ತಾಲೂಕಿನ ಜನತೆಯ ಜೀವನಾಡಿ ಗಂಡೋರಿ ಕಾಲುವೆಗಳು ಈ ಭಾಗದ ಜನರ ಜಲದ ಜೀವನಾಡಿಯಾಗಿದ್ದು, ಆದರೆ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಒಂದು ವರ್ಷದಿಂದ ಎಡದಂಡೆ ಕಾಲುವೆಯಿಂದ ನಿತ್ಯ ನೀರು ಪೋಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕಮಲಾಪುರ

ತಾಲೂಕಿನ ಜನತೆಯ ಜೀವನಾಡಿ ಗಂಡೋರಿ ಕಾಲುವೆಗಳು ಈ ಭಾಗದ ಜನರ ಜಲದ ಜೀವನಾಡಿಯಾಗಿದ್ದು, ಆದರೆ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಒಂದು ವರ್ಷದಿಂದ ಎಡದಂಡೆ ಕಾಲುವೆಯಿಂದ ನಿತ್ಯ ನೀರು ಪೋಲಾಗುತ್ತಿದೆ. ತಾಲೂಕಿನ ಬೇಳಕೋಟಾ ಗಂಡೋರಿ ನಾಲ ಜಲಾಶಯದ ಗೇಟ್ ಕೆಟ್ಟು ಹೋಗಿ ವರ್ಷ ಒಂದು ಕಳೆದಿದ್ದು, ಇಷ್ಟು ದಿನಗಳಿಂದ ನಿತ್ಯವೂ ಎಡದಂಡೆಯ ಕಾಲುವೆ ನೀರು ಹಾಳಾಗುತ್ತಿದೆ. ಈ ಎಡದಂಡೆಯ ನೀರು ಕಮಲಾಪುರ ಪಟ್ಟಣ ಸೇರಿದಂತೆ ಮಹಾಗಾಂವ, ದಸ್ತಾಪುರ, ಕುರಿಕೋಟಾ, ಶಿರಗಾಪೂರ, ಭೂಸಣಗಿ, ಕಣ್ಣುರ್, ಅಂಕಲಗಾ, ನಾಗೂರ ಸಹಿತ ಹಲವು ಗ್ರಾಮಗಳಿಗೆ ಉಪಯೋಗವಾಗುತ್ತಿದ್ದು, ಈ ಭಾಗದ ಪ್ರಮುಖವಾದ ಕಬ್ಬು ಬೆಳೆಗೆ ಪ್ರಮುಖ ಜಲಸಂಪತ್ತಾಗಿದೆ.

ಪ್ರಸ್ತುತ ವರ್ಷದ ಮಳೆ ಇಲ್ಲದೆ ರೈತರ ಬೆಳೆಗಳು ಸಂಪೂರ್ಣ ಬಾಡಿ ಹೋಗಿ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತೆ ಪರದಾಡುವಂತಹ ಪರಿಸ್ಥಿತಿ ಇದ್ದು, ಎಡದಂಡೆ ನೀರಿನ ವ್ಯರ್ಥ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ. ಸಾರ್ವಜನಿಕರು ಕೆಟ್ಟುಹೋದ ಗೇಟ್‌ ದುರಸ್ತಿಗೊಳಿಸುವಂತೆ ಸಾಕಷ್ಟು ಮನವಿ ಮಾಡಿದ್ದರೂ ಅಧಿಕಾರಿಗಳು ತಮಗೂ ಅದಕ್ಕೂ ಸಂಬಂಧವಿಲ್ಲದಂತಿದ್ದಾರೆ. ರೈತರು ಈ ಕುರಿತು ಎಚ್ಚರಿಸಲು ಕರೆ ಮಾಡಿದರೆ ಸಂಬಂಧಿತ ಅಧಿಕಾರಿಗಳು ಕರೆ ಸ್ವೀಕರಿಸದೆ ನುಣುಚಿಕೊಳ್ಳುತ್ತಿದ್ದರೆ ಎಂದು ಸಾರ್ವಜನಿಕರು ದೂರಿದ್ದಾರೆ. ಕೂಡಲೇ ಎಡದಂಡೆಯ ಗೇಟ್‌ ಸರಿಪಡಿಸಬೇಕು, ತಪ್ಪಿದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ರೈತರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಪ್ರಸ್ತುತ ವರ್ಷ ಮಳೆ ಇಲ್ಲದೆ ರೈತರು ಬಿತ್ತನೆಮಾಡಿದ ಬೆಳೆಗಳು ಸಂಪೂರ್ಣ ಬಾಡಿ ಹೋಗಿವೆ. ಜನ ಜಾನುವಾರುಗಳು ಕುಡಿಯಲು ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಇಲ್ಲದೆ ಬರಗಾಲ ಛಾಯೆ ಆವರಿಸಿದೆ. ಇಂತಹ ಸಂದರ್ಭ ನೀರು ಸಂರಕ್ಷಣೆ ಮಾಡಿಕೊಂಡು ಇಡಬೇಕಾದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ನಿತ್ಯ ಸಾಕಷ್ಟು ನೀರು ವ್ಯರ್ಥವಾಗುತ್ತಿದ್ದು, ಒಂದು ವರ್ಷವಾದರೂ ಗೆಟ್ ದುರಸ್ಥಿಗೆ ಮುಂದಾಗಿಲ್ಲ. ಮುಂದಿನ ದಿನಗಳಲ್ಲಿ ರೈತರಿಗೆ ಜಾನುವಾರುಗಳಿಗೆ ನೀರಿನ ಸಮಸ್ಯೆ ಆದರೆ ಅಧಿಕಾರಿಗಳೇ ಹೊಣೆಗಾರರು ಎಂದು ಕಮಲಾಪುರ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸುಭಾಷ್ ಬಿರಾದಾರ ಎಚ್ಚರಿಸಿದರು.