ಜಿಲ್ಲೆಯಲ್ಲಿ ಶ್ರದ್ಧಾ, ಭಕ್ತಿ, ಸಂಭ್ರಮದ ಗಣೇಶ ಚತುರ್ಥಿ

| Published : Aug 29 2025, 01:00 AM IST

ಸಾರಾಂಶ

ಕಳೆದ ವರ್ಷಕ್ಕಿಂತಲೂ ಈ ವರ್ಷ ಪರಿಸರಸ್ನೇಹಿ ಗಣಪನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿತ್ತು. ಸಾಕಷ್ಟು ಜನರು ಹೆಚ್ಚಿನ ಹಣ ಕೊಟ್ಟು ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ಖರೀದಿಸಿ ಪ್ರತಿಷ್ಠಾಪಿಸಿದರು. ಈ ವರ್ಷ ಉತ್ತಮ ಮಳೆ ಬಿದ್ದಿದ್ದರಿಂದ ಗಣೇಶ ಹಬ್ಬದ ಸಂಭ್ರಮ ಕಡಿಮೆಯಾಗಿರಲಿಲ್ಲ. ವಿಘ್ನ ನಿವಾರಕನನ್ನು ಮನೆಗಳಿಗೆ ಬರಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿಘ್ನ ನಿವಾರಕ, ಲಂಬೋಧರ, ಏಕದಂತ, ಮೂಷಿಕವಾಹನ, ವಿನಾಯಕ ಹೀಗೆ ಹಲವಾರು ನಾಮಧೇಯಗಳಿಂದ ಕರೆಸಿಕೊಳ್ಳುವ ಗಣಪತಿಯನ್ನ ಬುಧವಾರ ಜಿಲ್ಲೆಯಾದ್ಯಂತ ವಿಜೃಂಬಣೆಯಿಂದ ಆಚರಿಸಿಸಲಾಯಿತು.

ಚಿಕ್ಕಬಳ್ಳಾಪುರ ನಗರದ ಪ್ರತಿಯೊಂದು ವಾರ್ಡ್ ಗಲ್ಲಿ ಬೀದಿಗಳಲ್ಲೂ ಗಣೇಶ ಪ್ರತಿಷ್ಠಾಪನೆ ಮಾಡಿದ್ದಾರೆ. ಹತ್ತಾರು ವರ್ಷಗಳಿಂದ ಗಣೇಶ ಹಬ್ಬ ಆಚರಣೆಯಲ್ಲಿ ತೊಡಗಿಸಿಕೊಂಡಿರುವ ಗಣೇಶ ಭಕ್ತರು ಹತ್ತಾರು ಭಂಗಿಗಳಲ್ಲಿ ವಿವಿಧ ದೇವಾಲಯಗಳ ರೂಪದಲ್ಲಿ ಮಂಟಪ ರಚಿಸಿ ಮೂರು ರಿಂದ ಹದಿನೈದು ದಿನಗಳ ಕಾಲ ಪೂಜಿಸಿ ನಂತರ ನೀರಿಗೆ ಬಿಡುವುದು ರೂಢಿಯಾಗಿದೆ.ದೇವಾಲಯಗಳಲ್ಲಿ ಅಲಂಕಾರ

ಜಿಲ್ಲೆಯ ಪ್ರತಿ ಮನೆಯಲ್ಲಿಯೂ ಹಬ್ಬದ ಸಡಗರ ಮನೆ ಮಾಡಿತ್ತು. ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜೆ ನಡೆಯಿತು. ಬೀದಿ ಬೀದಿಗಳಲ್ಲಿ ಯುವಕರು ನಾನಾ ಭಂಗಿಯ ಗಣೇಶನ ಮೂತಿಗಳನ್ನು ಪ್ರತಿಷ್ಠಾಪಿಸಿ ಸಂಭ್ರಮಿಸಿದರು. ನಗರದ ಗಣಪತಿ ದೇವಾಲಯ, ಮಹಾಕಾಳಿ ದೇವಾಲಯ,ಜಾಲಾರಿ ಗಂಗಮಾಂಭ ದೇವಾಲಯ, ಬಲಮುರಿ ಗಣಪತಿ, ವಾಪಸಂದ್ರ ವಾರ್ಡ್, ಎಪಿಎಂಸಿ ಬಳಿಯ ಮುನಿಸಿಪಲ್ ಲೇಔಟ್,ಭುವನೇಶ್ವರಿ ವೃತ್ತ,ಪ್ರಶಾಂತ ನಗರ, ಹೆಚ್.ಎಸ್.ಗಾರ್ಡನ್,ಕಂದವಾರದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.

ಅಲ್ಲದೆ ಅಂಬೇಡ್ಕರ್ ನಗರ, ಬಾಪೂಜಿ ನಗರ ಸೇರಿಂತೆ ನಗರದ ಪ್ರತಿ ವಾರ್ಡ್ ಗಳಲ್ಲಿ ಮತ್ತು ಗ್ರಾಮೀಣ ಭಾಗದ ಪೆರೇಸಂದ್ರ, ಅರೂರು, ಮಂಡಿಕಲ್, ಅಣಕನೂರು,ನಾಯನಹಳ್ಳಿ, ಪಟ್ರೇನಹಳ್ಳಿ,ನಂದಿ,ಮಂಚನಬಲೆ,ದಿಬ್ಬೂರು ಸೇರಿದಂತೆ ಪ್ರತಿ ಗ್ರಾಮಗಳಲ್ಲಿ ಗಣೇಶೋತ್ಸವವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.

