ಸಾರಾಂಶ
ನರಸಿಂಹರಾಜಪುರ, ಈ ಬಾರಿ ಹಿಂದೂ ಮಹಾಗಣಪತಿ ಹಿಂದೂ ಸಮಾಜದ ರಕ್ಷಣೆ ಹಾಗೂ ಸಂಘಟನೆ ಸಂದೇಶವನ್ನು ಹೊತ್ತು ತಂದಿದ್ದಾನೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್‌ಕುಮಾರ್ ಹೇಳಿದರು.
2 ನೇ ವರ್ಷದ ಹಿಂದೂ ಮಹಾ ಗಣಪತಿ ಗಣೇಶೋತ್ಸವದಲ್ಲಿ ಸನ್ಮಾನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಈ ಬಾರಿ ಹಿಂದೂ ಮಹಾಗಣಪತಿ ಹಿಂದೂ ಸಮಾಜದ ರಕ್ಷಣೆ ಹಾಗೂ ಸಂಘಟನೆ ಸಂದೇಶವನ್ನು ಹೊತ್ತು ತಂದಿದ್ದಾನೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್‌ಕುಮಾರ್ ಹೇಳಿದರು.
ಬುಧವಾರ ರಾತ್ರಿ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದ ಬೃಹತ್ ವೇದಿಕೆಯಲ್ಲಿ ಹಿಂದೂ ಮಹಾಗಣಪತಿ ಸಮಿತಿ ಆಯೋಜಿಸಿದ್ದ ದಾನಿಗಳಿಗೆ ಗೌರವ ಸಮರ್ಪಣೆ ಹಾಗೂ ಮನರಂಜನಾ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ಸನಾತನ ಹಿಂದೂ ಧರ್ಮದ ನೆಲೆ ಬೀಡು. ಪ್ರಸ್ತುತ ಹಿಂದೂ ಸಂಘಟನೆ, ಸ್ವಾಭಿಮಾನದ ಬೀಜ ಬಿತ್ತಬೇಕಾಗಿದೆ. ಕಳೆದ ಬಾರಿ ಹಿಂದೂ ಮಹಾಗಣಪತಿ ಗಣೇಶೋತ್ಸವ ಅದ್ಧೂರಿಯಾಗಿ ನಡೆದು ಎನ್.ಆರ್. ಪುರದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಈ ಬಾರಿಯೂ ಇನ್ನೊಂದು ಇತಿಹಾಸಕ್ಕೆ ಮುನ್ನುಡಿಯಾಗಲಿದೆ. ನಮ್ಮ ರಾಷ್ಟ್ರದ, ಸಮಾಜದ ಸವಾಲುಗಳೇನೇ ಇರಲಿ ಹಿಂದೂಗಳು ಜಾಗೃತರಾಗಬೇಕು. ಹಿಂದೂ ರಾಷ್ಟ್ರದ ನಿರ್ಮಾಣಕ್ಕೆ ಹಿಂದೂಗಳೆಲ್ಲರೂ ಜಾಗೃತರಾಗಿ ಸಂಘಟಿತರಾಗಬೇಕು. ನಮ್ಮಲ್ಲಿನ ಒಗ್ಗಟ್ಟು, ಜಾಗೃತಿ ಕೊರತೆಯಿಂದಲೇ ನಾವು ಸವಾಲುಗಳನ್ನು ಎದುರಿಸುವಂತಾಗಿದೆ. ಲೋಕಮಾನ್ಯ ಬಾಲ ಗಂಗಾಧರ ತಿಲಕರು ಹಿಂದೂಗಳನ್ನು ಒಗ್ಗೂಡಿಸಲು, ಜಾಗೃತರನ್ನಾಗಿಸಲು ಗಣೋಶೋತ್ಸವ ಆಚರಣೆ ಜಾರಿಗೆ ತಂದಿದ್ದಾರೆ ಎಂದರು.