ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಮಹಾತ್ಮಾ ಗಾಂಧೀಜಿಯವರ ಹೆಸರು ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿದೆ, ಬಂದೂಕು, ಕತ್ತಿಗಳನ್ನು ಬಳಸದೆ ಕೇವಲ ನೈತಿಕ ಶಕ್ತಿ ಮತ್ತು ಶಾಂತಿಯ ಮೂಲಕ ಜಗತ್ತಿನ ಅತಿ ದೊಡ್ಡ ಸಾಮ್ರಾಜ್ಯವನ್ನು ಮಣಿಸಬಹುದೆಂದು ಗಾಂಧೀಜಿಯವರು ತಮ್ಮ ಹೋರಾಟಗಳ ಮೂಲಕ ಇಡೀ ವಿಶ್ವಕ್ಕೆ ಸಾಬೀತುಪಡಿಸಿರುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.
ಬ್ಯಾಡಗಿ: ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಮಹಾತ್ಮಾ ಗಾಂಧೀಜಿಯವರ ಹೆಸರು ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿದೆ, ಬಂದೂಕು, ಕತ್ತಿಗಳನ್ನು ಬಳಸದೆ ಕೇವಲ ನೈತಿಕ ಶಕ್ತಿ ಮತ್ತು ಶಾಂತಿಯ ಮೂಲಕ ಜಗತ್ತಿನ ಅತಿ ದೊಡ್ಡ ಸಾಮ್ರಾಜ್ಯವನ್ನು ಮಣಿಸಬಹುದೆಂದು ಗಾಂಧೀಜಿಯವರು ತಮ್ಮ ಹೋರಾಟಗಳ ಮೂಲಕ ಇಡೀ ವಿಶ್ವಕ್ಕೆ ಸಾಬೀತುಪಡಿಸಿರುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.ಗಾಂಧೀಜಿ ಕೇವಲ ಒಬ್ಬ ರಾಜಕೀಯ ನಾಯಕರಾಗಿರಲಿಲ್ಲ, ಬದಲಿಗೆ ಇಡೀ ದೇಶವನ್ನು ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ಮುನ್ನಡೆಸಿದ ಮಹಾನ್ ಚೇತನ, ನಿರಂತರ ಹೋರಾಟಗಳು, ದೃಢ ಸಂಕಲ್ಪ ಮತ್ತು ಅಹಿಂಸಾತ್ಮಕ ಸತ್ಯಾಗ್ರಹಗಳ ಫಲವಾಗಿ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಲೇಬೇಕಾಯಿತು, ಪರಿಣಾಮವಾಗಿ, ಇಂದಿಗೂ ಅವರ ಈ ಸ್ವಾತಂತ್ರ್ಯ ಹೋರಾಟದ ಹಾದಿ ಜಗತ್ತಿಗೆ ಆದರ್ಶಪ್ರಾಯವಾಗಿದೆ ಎಂದರು.
ಚಂಪಾರಣ್ಯ ಚಳುವಳಿ: ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ನಂತರ ಗಾಂಧೀಜಿಯವರು ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಗಾಂಧೀಜಿಯವರು ಹೂಡಿದ ಅಹಿಂಸಾತ್ಮಕ ಯುದ್ಧಗಳು ಜಗತ್ತಿನ ಇತಿಹಾಸದಲ್ಲೇ ವಿಶಿಷ್ಟವಾದವುಗಳಾಗಿವೆ, ಬಿಹಾರದ ಚಂಪಾರಣ್ ಎಂಬಲ್ಲಿ ಬೆಳೆಯುವ ರೈತರ ಪರವಾಗಿ ಮೊದಲ ಸತ್ಯಾಗ್ರಹ ಆರಂಭಿಸಿದ ಅವರು, ಬ್ರಿಟಿಷ್ ಜಮೀನ್ದಾರರು ರೈತರಿಗೆ ನೀಡುತ್ತಿದ್ದ ಕಿರುಕುಳದ ವಿರುದ್ಧ ಅವರು ಯಶಸ್ವಿ ಹೋರಾಟ ನಡೆಸಿದರು, ಗುಜರಾತ್‌ನ ಖೇಡಾದಲ್ಲಿ ಬರಗಾಲದಿಂದ ಕಂಗಾಲಾಗಿದ್ದ ರೈತರ ಕರ ನಿರಾಕರಣೆ (ತೆರಿಗೆ ವಿನಾಯಿತಿ) ಹೋರಾಟಕ್ಕೆ ಬೆಂಬಲ ನೀಡಿ ಯಶಸ್ಸು ಸಾಧಿಸಿದರು, ಈ ಹೋರಾಟಗಳು ಗಾಂಧೀಜಿಯವರನ್ನು ಭಾರತದ ಜನಸಾಮಾನ್ಯರ ನಾಯಕರನ್ನಾಗಿ ಮಾಡಿದ್ದಾಗಿ ತಿಳಿಸಿದರು.ಅಸಹಕಾರ ಚಳವಳಿ : ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಮತ್ತು ಬ್ರಿಟಿಷರ ರೌಲತ್ ಕಾಯ್ದೆ ವಿರುದ್ಧ ಗಾಂಧೀಜಿಯವರು ಅಸಹಕಾರ ಚಳವಳಿ ಪ್ರಾರಂಭಿಸಿದರು. ಬ್ರಿಟಿಷ್ ಸರ್ಕಾರಕ್ಕೆ ಯಾವುದೇ ರೀತಿಯಲ್ಲಿ ಸಹಕರಿಸಬಾರದು ಎಂಬುದು ಇದರ ಮುಖ್ಯ ಉದ್ದೇಶವಾಗಿತ್ತು, ದೇಶದಾದ್ಯಂತ ಲಕ್ಷಾಂತರ ಜನರು ಬ್ರಿಟಿಷ್ ಪದವಿಗಳನ್ನು, ಸರ್ಕಾರಿ ಶಾಲೆ, ಕಾಲೇಜುಗಳನ್ನು ಮತ್ತು ವಿದೇಶಿ ಬಟ್ಟೆಗಳನ್ನು ಬಹಿಷ್ಕರಿಸಿದ್ದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ದಾನಪ್ಪ ಚೂರಿ, ಚನ್ನಬಸಪ್ಪ ಹುಲ್ಲತ್ತಿ, ಆರ್.ಜಿ. ಕಳ್ಯಾಳ, ಡಿ.ಎಚ್. ಬುಡ್ಡನಗೌಡ್ರ, ಖಾದರಸಾಬ್ ದೊಡ್ಮನಿ, ಹೈದರಲಿ, ರಮೇಶ ಸುತ್ತಕೋಟಿ, ಮಜೀದ್ ಮುಲ್ಲಾ, ಮಂಜುನಾಥ ಭೋವಿ, ಮೋಹನಕುಮಾರ ಹುಲ್ಲತ್ತಿ, ರಫಿಕ್ ಮುದ್ಗಲ್ , ಅರುಣ ಪಾಟೀಲ ಹಾಗೂ ಇನ್ನಿತರರಿದ್ದರು.