ಪರಿಸರ ಸ್ನೇಹಿ ಮೂರ್ತಿಗೆ ಬೇಡಿಕೆಕಳೆದ ವರ್ಷಕ್ಕಿಂತಲೂ ಈ ವರ್ಷ ಪರಿಸರಸ್ನೇಹಿ ಗಣಪನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿತ್ತು. ಸಾಕಷ್ಟು ಜನರು ಹೆಚ್ಚಿನ ಹಣ ಕೊಟ್ಟು ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ಖರೀದಿಸಿ ಪ್ರತಿಷ್ಠಾಪಿಸಿದರು. ಈ ವರ್ಷ ಉತ್ತಮ ಮಳೆ ಬಿದ್ದಿದ್ದರಿಂದ ಗಣೇಶ ಹಬ್ಬದ ಸಂಭ್ರಮ ಕಡಿಮೆಯಾಗಿರಲಿಲ್ಲ. ವಿಘ್ನ ನಿವಾರಕನನ್ನು ಮನೆಗಳಿಗೆ ಬರಮಾಡಿಕೊಂಡರು.ನಗರದ ಮಹಾಕಾಳಿ ದೇವಾಲಯದಲ್ಲಿ ಮಹಾಕಾಳಿ ಯುವಕರ ಸಂಘವು ಬೃಹತ್ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರೆ, ಜಾಲಾರಿ ಗಂಗಮಾಂಬ ದೇವಾಲಯದಲ್ಲಿ ವಿಶೇಷ ದರ್ಭಾರ್ ಗಣೇಶ ಮೂರ್ತಿ, ದೊಡ್ಡ ಭಜನೆ ಮನೆ ರಸ್ತೆಯ ಶ್ರೀಗಜ ಗಣಪತಿ ಗೆಳೆಯರ ಬಳಗ ಗೌರಿ ಹಾಗೂ ಚಂದ್ರನ ಮೇಲೆ ಕುಳಿತಿರುವ ಗಣೇಶ, ಧರ್ಮಛತ್ರ ರಸ್ತೆಯಲ್ಲಿ ದಶಾವತಾರ ಗಣಪತಿ, ವಾಪಸಂದ್ರ ವಾರ್ಡ್ ನ ವಿನಾಯಕ ಗೆಳೆಯರ ಬಳಗ, ಎಪಿಎಂಸಿ ಬಳಿಯ ಮುನಿಸಿಪಲ್ ಲೇಔಟ್ ನ ಶ್ರೀ ಸಿದ್ದಿ ವಿನಾಯಕ ಗೆಳೆಯರ ಸಂಘದಿಂದ ಈಶಾದ ಆದಿಯೋಗಿ ಗಣೇಶ, ಚಾಮರಾಜ ಪೇಟೆ ಗಣಪತಿ ಗೆಳೆಯರ ಬಳಗ ಸೇರಿದಂತೆ ನಗರದ ನಾನಾ ಭಾಗಗಳಲ್ಲಿ ನಾನಾ ಭಂಗಿಗಳ ಬೃಹತ್ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದರು. ನಗರ ಮತ್ತು ಗ್ರಾಮೀಣ ಬಾಗಗಳಲ್ಲಿ ಇರುವ ಬೇವು ಮತ್ತು ಅಶ್ವತ್ತ ವೃಕ್ಷಗಳಿರುವ ನಾಗರಕಟ್ಟೆಗಳಿಗೆ ಹಾಗೂ ಹುತ್ತಗಳಿಗೆ ಮುಂಜಾನೆಯಿಂದಲೇ ಕುಟುಂಬಗಳ ಸಮೇತ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದ ಭಕ್ತರು ನಾಗರಕಲ್ಲು, ಹುತ್ತಗಳಿಗೆ ಪೂಜೆ ಸಲ್ಲಿಸಿ ಹಾಲೆರೆದು ಪೂಜೆ ಸಲ್ಲಿಸಿದರು. ಜಿಲ್ಲೆಯಲ್ಲಿ ಜನತೆ ಮಂಗಳವಾರ ಹಾಗೂ ಬುಧವಾರ ಗೌರಿ, ಗಣೇಶ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.

ನಿಷೇಧಿತ ಪಟಾಕಿಗಳ ಬಳಕೆಜಿಲ್ಲಾಡಳಿತ ಬಾರಿ ಸದ್ದು ಬರುವ ಪಟಾಕಿ ನಿಷೇಧ ಹೇರಿದ್ದು ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ ನೀಡಿತ್ತು. ಆದರೆ ಹಸಿರು ಪಟಾಕಿ ಲೇಬಲ್ ಹಚ್ಚಿ ಹೆಚ್ಚಿನ ಸದ್ದು ಬರುವ ಪಟಾಕಿಗಳನ್ನು ಮಾರಾಟಗಾರರು ಮಾರುತ್ತಿದ್ದು, ಅಂತಹ ಭಾರಿ ಗಾತ್ರದ ಸದ್ದು ಬರುವ ಪಟಾಕಿಗಳನ್ನು ತಂದು ಸಿಡಿಸುತ್ತಿರುವ ದೃಶ್ಯ ಸಾಮಾನ್ಯವಾಗಿ ಎಲ್ಲಡೆ ಕಂಡು ಬರುತ್ತಿತ್ತು.