ಗಾಂಧೀಜಿ ಜಗತ್ತು ಕಂಡ ಆದರ್ಶ ವ್ಯಕ್ತಿ

| Published : Oct 07 2025, 01:02 AM IST

ಸಾರಾಂಶ

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಜಗತ್ತು ಕಂಡ ಆದರ್ಶ ವ್ಯಕ್ತಿ

ಕನ್ನಡಪ್ರಭ ವಾರ್ತೆ ತಿಪಟೂರು

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಜಗತ್ತು ಕಂಡ ಆದರ್ಶ ವ್ಯಕ್ತಿಯಾಗಿದ್ದು ಇಂತಹ ಮಹಾನ್ ನಾಯಕರ ಜೀವನಾದರ್ಶಗಳನ್ನು ಯುವ ಪೀಳಿಗೆಗೆ ಮೈಗೂಡಿಸಿಕೊಂಡು ದೇಶಕ್ಕಾಗಿ ಶ್ರಮಿಸಬೇಕಿದೆ ಎಂದು ತಾಲೂಕು ಸರ್ವೋದಯ ಮಂಡಲ ಅಧ್ಯಕ್ಷೆ ಹಾಗೂ ವಕೀಲರಾದ ಶೋಭಾ ಜಯದೇವ್ ತಿಳಿಸಿದರು. ತಾಲೂಕಿನ ತಡಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗದಹಳ್ಳಿಯಲ್ಲಿ ಸರ್ವೋದಯ ಮಂಡಲ ವತಿಯಿಂದ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಾಂಧಿ ಒಬ್ಬ ವ್ಯಕ್ತಿಯಲ್ಲ ಶಕ್ತಿ. ಇಪ್ಪತ್ತನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಚದುರಿದಂತೆ ಸ್ವಂತ ಸಾಮ್ರಾಜ್ಯಗಳ ಉಳಿವಿಗಾಗಿ ಸ್ವತಂತ್ರ ರಾಜರ ಹೋರಾಟ ನಡೆಯುತ್ತಿತ್ತು. ಆ ಕಾಲಘಟ್ಟದಲ್ಲಿ ಗಾಂಧೀಜಿ ಅಖಂಡ ಭಾರತದ ಪರಿಕಲ್ಪನೆಯಲ್ಲಿ ರಾಷ್ಟ್ರೀಯ ಮನೋಭಾವವನ್ನು ದೇಶದಾದ್ಯಂತ ಜನಮನದಲ್ಲಿ ಮೂಡಿಸಿ, ಸತ್ಯ, ಅಹಿಂಸೆ, ಅಸಹಕಾರ, ಉಪವಾಸ ತಂತ್ರಗಳನ್ನೇ ಆಯುಧಗಳನ್ನಾಗಿ ಬಳಸಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ರೂಪ ನೀಡಿ ಯಶಸ್ವಿಯಾದರು ಮಹಾತ್ಮ ಗಾಂಧೀಜಿ. ಆದರೆ ದುರದೃಷ್ಟವಶಾತ್ ಸ್ವಾತಂತ್ರ್ಯ ನಂತರ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವಿಷಾದಿಸಿದರು. ನಿಕಟ ಪೂರ್ವ ಅಧ್ಯಕ್ಷ ಡಿ.ಎಸ್.