ಸಾರಾಂಶ
ಕೊಪ್ಪಳ: ಗಾಂಧೀಜಿ ಗುಡಿ ಕೈಗಾರಿಕೆಗಳ ಸ್ಥಾಪನೆ ಮತ್ತು ಸ್ವಚ್ಛ ಪರಿಸರಕ್ಕಾಗಿ ಸದಾ ಶ್ರಮಿಸುತ್ತಿದ್ದರು ಎಂದು ಗಾಂಧಿ ಬಳಗದ ನೇತಾರ ಆನಂದತೀರ್ಥ ಪ್ಯಾಟಿ ಹೇಳಿದರು.
ನಗರದ ತಾಪಂ ಹತ್ತಿರ ನಡೆದ ಧರಣಿ ಸ್ಥಳದಲ್ಲಿ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಕೇಸರಿ, ಬಿಳಿ, ಹಸಿರಿನ ಖಾದಿ ನೂಲಿನ ಹಾರ ಹಾಕಿ ಜಂಟಿ ಕ್ರಿಯಾ ವೇದಿಕೆಯಲ್ಲಿ ಗೌರವ ನಮನ ಸಲ್ಲಿಸಿ ಮಾತನಾಡಿದರು.ಗಾಂಧೀಜಿ ಬ್ರಿಟಿಷರನ್ನು ಓಡಿಸಲು ಯಾವುದೇ ಶಸ್ತ್ರಾಸ್ತ್ರ ಹಿಡಿಯಲಿಲ್ಲ. ಅವರು ಅಹಿಂಸಾ ಅಸ್ತ್ರದಿಂದ ಈ ದೇಶದಿಂದ ಬ್ರಿಟಿಷರು ಕಾಲು ಕೀಳುವಂತ ಹೋರಾಟ ಮಾಡಿದರು. ಈಗ ನಮಗೆ ಎದುರಾಗಿರುವ ಬಲ್ದೋಟಾ ಕಂಪನಿ ನಮ್ಮ ಪಾಲಿಗೆ ಈಸ್ಟ್ ಇಂಡಿಯಾ ಕಂಪನಿಯಷ್ಟೇ ಪಿಡುಗಾಗಿದೆ. ಕೊಪ್ಪಳದಿಂದ ಇದನ್ನು ಓಡಿಸಲು ಗಾಂಧಿ ಮಾರ್ಗವು ನಮಗೆ ಮುಖ್ಯವಾಗಿ ಬೇಕಾಗುತ್ತದೆ ಎಂದು ಹೇಳಿದರು.
ಕೊಪ್ಪಳದ ಸುತ್ತಮುತ್ತ ಈಗಾಗಲೇ ಹಲವಾರು ಕಾರ್ಖಾನೆಗಳ ಉತ್ಪಾದನೆಯಿಂದ ಪರಿಸರ ಮತ್ತು ಜೀವಸಂಕುಲದ ಬದುಕಿನಲ್ಲಿ ಏರು-ಪೇರು ಆಗಿದೆ. ಅಲ್ಲಾನಗರ, ಗಿಣಿಗೇರ, ಹೊಸಕನಕಾಪುರ ಮುಂತಾದ ಹಳ್ಳಿಗಳಲ್ಲಿ ನೀರು, ಮಣ್ಣು, ಗಾಳಿ ಕಲುಷಿತಗೊಂಡಿದ್ದು ಜನರ ಆರೋಗ್ಯದಲ್ಲೂ ಕೂಡ ಬದಲಾವಣೆ ಆಗಿದೆ. ಕ್ಷಯ,ಅಸ್ತಮಾ, ಕ್ಯಾನ್ಸರ್ ನಂತ ಕಾಯಿಲೆಗಳು ಕಾಣಿಸಿಕೊಂಡಿವೆ. ಜಾನುವಾರುಗಳಿಗೆ ತಿನ್ನಲು ಶುದ್ಧ ಹುಲ್ಲು ಸಿಗುತ್ತಿಲ್ಲ. ಜಮೀನುಗಳಲ್ಲಿ ಸಂಪೂರ್ಣ ಧೂಳು ಆವರಿಸಿದೆ. ಬೆಳೆಗಳ ಮೇಲೆ ಕೆಂಧೂಳು ಆವರಿಸಿ ರೈತರ ಬದುಕನ್ನು ನರಕಕ್ಕೆ ದೂಡಿದೆ ಕಾರ್ಖಾನೆಗಳ ವಿಸ್ತರಣೆ ಮಾಡಿದರೆ ಕೊಪ್ಪಳ ಮತ್ತು ಸುತ್ತಮುತ್ತ ಇರುವ ಹಳ್ಳಿಗಳು ಇನ್ನೂ 10 ವರ್ಷದಲ್ಲಿ ಧೂಳುಮಯವಾಗಿ ಜನ ಜೀವನದ ಬದುಕು ಅಸ್ತವ್ಯಸ್ತಗೊಳ್ಳುತ್ತದೆ ಇದನ್ನು ಸರ್ಕಾರ ನಿಲ್ಲಿಸಬೇಕು. ಸುಸ್ಥಿರ ಪರಿಸರಕ್ಕೆ ಪೂರಕವಾದ ಕೈಗಾರಿಕೆಗಳನ್ನು ತೆರೆದು ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು ಎಂದು ತಿಳಿಸಿದರು.