ಮುಂದಿನ ತಿಂಗಳು ಬರಲಿರುವ ಗಣೇಶ ಚತುರ್ಥಿ ಹಬ್ಬಕ್ಕಾಗಿ ವಿವಿಧ ಬಣ್ಣ, ವಿನ್ಯಾಸ, ಗಾತ್ರಗಳಲ್ಲಿ ರಚನೆಗೊಂಡ ಮಹಾಗಣೇಶನ ಮಣ್ಣಿನ ವಿಗ್ರಹಗಳು ದಾಂಡೇಲಿ ನಗರ ಮಾರುಕಟ್ಟೆಯಲ್ಲಿ ಬಂದಿವೆ.
ಮುಂಗಡ ಹಣ ನೀಡಿ ಮೂರ್ತಿ ಕಾಯ್ದಿರಿಸುತ್ತಿರುವ ಜನರು
ಕನ್ನಡಪ್ರಭ ವಾರ್ತೆ ದಾಂಡೇಲಿಮುಂದಿನ ತಿಂಗಳು ಬರಲಿರುವ ಗಣೇಶ ಚತುರ್ಥಿ ಹಬ್ಬಕ್ಕಾಗಿ ವಿವಿಧ ಬಣ್ಣ, ವಿನ್ಯಾಸ, ಗಾತ್ರಗಳಲ್ಲಿ ರಚನೆಗೊಂಡ ಮಹಾಗಣೇಶನ ಮಣ್ಣಿನ ವಿಗ್ರಹಗಳು ದಾಂಡೇಲಿ ನಗರ ಮಾರುಕಟ್ಟೆಯಲ್ಲಿ ಬಂದಿವೆ.
ದಾಂಡೇಲಿಯ ನಗರದ ಸಂಡೆ ಮಾರ್ಕೆಟ್, ಗಣೇಶನಗರ ಶ್ರೀ ಹಾಲೇಶ್ವರ ಮಂದಿರ, ಬರ್ಚಿ ರಸ್ತೆ, ಜೆ.ಎನ್. ರಸ್ತೆಗಳಲ್ಲಿ ಗಣೇಶನ ಮೂರ್ತಿಗಳು ಮಾರಾಟಕ್ಕಿಡಲಾಗಿದೆ. ಜನರು ಕುಟುಂಬ ಸಮೇತ ತೆರಳಿ ಗಣಪತಿ ಮೂರ್ತಿಗಳನ್ನು ಮುಂಗಡ ಹಣ ಕೊಟ್ಟು ಕಾಯ್ದಿರಿಸುತ್ತಿದ್ದಾರೆ.ವಿಭಿನ್ನ ಶೈಲಿಯ ಮೂರ್ತಿಗಳು:
ಶ್ರೀ ಆಂಜನೇಯನ ಮೇಲೆ ವಿರಾಜಮಾನ ಆಗಿರುವ ವಿಶ್ವೇಶ್ವರ, ಗಣಾಂಜನೇಯ, ಶೇಷಶಯನ, ಪಂಚಮುಖಿ, ನಟರಾಜ, ವೆಂಕಟೇಶ್ವರ, ಕಾಳಿಂಗ ಮರ್ಧನ, ಅರ್ಧನಾರೇಶ್ವರ, ಶಿವಗಣಪ, ಗಜಗಣಪ, ಸಿಂಹಾಸನದ ಮೇಲೆ ಆಸೀನನಾಗಿರುವ ದರ್ಬಾರ್ ಗಣಪ, ಕಮಲದ ಹೂವಿನ ಮೇಲೆ ಕುಳಿತ ಗಣಪ, ಇಲಿ ಮೇಲೆ ಸವಾರಿ ಹೊರಟ ಡೊಳ್ಳು ಹೊಟ್ಟೆ ಗಣಪ... ಹೀಗೆ ವಿಭಿನ್ನ ಶೈಲಿಯಲ್ಲಿ ಒಂದು ಅಡಿಯಿಂದ ಐದು ಅಡಿ ಎತ್ತರದ ಮೂರ್ತಿಗಳು ಮಾರುಕಟ್ಟೆಯಲ್ಲಿ ಮಾರಾಟಕ್ಕಿವೆ.ನಗರದಲ್ಲಿ ಹಲವು ಕಡೆ ತಯಾರಿಕೆ:
ನಗರದಲ್ಲಿ ಗಣೇಶ ಮೂರ್ತಿಗಳ ತಯಾರಿಕೆ ನಡೆಯುತ್ತಿದೆ. ಆದರೆ ಅದರಲ್ಲಿ ಕೆಲವರು ಸ್ಥಳೀಯ ಕಲಾವಿದರು, ಉಳಿದವರು ಬೇರೆ ತಾಲೂಕು, ಜಿಲ್ಲೆಗಳಿಂದ ಗಣೇಶಮೂರ್ತಿಯನ್ನು ತರಸಿ ಮಾರಾಟ ಮಾಡುತ್ತಿದ್ದಾರೆ ಎನ್ನುತ್ತಾರೆ ಗಣೇಶ ಮೂರ್ತಿ ತಯಾರಕ ರವಿ ಶಾನಭಾಗ.ಪಿಒಪಿ ಮೂರ್ತಿಗಳ ಮಾರಾಟ ಮತ್ತು ಪ್ರತಿಷ್ಠಾಪನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರ ಬಗ್ಗೆ ಮೂರ್ತಿ ತಯಾರಕರು ಮತ್ತು ವ್ಯಾಪಾರಸ್ಥರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನಗರಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ನೀಡಲಾಗಿದೆ. ಇದರಿಂದ ಮಣ್ಣಿನಲ್ಲಿ ತಯಾರಿಸಿದ, ಪರಿಸರಕ್ಕೆ ಪೂರಕವಾದ ಮೂರ್ತಿಗಳಿಗೆ ಬೇಡಿಕೆ ಬರಲು ಸಾಧ್ಯ ಎನ್ನುತ್ತಾರೆ ಮೂರ್ತಿ ಮಾಡುವವರು.