ಕುಷ್ಟಗಿ ಪಟ್ಟಣದ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಅವರ ನಿವಾಸದಲ್ಲಿರುವ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶುಕ್ರವಾರ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ನಡೆಯಿತು.
ಕುಷ್ಟಗಿ: ಸತ್ಯ, ಅಹಿಂಸೆ, ಸರಳತೆ ಹಾಗೂ ಪ್ರಾಮಾಣಿಕತೆಯ ಮೌಲ್ಯಗಳನ್ನು ಬದುಕಿನುದ್ದಕ್ಕೂ ಪಾಲಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಆದರ್ಶಗಳು ಇಂದಿನ ಯುವಜನತೆಗೆ ದಾರಿದೀಪವಾಗಿವೆ ಎಂದು ಕಾಂಗ್ರೆಸ್ ಮುಖಂಡ ಲಾಡ್ಲೇಮಷಾಕ ದೋಟಿಹಾಳ ಹೇಳಿದರು.
ಪಟ್ಟಣದ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಅವರ ನಿವಾಸದಲ್ಲಿರುವ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿಯಲ್ಲಿ ಅವರು ಮಾತನಾಡಿದರು.ಗಾಂಧೀಜಿ ಅವರು ಸತ್ಯ ಮತ್ತು ಅಹಿಂಸೆಯ ಮಾರ್ಗದ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಶಕ್ತಿ ತುಂಬಿದರು. ಹಿಂಸೆ ಮಾರ್ಗ ಅನುಸರಿಸದೆ, ಜನರನ್ನು ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ಹೋರಾಡಿದ ಅವರ ತತ್ವಗಳು ಇಂದಿಗೂ ವಿಶ್ವಕ್ಕೆ ಮಾದರಿಯಾಗಿವೆ ಎಂದರು.
ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಸರಳ ಜೀವನ, ಪ್ರಾಮಾಣಿಕತೆ ಹಾಗೂ ದೇಶದ ಮೇಲಿನ ಬದ್ಧತೆಗೆ ಹೆಸರಾಗಿದ್ದರು. ಪ್ರಧಾನಿಯಾಗಿ ದೇಶದ ಕೃಷಿಕರು ಮತ್ತು ಸೈನಿಕರ ಮಹತ್ವ ಸಾರಿದ ಅವರು, ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಕರ್ತವ್ಯನಿಷ್ಠೆ ಹಾಗೂ ಸರಳ ಬದುಕು ಸಾರ್ವಜನಿಕ ಜೀವನದಲ್ಲಿರುವವರಿಗೆ ಆದರ್ಶವಾಗಬೇಕು ಎಂದು ಹೇಳಿದರು.ಕಾಂಗ್ರೆಸ್ ಮುಖಂಡರಾದ ಮಾನಪ್ಪ ತಳವಾರ್, ಮೈನುದ್ದೀನ್ ಮುಲ್ಲಾ, ಶಕುಂತಲಮ್ಮ ಹಿರೇಮಠ, ಶಂಕ್ರಗೌಡ ಪಾಟೀಲ, ಹನುಮೇಶ ಗುಮಗೇರಿ, ಚನ್ನಬಸವ ಚೌರಿ, ಚಂದ್ರು ನಾಲತ್ವಾಡ, ದೊಡ್ಡಯ್ಯ ಗದ್ದಡಕಿ ಇದ್ದರು.
ಕೇಸೂರು ಪಂಚಾಯಿತಿಯಲ್ಲಿ ಗಾಂಧೀಜಿ, ಶಾಸ್ತ್ರೀಜಿ ಜಯಂತಿ: ಕುಷ್ಟಗಿ ತಾಲೂಕಿನ ಕೇಸೂರು ಗ್ರಾಪಂ ಕಾರ್ಯಾಲಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಪುಷ್ಪನಮನ ಅರ್ಪಿಸಲಾಯಿತು.ಕೇಸೂರು ಪಿಡಿಒ ಕೆ. ವಾಗೀಶ್ ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ಸತ್ಯ, ಅಹಿಂಸೆ ಹಾಗೂ ಸರಳ ಜೀವನದ ಮೂಲಕ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರು ಸರಳತೆ, ಪ್ರಾಮಾಣಿಕತೆ ಹಾಗೂ ದೇಶಸೇವೆಯ ಆದರ್ಶಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಸ್ಮರಿಸಿದರು. ಇಬ್ಬರು ಮಹನೀಯರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸಿಬ್ಬಂದಿ, ಸ್ಥಳೀಯರು ಉಪಸ್ಥಿತರಿದ್ದರು.