ಬಸವರಾಜ ಸವಡಿ ಮಾತನಾಡಿ, ಇಂದು ಬೃಹತ್ ಕೈಗಾರಿಕೆಗಳ ಹೆಸರಿನಲ್ಲಿ ಇಡೀ ಪರಿಸರ ಬೆಟ್ಟಗುಡ್ಡಗಳನ್ನು ಕೊರೆದು ಅರಣ್ಯ ನಾಶ ಮಾಡಿ ಜಲಮೂಲ ಇಲ್ಲದಂತೆ ಮಾಡಲಾಗುತ್ತಿದೆ. ಇದರಿಂದ ನಮಗೆ ಗಾಂಧಿ ಸಂದೇಶ ಪಾಲನೆ ಮಾಡಲು ಆಗಿಲ್ಲ ಎಂದು ಗೊತ್ತಾಗುತ್ತದೆ. ಇಲ್ಲಿ ಸ್ವದೇಶಿ ಆಲೋಚನೆ ಬದಿಗೊತ್ತಿ, ಬೃಹತ್ ಹೂಡಿಕೆಯ ಕೈಗಾರಿಕೆ ಸ್ಥಾಪಿಸಿ ಕೃಷಿ ಮತ್ತು ಗುಡಿ ಕೈಗಾರಿಕೆ ಕಡೆಗಣಿಸಲಾಗಿದೆ. ದೇಶದಲ್ಲಿ ನಿರುದ್ಯೋಗ ಸೃಷ್ಟಿಯಾಗಲು ಇದು ಕೂಡ ಮುಖ್ಯ ಕಾರಣವಾಗಿದೆ. ನಮ್ಮ ನೆಲದ ಆರ್ಥಿಕತೆ ಅಂದರೆ ಅದು ಕೃಷಿ ಮತ್ತು ಸಣ್ಣ ಕೈಗಾರಿಕೆಗಳಿಂದ ಆಗುತ್ತದೆ. ನಾವು ಗುಡಿ ಕೈಗಾರಿಕೆ ಮತ್ತು ಗ್ರಾಮೀಣ ಕೃಷಿಗೆ ತೆರೆದುಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಆಗುತ್ತದೆ ಎಂದು ತಿಳಿಸಿದರು.
ಪತಂಜಲಿ ಯೋಗ ಸಮಿತಿಯ ಡಿ. ಮಲ್ಲನಗೌಡ ಮಾತನಾಡಿ, ನಮ್ಮ ದೇಶಕ್ಕೆ ಗಾಂಧಿ ಮಾರ್ಗವೇ ಆದರ್ಶ. ಸಂವಿಧಾನ ಪಿತಾಮಹ ಅಂಬೇಡ್ಕರ್ ಮಾರ್ಗವು ನಮ್ಮ ಸಮಗ್ರ ಅಭಿವೃದ್ಧಿಗೆ ಬೇಕು. ಆದರೆ ಬಂಡವಾಳ ಶಾಹಿಗಳು ತಮ್ಮ ಏಕಸ್ವಾರ್ಥದ ಅಭಿವೃದ್ಧಿಗಾಗಿ ಏನೆಲ್ಲ ಬಲಿ ತೆಗೆದುಕೊಳ್ಳುವ ಜಾಯಮಾನ ಅವರದು. ಸಂವಿಧಾನದತ್ತ ನಮ್ಮ ಬದುಕುವ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿರುವ ಬಂಡವಾಳಗಾರ ಬೃಹತ್ ಕಾರ್ಖಾನೆಗಳಿಗೆ ತಿಲಾಂಜಲಿ ಇಡಲು ಗಾಂಧಿ ಮಾರ್ಗದ ಅಹಿಂಸಾ ಅಸ್ತ್ರ ಪರಿಣಾಮಕಾರಿಯಾಗಿ ಬಳಸಬೇಕು ಎಂದರು.ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯಿಂದ ನಡೆಯುತ್ತಿರುವ 24ನೇ ದಿನದ ಅನಿರ್ದಿಷ್ಟಾವಧಿ ಧರಣಿ ಹೋರಾಟಕ್ಕೆ ಬೆಂಬಲಿಸಿ ಉಪವಾಸ ಸತ್ಯಾಗ್ರಹವನ್ನು ಗಾಂಧೀ ಬಳಗದ ಯುವರಾಜ ಬಡಿಗೇರ, ಶಿವಪ್ಪ ಹಡಪದ, ಮೌನೇಶ ಹೊಸಕೆರಿ, ವೆಂಕಟೇಶ ಬಿ.ಕೆ, ಭೀಮಪ್ಪ ಹೂಗಾರ, ಮಲ್ಲಿಕಾರ್ಜುನ ಗೋನಾಳ (ಕೆ.ಬಿ. ಗೋನಾಳ), ಮೂಕಪ್ಪ ಮೇಸ್ತ್ರಿ ಬಸಾಪುರ, ಬಿ.ಎ. ಆಡೂರು, ಮಹಾಂತೇಶ ಕೊತಬಾಳ, ಡಿ.ಎಚ್.ಪೂಜಾರ, ಬಸವರಾಜ ಶೀಲವಂತರ, ಮಖಬೂಲ್ ರಾಯಚೂರು, ಮಂಜುನಾಥ ಕವಲೂರು, ಭೀಮಪ್ಪ ಯಲಬುರ್ಗಾ, ಮಹಾದೇವಪ್ಪ ಮಾವಿನಮಡು, ಪ್ರಕಾಶ ಮೇದಾರ ಇದ್ದರು. ವೆಂಕಣ್ಣ ಕಟ್ಟಿ ಇತರರು ಇದ್ದರು.
;Resize=(128,128))
;Resize=(128,128))