ಗಾಂಧೀಜಿ ಅವರ ಅಹಿಂಸೆ, ಸತ್ಯ ಮಾರ್ಗ ಎಲ್ಲರಿಗೂ ದಾರಿದೀಪ: ರುದ್ರಪ್ಪ ಲಮಾಣಿ

| Published : Oct 03 2024, 01:17 AM IST

ಗಾಂಧೀಜಿ ಅವರ ಅಹಿಂಸೆ, ಸತ್ಯ ಮಾರ್ಗ ಎಲ್ಲರಿಗೂ ದಾರಿದೀಪ: ರುದ್ರಪ್ಪ ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಜಗತ್ತಿನಾದ್ಯಂತ ಗಾಂಧೀಜಿಯವರ ತತ್ವಾದರ್ಶಗಳು ಮೆಚ್ಚುಗೆಗೆ ಪಾತ್ರವಾಗಿವೆ. ಅವರು ಗ್ರಾಮಗಳ ಅಭಿವೃದ್ಧಿ ಹಾಗೂ ಅಸ್ಪೃಶ್ಯತೆ ತೊಡೆದುಹಾಕುವ ಕನಸು ಕಂಡಿದ್ದರು ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.

ಹಾವೇರಿ: ಮಹಾತ್ಮಾ ಗಾಂಧೀಜಿ ಅವರ ಶಾಂತಿ, ಅಹಿಂಸೆ ಹಾಗೂ ಸತ್ಯ ಮಾರ್ಗ ಎಲ್ಲರಿಗೂ ದಾರಿದೀಪವಾಗಿದೆ. ಅಹಿಂಸಾ ಮಾರ್ಗದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ವ್ಯಕ್ತಿ ಎಂದು ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಹಾತ್ಮಾಗಾಂಧಿ ಹಾಗೂ ಲಾಲ್‌ಬಹದ್ದೂರ ಶಾಸ್ತ್ರಿ ಜಯಂತಿಯನ್ನು ಚರಕದಲ್ಲಿ ನೂಲು ತೆಗೆಯುವ ಮೂಲಕ ಉದ್ಘಾಟಿಸಿ, ಉಭಯ ನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಜಗತ್ತಿನಾದ್ಯಂತ ಗಾಂಧೀಜಿಯವರ ತತ್ವಾದರ್ಶಗಳು ಮೆಚ್ಚುಗೆಗೆ ಪಾತ್ರವಾಗಿವೆ. ಅವರು ಗ್ರಾಮಗಳ ಅಭಿವೃದ್ಧಿ ಹಾಗೂ ಅಸ್ಪೃಶ್ಯತೆ ತೊಡೆದುಹಾಕುವ ಕನಸು ಕಂಡಿದ್ದರು. ಗ್ರಾಮೀಣ ಗುಡಿ ಕೈಗಾರಿಕೆಗೆ ಪ್ರೋತ್ಸಾಹಿಸುತ್ತಿದ್ದರು. ಹಳ್ಳಿಗಳ ಅಭಿವೃದ್ಧಿಗೆ ಚಿಂತನೆ ಮಾಡುತ್ತಿದ್ದರು. ಇಂದು ಗ್ರಾಮಗಳ ಅಭಿವೃದ್ಧಿಯಾಗುತ್ತಿದೆ ಎಂದರು.

ಲಾಲ್‌ಬಹದ್ದೂರ ಶಾಸ್ತ್ರೀ ಅವರು ಸರಳ, ಸಜ್ಜನಿಕೆ ಅಪರೂಪದ ವ್ಯಕ್ತಿಗಳಾಗಿದ್ದರು. ಇಬ್ಬರು ಮಹಾನ್ ನಾಯಕರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ರಾಷ್ಟ್ರಭಕ್ತಿ ಹೊಂದಬೇಕು ಎಂದು ಹೇಳಿದರು.

