ಗಾಂಧೀಜಿ, ಶಾಸ್ತ್ರೀಜಿ ಸಿದ್ಧಾಂತ, ಮೌಲ್ಯ ಪಾಲಿಸಿ: ಶಾಸಕ ಸ್ವರೂಪ್ ಪ್ರಕಾಶ್

| Published : Oct 03 2024, 01:26 AM IST

ಗಾಂಧೀಜಿ, ಶಾಸ್ತ್ರೀಜಿ ಸಿದ್ಧಾಂತ, ಮೌಲ್ಯ ಪಾಲಿಸಿ: ಶಾಸಕ ಸ್ವರೂಪ್ ಪ್ರಕಾಶ್
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆಯನ್ನು ಹಿಂದೂ ಧರ್ಮ ಕುರಿತು ವಿ.ವಿ ಭಟ್, ಮುಸ್ಲಿಂ ಧರ್ಮ ಕುರಿತು ಜನಾಬ್ ಮೌಲಾನ ಹಭೀಬುಲ್ಲ, ಕ್ರಿಶ್ಚಿಯನ್ ಧರ್ಮ ಕುರಿತು ವಿನೀಶ್ ಸ್ವರೂಪ್, ಬೌದ್ಧ ಧರ್ಮ ಕುರಿತು ಬಸವರಾಜ್, ಜೈನ್ ಧರ್ಮ ಕುರಿತು ಪದ್ಮಶ್ರೀ ಅವರು ಪ್ರವಚನ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲಾಡಳಿತದ ಸಹಯೋಗದಲ್ಲಿ ನಗರದ ಎಂ.ಜಿ. ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನ ಮಂತ್ರಿಗಳಾದ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮ ದಿನಾಚರಣೆಯನ್ನು ಬುಧವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಗಣ್ಯರೆಲ್ಲರೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಭಾವಚಿತ್ರಕ್ಕೆ ಪೂಜೆ ಮೂಲಕ ನಮನ ಸಲ್ಲಿಸಿದಲ್ಲದೇ ಗಾಂಧೀಜಿ ಕುರಿತು ಕೆಲ ಸಮಯ ಭಜನೆ ಹಾಡಲಾಯಿತು. ಕೇಂದ್ರೀಯ ಶಾಲಾ ಮಕ್ಕಳು ಗಾಂಧೀಜಿ ಅವರ ಜನಪ್ರಿಯ ಗೀತೆಗಳನ್ನು ಹಾಡುವ ಮೂಲಕ ಭಜನ ಕಾರ್ಯಕ್ರಮ ನಡೆಸಿಕೊಟ್ಟರು.

ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಾಂಧೀಜಿಯವರ ಸಿದ್ಧಾಂತ, ಮೌಲ್ಯಗಳನ್ನು ಎಲ್ಲರೂ ಪಾಲಿಸಬೇಕು. ಅಹಿಂಸೆ, ಸತ್ಯತೆಯನ್ನು ಎಲ್ಲಾ ಜನಾಂಗದವರು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಹಿಂಸೆಗೆ ಪೂರ್ಣ ವಿರಾಮ ಹಾಕಿ ಅಹಿಂಸಾತ್ಮಕ ಹಾಗೂ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಗಾಂಧೀಜಿಯವರು ಕರೆ ನೀಡಿದ್ದಾರೆ. ಆದರೆ ಅವರ ಆದರ್ಶಗಳು ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿವೆ. ಆದುದರಿಂದ ಎಲ್ಲರೂ ಗಾಂಧೀಜಿ ಅವರ ಮಾರ್ಗದರ್ಶನದಲ್ಲಿ ನಡೆಯುವ ಅಗತ್ಯವಿದೆ ಎಂದರು. ಎಲ್ಲಾ ಧರ್ಮಗಳ ಧರ್ಮಗುರುಗಳು ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ, ತಮ್ಮ ಧರ್ಮಗಳ ಸಾರವನ್ನು ಬಿತ್ತುವ ಮೂಲಕ ಅಹಿಂಸೆ, ಸತ್ಯವನ್ನು ಎತ್ತಿ ಹಿಡಿದಿದ್ದಾರೆ. ಸಣ್ಣ ಪುಟ್ಟ ವಿಚಾರಗಳಿಗೆ ಜಗಳ, ಹಿಂಸೆಗಳನ್ನು ಮಾಡದೆ ಎಲ್ಲರೂ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಗಾಂಧೀಜಿಯವರು ತೋರಿದ ಹಾದಿಯಂತೆ ಸರ್ವ ಜನಾಂಗದವರು ಸಹೋದರ- ಸಹೋದರಿಯರು ಸಹಬಾಳ್ವೆಯಿಂದ ಇರಬೇಕು, ಗಾಂಧೀಜಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡಬೇಕು ಎಂದ ಅವರು, ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ:

ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲೆ, ಪದವಿಪೂರ್ವ, ಪದವಿ /ಸ್ನಾತ್ತಕೋತ್ತರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಗಮನ ಸೆಳೆದ ಗಾಂಧಿ ವೇಷಧಾರಿಗಳು:

ಪುಟಾಣಿ ಮಕ್ಕಳು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರೀಜಿಯವರ ವೇಷಧಾರಿಗಳಾಗಿ ಆಗಮಿಸಿ ಸಾರ್ವಜನಿಕರ ಗಮನ ಸೆಳೆದರು. ಮೆಚ್ಚುಗೆ ಪಡೆದ ವೇಷದಾರಿಗಳಿಗೆ ಬಹುಮಾನ ನೀಡಲಾಯಿತು.

ಶ್ರಮದಾನ:

ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಶ್ರಮದಾನ ಹಮ್ಮಿಕೊಳ್ಳಲಾಗಿತ್ತು. ಡೈರಿ ವೃತ್ತದಿಂದ ಎನ್.ಆರ್ ವೃತ್ತದವರೆಗೆ ಸಚ್ಛತಾ ಕಾರ್ಯ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆಯನ್ನು ಹಿಂದೂ ಧರ್ಮ ಕುರಿತು ವಿ.ವಿ ಭಟ್, ಮುಸ್ಲಿಂ ಧರ್ಮ ಕುರಿತು ಜನಾಬ್ ಮೌಲಾನ ಹಭೀಬುಲ್ಲ, ಕ್ರಿಶ್ಚಿಯನ್ ಧರ್ಮ ಕುರಿತು ವಿನೀಶ್ ಸ್ವರೂಪ್, ಬೌದ್ಧ ಧರ್ಮ ಕುರಿತು ಬಸವರಾಜ್, ಜೈನ್ ಧರ್ಮ ಕುರಿತು ಪದ್ಮಶ್ರೀ ಅವರು ಪ್ರವಚನ ನೀಡಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ, ನಗರಸಭೆಯ ಅಧ್ಯಕ್ಷ ಎಂ. ಚಂದ್ರೇಗೌಡ, ಪೌರಾಯುಕ್ತರಾದ ನರಸಿಂಹ ಮೂರ್ತಿ, ಜಿಲ್ಲಾಧಿಕಾರಿ ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್ ಪೂರ್ಣಿಮಾ, ಉಪವಿಭಾಗಾಧಿಕಾರಿ ಮಾರುತಿ, ರಾಜ್ಯ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಈ ಕೃಷ್ಣೇಗೌಡ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಮೀನಾಕ್ಷಮ್ಮ ಸ್ವಾಗತಿಸಿದರು. ಯದೀಶ್ ನಿರೂಪಿಸಿ ವಂದಿಸಿದರು.