ಮರುಳಪ್ಪನವರು ಗಾಂಧಿ ಆರಂಭದ ಕಾಲದಲ್ಲಿ ವರ್ಣ ವ್ಯವಸ್ಥೆ, ಜಾತಿಪದ್ಧತಿಗಳ ಪರವಾಗಿದ್ದರೂ ನಾಡಿನಾದ್ಯಂತ ಸಂಚರಿಸಿ ಪಡೆದ ಅನುಭವಗಳಿಂದಾಗಿ ಜಾತ್ಯತೀತ ಭಾರತದ ಕನಸಿನೊಂದಿಗೆ ಹರಿಜನ ಸೇವೆಗೆ ತೊಡಗಿಸಿಕೊಂಡದ್ದು ಕ್ರಾಂತಿಕಾರಕ ಬದಲಾವಣೆ ಎಂದರು. ಗಾಂಧಿವಾದಿ ನಿರಂಜನಮೂರ್ತಿ ಮಾತನಾಡಿ ನಮ್ಮ ಇಡೀ ಕುಟುಂಬವೇ ಗಾಂಧಿಯವರ ತತ್ವಾದರ್ಶಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿತ್ತು. ಟಿ.ಎ. ದಾಸಪ್ಪನವರು ನಮ್ಮ ಮನೆಯ ಸದಸ್ಯರಲ್ಲೊಬ್ಬರಾಗಿದ್ದು, ಮಾರನಗೆರೆ ಎಂ.ಆರ್.ರಂಗಪ್ಪನವರೊಂದಿಗೆ ಅತಿನಿಕಟ ಸೋದರ ಸಂಬಂಧ ಹೊಂದಿದ್ದರು. ಹುತಾತ್ಮ ಮಾರನಗೆರೆ ಸಿದ್ದಪ್ಪ, ಸದಾಶಿವಪ್ಪ ಸೇರಿದಂತೆ ಮಾರನಗೆರೆಯ ಬಹುತೇಕ ಕುಟುಂಬಗಳು ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಎಂ.ರಾಜಣ್ಣ ಮಾತನಾಡಿ ಇಂದು ಗಾಂಧಿ ಅಪಹಾಸ್ಯದ, ಗೇಲಿಯ ಮಾತುಗಳಿಗೆ ಉದಾಹರಣೆಯಾಗುತ್ತಿದ್ದು, ದೇಶದ ಎಲ್ಲ ಸಮಸ್ಯೆಗಳಿಗೆ ಗಾಂಧಿಯೇ ಕಾರಣಕರ್ತ ಎಂಬ ಧೋರಣೆ ಹೆಚ್ಚಾಗಿ ಎಲ್ಲರ ತಿರಸ್ಕಾರಕ್ಕೆ ಒಳಗಾಗುತ್ತಿದ್ದಾರೆ. ಗೋಡ್ಸೆ ಮನಸ್ಸುಗಳಿಂದಾಗಿ ಭಾರತ ವಿಘಟನೆಯತ್ತ ಚಲಿಸುತ್ತಿರುವುದು ಆತಂಕಕಾರಿಯಾಗಿದೆ. ಎಲ್ಲೋ ನಡೆದ ರೈಲು ದುರಂತಕ್ಕೆ ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಿದ ರೈಲ್ವೆ ಮಂತ್ರಿ ಶಾಸ್ತ್ರಿ ಇಂದಿನ ಅಧಿಕಾರಸ್ಥ ರಾಜಕಾರಣಿಗಳಿಗೆ ಆದರ್ಶರಾಗಬೇಕಿದೆ ಎಂದರು. ಈ ಸಂದರ್ಭದಲ್ಲಿ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ಗಾಂಧಿವಾದಿ ನಿರಂಜನ ಮೂರ್ತಿರನ್ನು ಆತ್ಮೀಯವಾಗಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಸಾಪ ಕಾರ್ಯದರ್ಶಿ ಹೆಚ್.ಎಸ್. ಮಂಜಪ್ಪ, ಸಾಮಾಜಿಕ ಕಾರ್ಯಕರ್ತ ಟಿ.ಸಿ.ಗೋವಿಂದರಾಜು, ಸರ್ವೋದಯ ಮಂಡಲದ ಪ್ರಧಾನ ಕಾರ್ಯದರ್ಶಿ ಓಂಕಾರಮೂರ್ತಿ, ಸರ್ವೋದಯ ಬಂಧುಗಳಾದ ಜಯದೇವ್, ಪ್ರಸನ್ನಕುಮಾರ್, ಮಲ್ಲಿಕಾರ್ಜುನ್, ಚಂದ್ರರಾಜೇ ಅರಸು, ಬಸವರಾಜು, ವಸಂತಮ್ಮ ವೀರಬಸಪ್ಪ, ಶಕುಂತಲಮ್ಮ, ಪೂರ್ಣಿಮ ಮತ್ತಿತರರಿದ್ದರು.