ರಾಜ್ಯದಲ್ಲೇ ಮೊದಲು ಹಾವೇರಿ ಜಿಲ್ಲೆಯಲ್ಲಿ ಗಾಂಧಿ ಭವನ ನಿರ್ಮಾಣ ಮಾಡಲಾಗಿದೆ. ಇಂದು ಅರ್ಥಪೂರ್ಣ ಗಾಂಧಿ ಜಯಂತಿ ಆಚರಣೆ ಮಾಡಲಾಗಿದೆ. ಜಿಲ್ಲೆ ಪ್ರವಾಸಿ ತಾಣವಾಗಬೇಕು ಎಂದು ದಿ. ಪಾಟೀಲ ಪುಟ್ಟಪ್ಪನವರು ಯಾವಾಗಲೂ ನನಗೆ ಹೇಳುತ್ತಿದ್ದರು. ಜಿಲ್ಲೆಯಲ್ಲಿ ಉಪ ವಿಜ್ಞಾನ ಕೇಂದ್ರ ಹಾಗೂ ಗಾಂಧಿ ಭವನ ಮಾಡಲಾಗಿದೆ. ಗ್ಲಾಸ್ ಹೌಸ್ ನಿರ್ಮಾಣಕ್ಕೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಗಾಂಧೀಜಿ ಅವರು ಅಹಿಂಸಾ ಹಾಗೂ ಸತ್ಯಾಗ್ರಹದಿಂದ ದೇಶದಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು. ಮನುಷ್ಯ ನಿರ್ಮಾಣ ಮಾಡಿದ ಯಾವುದೇ ಆಯುಧಕ್ಕಿಂತ ಹರಿತವಾದ ಆಯುಧ ಅಹಿಂಸಾ ಮಾರ್ಗ ಎಂದು ಹೇಳಲಾಗುತ್ತಿದೆ. ದಲಾಯಿಲಾಮಾ, ನೆಲ್ಸಲ್ ಮಂಡೇಲಾ ಸೇರಿದಂತೆ ಅನೇಕರು ಅಹಿಂಸಾ ಮಾರ್ಗದ ಮೂಲಕ ತಮ್ಮ ಹೋರಾಟದಲ್ಲಿ ಯಶಸ್ಸುಕಂಡಿದ್ದಾರೆ ಎಂದರು. ಲಾಲ್ ಬಹಾದ್ದೂರ ಶಾಸ್ತ್ರಿ ದೇಶ ಕಂಡ ಸರಳ ಪ್ರಧಾನ ಮಂತ್ರಿಗಳಾಗಿದ್ದರು. ಜೈ ಜವಾನ್ ಜೈಕಿಸಾನ್ ಎಂಬ ಘೋಷವಾಕ್ಯದೊಂದಿಗೆ ರೈತರನ್ನು ಹಾಗೂ ಯೋಧರನ್ನು ಹುರಿದುಂಬಿಸಿದವರು. ಈ ಇಬ್ಬರು ನಾಯಕರ ಆದರ್ಶ ಮಾರ್ಗಗಳಲ್ಲಿ ಎಲ್ಲರೂ ನಡಿಯೋಣ. ಬರುವ ದಿನಗಳಲ್ಲಿ ಗಾಂಧಿ ಭವನದಲ್ಲಿ ಔಚಿತ್ಯ ಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಾಧನಾ ಅಕಾಡೆಮಿ ಉಪನ್ಯಾಸಕ ಮೆಹಬೂಬ ನಾಯ್ಕೋಡಿ ಮಾತನಾಡಿ, ಗಾಂಧೀಜಿ ಅವರು ವಿಶ್ವಕ್ಕೆ ನಾಯಕರಾಗಿದ್ದರು, ಅವರು ಒಬ್ಬ ವ್ಯಕ್ತಿಯಲ್ಲ ಶಕ್ತಿಯಾಗಿದ್ದರು. ಬದುಕಿನ ವಿಧಾನ ಜಗತ್ತಿಗೆ ತೋರಿಸಿಕೊಟ್ಟವರು. ನೈರ್ಮಲ್ಯಕ್ಕೆ ಒತ್ತು ನೀಡಿದ್ದರು. ೧೪೧ ರಾಷ್ಟ್ರಗಳಲ್ಲಿ ಗಾಂಧೀಜಿಯವರ ಪುತ್ಥಳಿಗಳಿವೆ. ಅವರ ಬಗ್ಗೆ ೩೫ ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಗಾಂಧೀಜಿ ಶತಮಾನ ಕಂಡ ಶ್ರೇಷ್ಠ ನಾಯಕ ಎಂದು ಬಣ್ಣಿಸಿದರು.

