ಕನ್ನಡ ಸಾಹಿತ್ಯದಲ್ಲಿ ಬಸವಣ್ಣ, ಅಕ್ಕಮಹಾದೇವಿ, ಕುವೆಂಪು ಅವರ ಕಾವ್ಯ-ವಚನಗಳು ಹೇಗೆ ಮಹತ್ವ ಪಡೆದಿವೆಯೋ, ಅದೇ ರೀತಿ ಹಿಂದಿ ಸಾಹಿತ್ಯದಲ್ಲಿ ಮೀರಾಬಾಯಿ, ಮಹಾದೇವಿ ವರ್ಮಾ ಮತ್ತು ಪ್ರೇಮಚಂದ್ ಅವರ ಕೃತಿಗಳು ವಿಶಿಷ್ಟ ಸ್ಥಾನ ಹೊಂದಿವೆ.
ಧಾರವಾಡ:
ದಕ್ಷಿಣ ಭಾರತದಲ್ಲಿ ಹಿಂದಿ ಭಾಷೆ ಪ್ರಚಾರಕ್ಕೆ ಮಹಾತ್ಮ ಗಾಂಧೀಜಿ ಅವರ ಕೊಡುಗೆ ಬಹಳ ಇದೆ ಎಂದು ಪ್ರಾಧ್ಯಾಪಕಿ ಡಾ. ಕವಿತಾ ಚಾಂದಗುಡೆ ಅಭಿಪ್ರಾಯಪಟ್ಟರು.ಕರ್ನಾಟಕ ಕಲಾ ಮಹಾವಿದ್ಯಾಲಯದ ಹಿಂದಿ ವಿಭಾಗದ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಹಿಂದಿ ದಿವಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿ ಭಾಷೆಯ ಬೆಳವಣಿಗೆ ಮತ್ತು ಪ್ರಸಾರಕ್ಕೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳನ್ನು ವಿವರಿಸಿದರು.
1949ರ ಸೆ. 14ರಂದು ಹಿಂದಿಯನ್ನು ಭಾರತದ ಒಕ್ಕೂಟದ ಅಧಿಕೃತ ಭಾಷೆಯಾಗಿ ಅಂಗೀಕರಿಸಿದ ನಂತರ ದಕ್ಷಿಣ ಭಾರತದಲ್ಲಿ ಹಿಂದಿ ಭಾಷೆಯ ಪ್ರಚಾರಕ್ಕೆ ಮಹಾತ್ಮ ಗಾಂಧೀಜಿ ಅವರ ಕೊಡುಗೆ ಹಾಗೂ ದೇವದಾಸ್ ಗಾಂಧಿ ಅವರ ಕಾರ್ಯವನ್ನೂ ಸ್ಮರಿಸಿದರು.ಕನ್ನಡ ಸಾಹಿತ್ಯದಲ್ಲಿ ಬಸವಣ್ಣ, ಅಕ್ಕಮಹಾದೇವಿ, ಕುವೆಂಪು ಅವರ ಕಾವ್ಯ-ವಚನಗಳು ಹೇಗೆ ಮಹತ್ವ ಪಡೆದಿವೆಯೋ, ಅದೇ ರೀತಿ ಹಿಂದಿ ಸಾಹಿತ್ಯದಲ್ಲಿ ಮೀರಾಬಾಯಿ, ಮಹಾದೇವಿ ವರ್ಮಾ ಮತ್ತು ಪ್ರೇಮಚಂದ್ ಅವರ ಕೃತಿಗಳು ವಿಶಿಷ್ಟ ಸ್ಥಾನ ಹೊಂದಿವೆ ಎಂದು ತಿಳಿಸಿದರು.ವಿಶೇಷವಾಗಿ, ‘ಕಿಸಾನ್ ಕಾ ಮಹಾಕವಿ’ ಎಂದು ಪ್ರಸಿದ್ಧರಾದ ಪ್ರೇಮಚಂದ್ ಅವರ ಸಾಹಿತ್ಯಿಕ ಕೊಡುಗೆಯನ್ನು ಪ್ರಶಂಸಿಸಿದ ಅವರು, ವಿದ್ಯಾರ್ಥಿಗಳು ಹಿಂದಿ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಕರೆ ನೀಡಿದರು.ಹಿಂದಿ ವಿಭಾಗದ ಮುಖ್ಯಸ್ಥ ಡಾ. ಜಾಕೀರ್ ಗುಳಗುಂಡಿ ಮಾತನಾಡಿ, ಹಿಂದಿ ಭಾಷೆಯು ಪ್ರಾಚೀನ ಪರಂಪರೆ, ಸರಳತೆ ಮತ್ತು ಸೌಂದರ್ಯವನ್ನು ಮೈಗೂಡಿಸಿಕೊಂಡಿರುವ ಸಮೃದ್ಧ ಭಾಷೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಐ.ಸಿ. ಮುಳುಗುಂದ ಮಾತನಾಡಿ, ಹಿಂದಿ ಭಾಷೆಯು ಶಿಕ್ಷಣ, ಪತ್ರಿಕೋದ್ಯಮ, ಪ್ರವಾಸೋದ್ಯಮ, ಅರ್ಥಶಾಸ್ತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಹಿಂದಿ ಭಾಷೆಯ ಪ್ರಸಾರ ಹಾಗೂ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿವೆ ಎಂದು ಸ್ಮರಿಸಿದರು.ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್ ಫೋನ್‌ಗಳನ್ನು ಜ್ಞಾನಾರ್ಜನೆಗೆ ಪೂರಕವಾಗಿ ಬಳಸಿಕೊಳ್ಳಬೇಕು. ಅವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡ್ಡಿಯಾಗಬಾರದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಮಮತಾ, ಶೀಲಾ ಬಂಡಾರಿ, ವೀರೇಶ ಬಿಸನಳ್ಳಿ ಸೇರಿದಂತೆ ವಿದ್ಯಾರ್ಥಿಗಳು ಗಣ್ಯರು ಉಪಸ್ಥಿತರಿದ್ದರು.