ಸಾರಾಂಶ
ಬಳ್ಳಾರಿ: ಕರ್ನಾಟಕ ಸೌಹಾರ್ದ ವೇದಿಕೆಯಿಂದ ಇಲ್ಲಿನ ಸುಧಾಕ್ರಾಸ್ ಬಳಿಯ ಗಾಂಧಿ ಪ್ರತಿಮೆ ಮುಂದೆ ಮಹಾತ್ಮ ಗಾಂಧೀಜಿ ಹುತಾತ್ಮ ದಿನ ಆಚರಿಸಲಾಯಿತು.ವಕ್ಫ್ ಬೋರ್ಡ್ ಅಧ್ಯಕ್ಷ ಹುಮಾಯೂನ್ ಖಾನ್ ಸಂಕಲ್ಪದ ಪ್ರತಿಜ್ಞೆ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಸೌಹಾರ್ದ ಕರ್ನಾಟಕ ಸಂಘಟನೆಯ ಸಿರಿಗೇರಿ ಪನ್ನರಾಜ್, ನಾರಾ ಪ್ರತಾಪ ರೆಡ್ಡಿ ಹಾಗೂ ಲೇಖಕ ಪಿ.ಆರ್.ವೆಂಕಟೇಶ್, ಯಾವುದೇ ಧರ್ಮದ ಧರ್ಮಾಂಧತೆ ಕಠೋರವಾದ ಅಮಾನವೀಯತೆ ಸೃಷ್ಟಿಸುತ್ತದೆ. ಇದಕ್ಕೆ ಗಾಂಧಿಯವರ ಹತ್ಯೆ ಸಾಕ್ಷಿಯಾಗಿದೆ. ಇಂದು ಧಾರ್ಮಿಕ ಮೂಲಭೂತವಾದವು ದ್ವೇಷದ ವಿಷ ಬೀಜ ಬಿತ್ತುವ ಸಾಧನವಾಗಿ ರಾಜಕೀಯ ರೂಪ ಪಡೆದಿದೆ. ಇದನ್ನು ಉಪಯೋಗಿಸಿ ಹಿಂಸೆಯನ್ನು ಹರಡಲಾಗುತ್ತಿದೆ. ಸಹಿಷ್ಣುತೆಯನ್ನು ಕೊಲ್ಲಲಾಗುತ್ತಿದೆ. ಜನರ ನಡುವಿನ ಸೌಹಾರ್ದ ಮನೋಭಾವಕ್ಕೆ ಧಕ್ಕೆ ತರಲಾಗುತ್ತಿದೆ. ಸಮಾನತೆಯ ಆಶಯಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ದೂರಿದರು.
ಭ್ರಾತೃತ್ವ, ಸಮಾನತೆ, ಬಹುತ್ವಕ್ಕೆ ಅಡಿಪಾಯವಾದ ಸಂವಿಧಾನದ ಮೌಲ್ಯಗಳನ್ನು ಧ್ವಂಸಗೊಳಿಸುವ ಮೂಲಕ ದೇಶದಲ್ಲೀಗ ಕೋಮು ಪ್ರೇರಿತ ಸಂವಿಧಾನವನ್ನು ಪರ್ಯಾಯಗೊಳಿಸುವ ಹುನ್ನಾರ ನಡೆದಿದೆ. ಇಂತಹ ಸನ್ನಿವೇಶವನ್ನು ಎದುರಿಸಿˌ ಸೌಹಾರ್ದ ರಕ್ಷಿಸಲು, ರಾಜಕೀಯ ಧುರೀಣರು, ಸಾಹಿತಿಗಳು, ಸಮಾಜಮುಖಿ ಮನಸುಗಳು, ಜೀವಪರ ಚಿಂತಕರು ಮುಂದಾಗಬೇಕಿದೆ. ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಸಂವಿಧಾನದ ತತ್ವಗಳ ಬಗ್ಗೆ ಇಂದಿನ ಯುವ ಪೀಳಿಗೆಗೆ ಮನನ ಮಾಡುವ ಆಂದೋಲನದ ಅಗತ್ಯವಿದೆ ಎಂದರು.ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಸಂಗನಕಲ್ ವಿಜಯಕುಮಾರ್ ಮಾತನಾಡಿ, ಜಗತ್ತಿನ ಅನೇಕ ಹೋರಾಟಗಳಿಗೆ ಚಾಲಕ ಶಕ್ತಿಯಾಗಿದ್ದ ಗಾಂಧೀಜಿಯವರ ಬದುಕು ಪ್ರಜಾಸತ್ತೆಯ ಚಳವಳಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಜೆ. ಚಂದ್ರಕುಮಾರಿ, ಮಾನವ ಬಂಧುತ್ವ ವೇದಿಕೆಯ ಜೆ.ಸತ್ಯಬಾಬು, ಭೂ ಸಂತ್ರಸ್ತ ಹೋರಾಟ ಸಮಿತಿಯ ಮುಖಂಡ ಪಾಂಡುರಂಗಪ್ಪ, ಚಿಂತಕ ಗುರುಸಿದ್ಧಮೂರ್ತಿ, ಬೆಳಗಲ್ ಬಸವರಾಜ್, ದಲಿತ ಸಂಘರ್ಷ ಸಮಿತಿಯ ಸದಸ್ಯರಾದ ಎ.ಕೆ. ಗಂಗಾಧರ, ಕಪ್ಪಗಲ್ ಓಂಕಾರಪ್ಪ, ಲಿಂಗಪ್ಪ ಬೈಲೂರು, ಶಂಕರ್, ಜೆ.ಲಿಂಗರಾಜ್, ಹೊನ್ನೂರಪ್ಪ, ಕೊಳಗಲ್ ಹನುಮಂತಪ್ಪ, ಮಲ್ಲೇಶ್ವರಿ, ವೀಣಾಕುಮಾರಿ, ರಫೀಕ್, ಅರುಣಾ, ಶೇಖರ್ ಟಿ.ಬೂದಿಹಾಳ್, ರಾಮಚಂದ್ರಪ್ಪ, ಅಥಾವುಲ್ಲಾ ಮತ್ತಿತರರು ಉಪಸ್ಥಿತರಿದ್ದರು.ಸಾಹಿತಿ ಅಬ್ದುಲ್ ಹೈ ತೋರಣಗಲ್ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಗಾಂಧಿ ಕುರಿತ ಕವನಗಳನ್ನು ವಾಚಿಸಲಾಯಿತು.