿದ್ದವು. ಗ್ರಾಮ ಸ್ವರಾಜ್ಯದ ಕನಸನ್ನು ಕಂಡಿದ್ದರು. ಅವರ ತತ್ವಾದರ್ಶಗಳು ಯುವ ಜನಾಂಗಕ್ಕೆ ಮಾದರಿಯಾಗಿದ್ದು, ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.
ಪ್ರಾಂಶುಪಾಲರಾದ ಡಾ. ಸುಭಾಶ್ಚಂದ್ರ ಕೌಲಗಿ ಅವರು ವಿಶೇಷ ಉಪನ್ಯಾಸ ನೀಡಿ, ಸೂರ್ಯ, ಚಂದ್ರರು ಇರುವ ತನಕ ಗಾಂಧೀಜಿ ಹೆಸರು ಅಮರವಾಗಿರುತ್ತದೆ. ಅವರ ಬದುಕು ಮತ್ತು ಹೋರಾಟಗಳ ಮಗ್ಗಲುಗಳನ್ನು ಎಲ್ಲರೂ ಅರಿಯಬೇಕು. ಅವರ ಜೀವನವೇ ಎಲ್ಲರಿಗೂ ದಾರಿದೀಪವಾಗಿದೆ. ಸತ್ಯ ಹರಿಶ್ಚಂದ್ರ ಹಾಗೂ ಶ್ರವಣಕುಮಾರ ಜೀವನದಿಂದ ಪ್ರೇರಿತರಾಗಿದ್ದ ಅವರು ಭಾರತ ವನ್ನು ಎರಡುನೂರು ವರ್ಷವಾಳಿದ, ಎಂದೂ ಸೂರ್ಯ ಮುಳುಗದ ಸಾಮ್ರಾಜ್ಯ ಎನ್ನುತ್ತಿದ್ದ ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಲು ಅದೂ ಅಹಿಂಸಾ ಮಾರ್ಗಗಳ ಹೋರಾಟದಿಂದ ತೊಲಗಿಸಲು ಕಾರಣೀಕರ್ತರಾದ ಮಹಾನ್ ಚೇತನ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಜೈನ್ ಸಮುದಾಯದಿಂದ ಬಾಬು ದೋಖಾ, ಹಿಂದೂ ಸಮುದಾಯದಿಂದ ಹಿರೇಮಠ, ಮುಸ್ಲಿಂ ಸಮುದಾಯದಿಂದ ಮೌಲಾನಾ ಚಾಂದ್ ಪಾಷಾ, ಕ್ರಿಶ್ಚಿಯನ್ ಸಮುದಾಯದಿಂದ ಫಾದರ್ ಆನಂದ್ ಅವರು ಪ್ರಾರ್ಥಿಸಿದರು. ಚಂದ್ರಶೇಖರ ಗೋಗಿ ಅವರು ಗಾಂಧಿ ಪ್ರೀಯ ಗೀತೆಗಳು, ಭಜನೆಗಳನ್ನು ಹಾಡಿದರು.
ಬಾಪೂಜಿ ಕುರಿತು ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢ ಶಾಲಾ ವಿಭಾಗ, ಕಾಲೇಜು ವಿಭಾಗ, ಪದವಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ಹಾಗೂ ನಗದು ವಿತರಿಸಲಾಯಿತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಪಾಟೀಲ್, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಇತರರಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುಲೈಮಾನ್ ನದಾಫ ಸ್ವಾಗತಿಸಿದರು. ದುರ್ಗಪ್ಪ ಪೂಜಾರಿ ವಂದಿಸಿದರು.ಶ್ರಮದಾನ, ಸ್ವಚ್ಛತಾ ನಡಿಗೆ:
ಮಹಾತ್ಮಾ ಗಾಂಧೀಜಿ ಜಯಂತಿ ಅಂಗವಾಗಿ ಶ್ರಮದಾನ, ಸ್ವಚ್ಛತಾ ನಡಿಗೆ ಹಮ್ಮಿಕೊಳ್ಳಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳು ಸೂಚಿಸಿದ್ದರ ಹಿನ್ನೆಲೆ ಶ್ರಮದಾನ ಮತ್ತು ಸ್ವಚ್ಛತಾ ನಡಿಗೆ ಜಿಲ್ಲಾಧಿಕಾರಿ ಡಾ.ಸುಶೀಲಾ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು. ಜಿಲ್ಲಾಡಳಿತ ಭವನದ ಆವರಣದಲ್ಲಿ ಶ್ರಮದಾನ ಸುಭಾಷ್ ಸರ್ಕಲ್, ಶಾಸ್ತ್ರಿ ವೃತ್ತ ದವರೆಗೆ ಸ್ವಚ್ಛತಾ ನಡಿಗೆ ಹಮ್ಮಿಕೊಳ್ಳಲಾಯಿತು. ಅಂಬೇಡ್ಕರ್ ಸರ್ಕಲ್ ದಲ್ಲಿ ಡಾ. ಅಂಬೇಡ್ಕರ್ ಮೂರ್ತಿಗೆ ಹಾಗೂ ಗಾಂಧಿ ವೃತ್ತದಲ್ಲಿನ ಗಾಂಧಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.