ಹಿಂದೂ ಮಹಾಗಣಪತಿ ಸಂಘದ ಮಾಜಿ ಅಧ್ಯಕ್ಷ ಎಂ.ಎನ್.ನಾಗೇಶ್ ಮಾತನಾಡಿ, ಗಣೇಶನ ಆಚರಣೆಗೆ, ಹಿಂದೂಗಳ ಹಬ್ಬಗಳಿಗೆ ಅನೇಕ ತೊಡಕುಗಳು ಬರುತ್ತವೆ. ಇದನ್ನು ನಿವಾರಿಸಲು ಎಲ್ಲರೂ ಒಗ್ಗೂಡಬೇಕಾಗಿದೆ. ಗಣಪತಿ ಈ ಭಾಗದ ರೈತರ ಮರಣ ಶಾಸನ ಬರೆಯು ವಂತಾಗಿರುವ ಅರಣ್ಯ ಕಾಯ್ದೆಗಳನ್ನು ತಿದ್ದುಪಡಿ ಆಗುವಂತಹ ವರ ಕರುಣಿಸಲಿ ಎಂದು ಎಲ್ಲರೂ ಪ್ರಾರ್ಥಿಸೋಣ. ನಮ್ಮ ಪೂರ್ವಿಕರು ಉಳಿಸಿ ಕೊಂಡು ಬಂದಿರುವ ನಮ್ಮ ಬದುಕನ್ನು ಉಳಿಸಿಕೊಳ್ಳಬೇಕು ಎಂದರು.ಸಂಘದ ಅಧ್ಯಕ್ಷ ಹಂಚಿನಮನೆ ರಾಘವೇಂದ್ರ ಮಾತನಾಡಿ, ಕಳೆದ ಬಾರಿ ಎಲ್ಲರೂ ಸಹಕಾರ ನೀಡಿದ್ದೀರಿ. ಈ ಬಾರಿಯೂ ವಿಜೃಂಭಣೆಯ ಗಣೇಶೋತ್ಸವಕ್ಕೂ ಸಾಕ್ಷಿಯಾಗಬೇಕು. ಎಲ್ಲಾ ದಾನಿಗಳ ಸಹಕಾರದಿಂದ ಅತ್ಯುತ್ತಮ ಕಾರ್ಯಕ್ರಮ ಜರುಗುತ್ತಿವೆ. ಇಂತಹ ದಾನಿಗಳ ಸಹಕಾರ ಸದಾ ಇರಲಿ ಎಂದರು.ಕಾರ್ಯಕ್ರಮದಲ್ಲಿ ಗಣೇಶೋತ್ಸವಕ್ಕೆ ಸಹಕಾರ ನೀಡಿದ ದಾನಿಗಳು, ಗಣೇಶೋತ್ಸವಕ್ಕೆ ಶ್ರಮಿಸಿದವರನ್ನು ಗೌರವಿಸಲಾಯಿತು. ನಂತರ ಹುಲಿ ಕಾರ್ತಿಕ್ ನೇತೃತ್ವದಲ್ಲಿ ಗಿಚ್ಚಗಿಲಿಗಿಲಿ ಹಾಸ್ಯ ಕಾರ್ಯಕ್ರಮ ನಡೆಯಿತು. ಸಾವಿರಾರು ಜನ ಜಮಾಯಿಸಿದ್ದರು.ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಜಿಲ್ಲಾ ಕಾರ್ಯದರ್ಶಿ ದಿವಿರ್ ಮಲ್ನಾಡ್, ತಾಲೂಕು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸತ್ಯನಾರಾಯಣ ಕೋಣನಕೆರೆ, ತಾಲೂಕು ಸಹ ಕಾರ್ಯದರ್ಶಿ ಮದನ್ , ತಾಲೂಕು ಸಂಚಾಲಕ ಅನುಪ್, ಸಹ ಸಂಚಾಲಕ ಅಭಿಗಡಿಗೇಶ್ವರ, ಮುಖಂಡರಾದ ಅರುಣ್‌ಕುಮಾರ್ ಜೈನ್, ರವಿಸಂಜಯ್, ಧನಂಜಯ, ಚೇತನ್ ಸಾರ್ಯ, ಸಚಿನ್ ಹಾಗೂ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.