ವಿಜ್ಞಾನಿಗಳದ್ದು ವೈಜ್ಞಾನಿಕ ಸಾಧನೆ, ತಂತ್ರಜ್ಞಾನಿಗಳದ್ದು ತಾಂತ್ರಿಕ ಸಾಧನೆ, ಸತ್ಪುರುಷರದು ಸಾಮಾಜಿಕ ಸಾಧನೆ. ಆದರ್ಶದ ಹಾದಿಯಲ್ಲಿ ಬದುಕಿ ಕಣ್ಣಲ್ಲಿ ನೀರು ತರಿಸುವಂತಹ ಮಾದರಿ ಜೀವನ ನಡೆಸಿದವರಲ್ಲಿ ಬದುಕಿನ ಧನ್ಯತೆ ಅಡಗಿದೆ.

ಹಾವೇರಿ:ವಿಜ್ಞಾನಿಗಳದ್ದು ವೈಜ್ಞಾನಿಕ ಸಾಧನೆ, ತಂತ್ರಜ್ಞಾನಿಗಳದ್ದು ತಾಂತ್ರಿಕ ಸಾಧನೆ, ಸತ್ಪುರುಷರದು ಸಾಮಾಜಿಕ ಸಾಧನೆ. ಆದರ್ಶದ ಹಾದಿಯಲ್ಲಿ ಬದುಕಿ ಕಣ್ಣಲ್ಲಿ ನೀರು ತರಿಸುವಂತಹ ಮಾದರಿ ಜೀವನ ನಡೆಸಿದವರಲ್ಲಿ ಬದುಕಿನ ಧನ್ಯತೆ ಅಡಗಿದೆ. ತಮ್ಮ ವ್ಯಕ್ತಿತ್ವವನ್ನೇ ಆಯುಧವನ್ನಾಗಿಸಿಕೊಂಡು ಸ್ವಾತಂತ್ರ್ಯ ಹಾಗೂ ಸಮಗ್ರತೆಗಾಗಿ ಶ್ರಮಿಸಿದ ಮಹಾತ್ಮ ಗಾಂಧೀಜಿ ಮತ್ತು ಪ್ರಾಮಾಣಿಕ ಸ್ವಭಾವದಿಂದ ಸಾಮರಸ್ಯದ ಭಾರತವನ್ನು ಮುನ್ನಡೆಸಿದ ಲಾಲ್ ಬಹಾದ್ದೂರ್ ಶಾಸ್ತ್ರಿ ಸದಾ ಸ್ಮರಣೀಯರು ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.

ನಗರದ ಬಸವಕೇಂದ್ರ ಹೊಸಮಠದಲ್ಲಿ ಶುಕ್ರವಾರ ಸಂಜೆ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಪಣೆ ಸಲ್ಲಿಸಿ ಅವರು ಮಾತನಾಡಿದರು.

ಗಾಂಧೀಜಿ ಹಾಗೂ ಶಾಸ್ತ್ರೀಜಿ ಸಂಘರ್ಷವನ್ನು ಅಲ್ಲಗಳೆದು ಬಹುತ್ವದ ಆಶಯವನ್ನು ಸಾರಿದರು. ಲೋಕನಿಂದನೆಗೆ ಅಂಜದೆ ತಮ್ಮ ತತ್ವ ಹಾಗೂ ಆದರ್ಶಗಳಿಗೆ ಬದ್ಧರಾಗಿ ಬದುಕಿದರು. ಅಧಿಕಾರದಲ್ಲಿದ್ದರೂ ಯಾವುದೇ ಕಪ್ಪ್ಪು ಚುಕ್ಕೆ ಇಲ್ಲದಂತೆ ಬದುಕಿದ ಶಾಸ್ತ್ರಿ ಅವರ ಜೀವನ ಮಾದರಿಯಾಗಿದೆ. ಹಾವೇರಿ ನೆಲದೊಂದಿಗೆ ನಂಟು ಹೊಂದಿದ್ದ ಗಾಂಧೀಜಿ ಅವರ ಆದರ್ಶಗಳು ಸಾರ್ವಕಾಲಿಕ ಶ್ರೇಷ್ಠತೆಯನ್ನು ಉಳಿಸಿಕೊಂಡಿವೆ ಎಂದರು.

