ಕನ್ನಡಪ್ರಭ ವಾರ್ತೆ ಗದಗ
ಮಹಾತ್ಮಾ ಗಾಂಧೀಜಿ ಜೀವನವೇ ಒಂದು ಪ್ರಯೋಗಶಾಲೆಯಾಗಿತ್ತು. ದೇಶದ ಅನೇಕ ಮಹಾತ್ಮರು ಶರಣರು, ದಾರ್ಶನಿಕರು ಹೇಳಿದ ಸಂದೇಶಗಳನ್ನು ಆಳವಾಗಿ ತಿಳಿದುಕೊಂಡು ಅವುಗಳನ್ನು ಅಳವಡಿಸಿಕೊಂಡ ಜೀವನ ಅವರದಾಗಿತ್ತು ಎಂದು ಜ.ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ಹೇಳಿದರು.ನಗರದ ತೋಂಟದಾರ್ಯ ಮಠದಲ್ಲಿ ಜರುಗಿದ 2818ನೇ ಶಿವಾನುಭವದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಅನೇಕ ನೈತಿಕ ಮೌಲ್ಯಗಳನ್ನು ಅವರು ಬದುಕಿನಲ್ಲಿ ಅಳವಡಿಸಿಕೊಂಡವರಾಗಿದ್ದರು. ಸತ್ಯವೇ ಈಶ್ವರ, ಈಶ್ವರನೇ ಸತ್ಯ ಎಂದು ಪ್ರತಿಪಾದಿಸಿದವರು. ಗಾಂಧೀಜಿ ಸರಳ ಜೀವನ ಅನುಸರಿಸಿದವರು. ನೈತಿಕತೆಯ ಬದುಕಿನಲ್ಲಿ ಶಕ್ತಿ ಇದೆ ಎನ್ನುವುದನ್ನು ತೋರಿಸಿದವರು. ಅವರ ಜೀವನವೇ ಅವರ ಸಂದೇಶವಾಗಿತ್ತು. ಸತ್ಯ ಮತ್ತು ಅಹಿಂಸೆಗಳನ್ನು ಅಸ್ತ್ರವನ್ನಾಗಿಸಿಕೊಂಡು ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ನೇತೃತ್ವ ವಹಿಸಿ ಬಲಿಷ್ಠ ಬ್ರಿಟಿಷರನ್ನು ಈ ದೇಶದಿಂದ ಹೊರ ಹಾಕಿ ಸ್ವಾತಂತ್ರ‍್ಯ ತಂದುಕೊಟ್ಟವರು. ಅವರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ ದೇಶ ಪ್ರಗತಿಯತ್ತ ಸಾಗುತ್ತದೆ ಎಂದರು.ಡಾ. ಎಸ್.ಸಿ. ಚವಡಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ಮತ್ತು ಸಂದೇಶ ಕುರಿತು ಮಾತನಾಡಿದರು.
ಗಾಂಧೀಜಿಯವರ ಕುರಿತಾಗಿ ಡಾ. ಸಿದ್ದಲಿಂಗೇಶ ಸಜ್ಜನಶೆಟ್ಟರ, ಶಿಲ್ಪಾ ಮ್ಯಾಗೇರಿ ಹಾಗೂ ನೀಲಮ್ಮ ಅಂಗಡಿ ಕವನ ವಾಚನ ಮಾಡಿದರು. ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷ ದಾನಯ್ಯ ಗಣಾಚಾರಿ ದಂಪತಿಗಳನ್ನು ಪೂಜ್ಯರು ಸನ್ಮಾನಿಸಿದರು. ಗಾಯಕ ಪಂಡಿತ ವೆಂಕಟೇಶಕುಮಾರ ಆಲ್ಕೋಡ್ ತಂಡದವರಿಂದ ಗಾಂಧೀಜಿಯವರ ಕುರಿತಾದ ವಿವಿಧ ಕಾವ್ಯ ಗಾಯನ ಜರುಗಿತು. ವಿಶೇಷವಾಗಿ ಡಿ.ಎಸ್. ಕರ್ಕಿ ಅವರ ಕಾವ್ಯ ಗಾಯನ ಕೇಳುಗರ ಗಮನ ಸೆಳೆಯಿತು. ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲೆದ ಅವರಿಗೆ ಮೈಸೂರಿನ ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಸ್ಪೋರ್ಟ್ಸ್ ಫೌಂಡೇಶನ್ ಕೊಡ ಮಾಡಿದ ರಾಜ್ಯಮಟ್ಟದ ರಾಜಯೋಗಿ ಡಿ. ಕ್ರಷ್ಣಮಾಚಾರ್ಯ ಪ್ರಶಸ್ತಿಗೆ ಭಾಜನರಾದ ನಿಮಿತ್ತ ಸನ್ಮಾನಿಸಲಾಯಿತು.ದಾಸೋಹ ಸೇವೆಯನ್ನು ಜ. ತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಪತ್ತಿನ ಸಹಕಾರಿ ಸಂಘದ ಪದಾಧಿಕಾರಿಗಳು ವಹಿಸಿಕೊಂಡಿದ್ದರು. ಧರ್ಮ ಗ್ರಂಥ ಪಠಣವನ್ನು ಪ್ರೀತಮ ಕುಂಬಾರ, ವಚನ ಚಿಂತನವನ್ನು ಪ್ರತಿಕ್ಷಾ ಕುಂಬಾರ ನೆರವೇರಿಸಿದರು.
ಈ ವೇಳೆ ರಮೇಶ ಕಲ್ಲನಗೌಡರ, ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಸಿದ್ಧರಾಮ ಪಟ್ಟೇದ, ಪ್ರತಿಭಾ ಬಡ್ನಿ, ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಸೇರಿದಂತೆ ಶ್ರೀಮಠದ ಸದ್ಭಕ್ತರು ಇದ್ದರು. ಮೃತ್ಯುಂಜಯ ಸುತಾರ ಪ್ರಾರ್ಥಿಸಿದರು. ಡಾ. ಉಮೇಶ ಪುರದ ಸ್ವಾಗತಿಸಿದರು. ವಿದ್ಯಾ ಗಂಜಿಹಾಳ ನಿರೂಪಿಸಿದರು.