ಹಾವೇರಿಯಲ್ಲಿ ಭಕ್ತಿ ಭಾವದಿಂದ ಗಣೇಶ ಮೂರ್ತಿಗಳ ವಿಸರ್ಜನೆ

| Published : Sep 01 2025, 01:04 AM IST

ಸಾರಾಂಶ

ಈ ಬಾರಿ ಡಿಜೆ ಸದ್ದಿನ ಮೆರವಣಿಗೆಗೆ ಅನುಮತಿ ನೀಡದ ಹಿನ್ನೆಲೆ ಸಾಂಪ್ರದಾಯಿಕವಾಗಿ ವಿಸರ್ಜನೆ ಮಾಡುತ್ತಿರುವುದು ಕಂಡುಬಂದಿತು.

ಹಾವೇರಿ: ನಗರದ ಅಕ್ಕಮಹಾದೇವಿ ಹೊಂಡದ ಸಮೀಪ ಗಣೇಶ ವಿಸರ್ಜನೆಗಾಗಿ ತೋಡಿರುವ ತಾತ್ಕಾಲಿಕ ಬಾವಿಯಲ್ಲಿ ಭಾನುವಾರ ಸಂಜೆ ವಿವಿಧ ಗಜಾನನ ಸಮಿತಿ ಹಾಗೂ ಸಾರ್ವಜನಿಕರು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.ಗಣೇಶ ಚತುರ್ಥಿ ಅಂಗವಾಗಿ ಕಳೆದ ಬುಧವಾರ ನಗರ ಸೇರಿದಂತೆ ಜಿಲ್ಲಾದ್ಯಂತ ಗಣಪತಿ ಮೂರ್ತಿಗಳನ್ನು ತಂದು ಸಾರ್ವಜನಿಕವಾಗಿ, ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಚೌತಿ ನಡೆದು ಐದು ದಿನಗಳಾಗುತ್ತಿದ್ದಂತೆ ಭಾನುವಾರ ಸಂಜೆ ನಗರದ ವಿವಿಧ ಏರಿಯಾಗಳ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣಪ ಮೂರ್ತಿಗಳನ್ನು ಮೆರವಣಿಗೆ ನಡೆಸುವ ಮೂಲಕ ಕರೆತಂದರು. ಮೆರವಣಿಗೆ ಸಂದರ್ಭದಲ್ಲಿ ಡೊಳ್ಳುವಾದ್ಯ, ಭಜನೆ ಸೇರಿದಂತೆ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ನಡೆಸಿದರು.ಇದರ ಜತೆಗೆ ಕೆಲವರು ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ಕೂಡ ಸರಳವಾಗಿ ಮೆರವಣಿಗೆ ಮಾಡುವ ಮುಖಾಂತರ ಅಕ್ಕಮಹಾದೇವಿ ಹೊಂಡಕ್ಕೆ ಕರೆತಂದು ವಿಶೇಷ ಪೂಜೆ ಸಲ್ಲಿಸಿ, ಗಣಪನನ್ನು ವಿಸರ್ಜಿಸಿದರು. ಇದಕ್ಕೂ ಮುಂಚೆ ನಗರದ ವಿವಿಧೆಡೆ ಆಯೋಜಕರು ಅನ್ನ ಸಂತರ್ಪಣೆಯನ್ನು ಏರ್ಪಡಿಸಿದ್ದರು.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿಯೂ ಕೆಲ ಸಾರ್ವಜನಿಕ ಗಣೇಶ ಮೂರ್ತಿಗಳನ್ನು, ಮನೆಗಳಲ್ಲಿ ಪ್ರತಿಷ್ಠಾಪಿಸಿದ ಗಣಪ ಮೂರ್ತಿಗಳನ್ನು ಗ್ರಾಮದ ಬಳಿ ಇರುವ ನದಿ, ಹೊಂಡ, ಕೆರೆ, ಹಳ್ಳಗಳಲ್ಲಿ ಸಾಮೂಹಿಕವಾಗಿ ವಿಸರ್ಜನೆ ಮಾಡಿದರು. ಒಟ್ಟಾರೆಯಾಗಿ ಈ ಬಾರಿ ಡಿಜೆ ಸದ್ದಿನ ಮೆರವಣಿಗೆಗೆ ಅನುಮತಿ ನೀಡದ ಹಿನ್ನೆಲೆ ಸಾಂಪ್ರದಾಯಿಕವಾಗಿ ವಿಸರ್ಜನೆ ಮಾಡುತ್ತಿರುವುದು ಕಂಡುಬಂದಿತು.

ಗಜಾನನೋತ್ಸವ ಸಾಂಸ್ಕೃತಿಕ ಮೌಲ್ಯ ಬೆಳೆಸುವ ಹಬ್ಬ

ಶಿಗ್ಗಾಂವಿ: ಗಜಾನನೋತ್ಸವವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಇದು ಯುವಪೀಳಿಗೆಯಲ್ಲಿ ಶಿಸ್ತು, ಸಂಘಟನೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವ ಹಬ್ಬ. ಇಂಥ ಹಬ್ಬದ ಪ್ರಯುಕ್ತ ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಿರುವುದು ಸಮಾಜದ ಉಜ್ವಲ ಭವಿಷ್ಯದ ಸಂಕೇತವೆಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಅಭಿಪ್ರಾಯಪಟ್ಟರು.ಪಟ್ಟಣದ ಶ್ರೀ ಚನ್ನಪ್ಪ ಕುನ್ನೂರ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಗಜಾನನೋತ್ಸವದ ಅಂಗವಾಗಿ ಜರುಗಿದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಸ್ವಾತಂತ್ರ‍್ಯ ಸಂಗ್ರಾಮದ ದಿನಗಳಲ್ಲಿ ಬಾಲಗಂಗಾಧರನಾಥ ತಿಲಕರು ಸಾರ್ವಜನಿಕ ಗಣಪತಿಯನ್ನು ನಮ್ಮ ಸಂಸ್ಕೃತಿ, ಹಿಂದೂ ಧರ್ಮದ ಉಳಿವಿಗಾಗಿ ಪ್ರತಿಷ್ಠಾಪನೆ ಮಾಡಲು ಆರಂಭಿಸಿದರು. ಇದು ಧರ್ಮ ಜಾಗೃತಿಗೆ ಕಾರಣವಾಯಿತು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಪ್ರಾಚಾರ್ಯ ನಾಗರಾಜ ಜಿ. ದ್ಯಾಮನಕೊಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ವೀರಣ್ಣ ಬಡ್ಡಿ, ಸಿದ್ದಣ್ಣ ಮೊರಬದ, ಫಕ್ಕೀರಜ್ಜ ಯಲಿಗಾರ, ಶಿವಪುತ್ತಪ್ಪ ಜಕ್ಕಣ್ಣವರ, ವರ್ಧಮಾನ ಲಾಭಗೊಂಡ, ಮಂಜುನಾಥ ಬ್ಯಾಳಿ, ಮಂಜುನಾಥ ನಿರಲಗಿ, ಎಂ.ಎ. ಗಾಣಿಗೇರ, ಜಿ.ಎಂ. ಅರಗೋಳ, ಕೆ.ಎಸ್. ಬರದೆಲಿ ಮತ್ತು ಸಂಗೀತಾ ಹರಿಗೊಂಡ ಮತ್ತಿತರರು ಇದ್ದರು.