ಹಿರಿಯ ಸಾಹಿತಿ ಡಾ. ಸತೀಶ ಕುಲಕರ್ಣಿ ಮಾತನಾಡಿ, ಅಧಿಕಾರ ಇಲ್ಲದಿದ್ದರೂ ದೇಶವನ್ನು ಮುನ್ನಡೆಸುವ ಮಾರ್ಗವನ್ನು ಗಾಂಧೀಜಿ ತೋರಿಸಿಕೊಟ್ಟರು. ಅಧಿಕಾರದಲ್ಲಿದ್ದರೂ ಅಧಿಕಾರದ ಅಹಂ ಇಲ್ಲದಂತೆ ಬದುಕಿದ ಶಾಸ್ತ್ರೀಜಿ ಅವರದ್ದು ಮಾದರಿ ವ್ಯಕ್ತಿತ್ವ ಎಂದರು.

ಹಿರಿಯ ಪತ್ರಕರ್ತ ಗುರುದತ್ತ ಭಟ್ ಮಾತನಾಡಿ, ಬುದ್ಧ, ಬಸವ, ಮಹಾವೀರರಂತಹ ದಾರ್ಶನಿಕರ ಹಾದಿಯಲ್ಲಿ ಸಾಗಿದ ಗಾಂಧೀಜಿ ಅವರನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಐದು ಬಾರಿ ನೊಬೆಲ್ ಪ್ರಶಸ್ತಿಗೆ ಗಾಂಧೀಜಿ ಅವರ ಹೆಸರು ಶಿಫಾರಸಾಗಿರುವುದು ಅವರ ವ್ಯಕ್ತಿತ್ವದ ಮಹತ್ವವನ್ನು ತೋರಿಸುತ್ತದೆ ಎಂದರು.

ಕಥೆಗಾರ ಲಿಂಗರಾಜ ಸೊಟ್ಟಪ್ಪನವರ ಅವರು ಲಾಲ್ ಬಹಾದ್ದೂರ್ ಶಾಸ್ತ್ರಿ ಕುರಿತು, ಕವಿ ನಾಗರಾಜ ಹುಡೇದ ಗಾಂಧೀಜಿ ವ್ಯಕ್ತಿತ್ವ ಕುರಿತು ಹಾಗೂ ಮಾಜಿ ಸೈನಿಕ ಬಸವರಾಜ ಬಳ್ಳಾರಿ `ಜೈ ಜವಾನ್, ಜೈ ಕಿಸಾನ್'''''''' ಘೋಷಣೆಯ ಮಹತ್ವ ಕುರಿತು ಮಾತನಾಡಿದರು.

ಮಮತಾ ನಂದಿಹಳ್ಳಿ ಹಾಗೂ ಲಕ್ಕಣ್ಣನವರ ಸೋದರಿಯರು ವಚನ ಗಾಯನ ಪ್ರಸ್ತುತಪಡಿಸಿದರು. ಎಂ.ಎಫ್. ಕುಸಗೂರ, ಉಡಚಪ್ಪ ಮಾಳಗಿ, ಮಂಜುನಾಥ ಸಣ್ಣಿಂಗಣ್ಣನವರ, ಅನಸೂಯಾ ಮೈಲಾರ, ಜ್ಯೋತಿ ಬಶೆಟ್ಟಿ ಸೇರಿದಂತೆ ಅಕ್ಕನ ಬಳಗದವರು ಉಪಸ್ಥಿತರಿದ್ದರು. ಗೂಳಪ್ಪ ಅರಳಿಕಟ್ಟಿ ನಿರೂಪಿಸಿದರು. ನಿಂಗಪ್ಪ ಆರೇರ ಸ್ವಾಗತಿಸಿದರು. ಜಿ.ಎಂ. ಓಂಕಾರಣ್ಣನವರ ವಂದಿಸಿದರು.