ಬಹುಮಾನ ವಿತರಣೆ

ಸಮಾರಂಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಜಿಲ್ಲಾಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಾದ ಪ್ರೌಢಶಾಲಾ ವಿಭಾಗದಿಂದ ಸೃಷ್ಟಿ ಬ. ಪಾಟೀಲ, ಬಸವರಾಜ ಹೊಳೆಕೋಟಿ, ಕವನಾ ಮಸಳಿ, ಪದವಿಪೂರ್ವ ವಿಭಾಗದಿಂದ ಸಬಿಯಾಬಾನು ಖಾಜಿ, ಅಭಿಷೇಕ ಕಮ್ಮಾರ, ಕಾವ್ಯ ಎಚ್. ಕೊಪ್ಪನವರ, ಪದವಿ ವಿಭಾಗದಿಂದ ಜಯಶ್ರೀ ಎಸ್.ಟಿ., ರಕ್ಷಿತಾ ಪಿ. ಹಲವಾಗಲ, ಪ್ರಣತಿ ಶಿ. ಹಾದ್ರಿಹಳ್ಳಿ ಅವರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಣೆ ಮಾಡಲಾಯಿತು.

ಸರ್ವಧರ್ಮ ಪ್ರಾರ್ಥನೆ

ಕಾರ್ಯಕ್ರಮದಲ್ಲಿ ಜಿ.ಎಸ್. ಭಟ್ ಅವರು ಭಗವದ್ಗೀತೆ, ಶಿಕ್ಷಕ ಎ.ಪಿ. ಮೊಹ್ಸಿನ್ ಅವರಿಂದ ಕುರಾನ್ ಹಾಗೂ ನಗರದ ಸೇಂಟ್ ಆನ್ಸ್ ಪ್ರೌಢಶಾಲೆ ಪ್ರಿನ್ಸಿಪಾಲ ಸಿಸ್ಟರ್ ಲೂಮಿನಾ ಬೈಬಲ್ ಪಠಣ ಮೂಲಕ ಸರ್ವಧರ್ಮ ಪ್ರಾರ್ಥನೆ ಸಲ್ಲಿಸಿದರು.

ಕಾರ್ಯಕ್ರಮಕ್ಕೂ ಮೊದಲು ಗಾಂಧಿ ಭವನ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ ನೇರವೇರಿಸಿದ ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ ಅವರು, ನಂತರ ಗಾಂಧೀಜಿ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು.

ಗೀತ ಗಾಯನ

ಅಭಯ ಸುಗಮ ಸಂಗೀತ ಕಲಾತಂಡದ ರೇಖಾ ಕುಲಕರ್ಣಿ ಸಂಗಡಿಗರಿಂದ ಗಾಂಧಿ ಪ್ರಿಯ ಗೀತೆಗಳಾದ “ರಘುಪತಿರಾಘವ್ ರಾಜಾರಾಂ, ವೈಷ್ಣವ ಜನತೋ...” ಗೀತ ಗಾಯನ ಜರುಗಿತು. ವಾರ್ತಾ ಇಲಾಖೆ ಹೊರತಂದಿರುವ ಗಾಂಧಿ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು.

ಸದ್ಭಾವನಾ ನಡಿಗೆ

ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ನಗರದ ಗಾಂಧಿ ವೃತ್ತದಲ್ಲಿರುವ ಗಾಂಧಿ ಪುತ್ಥಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಮಾಲಾರ್ಪಣೆ ಮಾಡಿ, ಸದ್ಭಾವನಾ ನಡಿಗೆಗೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಗಾಂಧಿ ವೇಷಧಾರಿ ರಾಮಣ್ಣ, ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಾಂಧಿ ವೃತ್ತದಿಂದ ಗಾಂಧಿ ಭವನದ ವರೆಗೆ ಸದ್ಭಾವನಾ ನಡಿಗೆಯಲ್ಲಿ ಭಾಗವಹಿಸಿದ್ದರು.

ಖಾದಿ ಉಡುಗೆ

ಗಾಂಧಿ ಜಯಂತಿ ಅಂಗವಾಗಿ ಅಧಿಕಾರಿಗಳು ಖಾದಿ ಜುಬ್ಬಾ-ಪೈಜಾಮ್, ಟೋಪಿ, ಮಹಿಳಾ ಅಧಿಕಾರಿಗಳು ಖಾದಿ ಸಾರಿ ತೊಟ್ಟು ಗಮನ ಸೆಳದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಸದಸ್ಯರಾದ ಸಂಜೀವಕುಮಾರ ನೀರಲಗಿ, ಗಣೇಶ ಬಿಷ್ಟಣ್ಣನವರ, ಚೆನ್ನಮ್ಮ ಬ್ಯಾಡಗಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಪಂ ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ, ಉಪ ವಿಭಾಗಾಧಿಕಾರಿ ಚೆನ್ನಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಪೌರಾಯುಕ್ತ ನಾಗರಾಜ ಇದ್ದರು.