ಗದಗ ಬೆಟಗೇರಿಯಲ್ಲಿ 9ನೇ ದಿನದ ಗಣೇಶೋತ್ಸವದ ವಿಸರ್ಜನಾ ಮಹೋತ್ಸವ ಮಂಗಳವಾರ ಸಂಜೆ ಅತ್ಯಂತ ವಿಜೃಂಭಣೆ, ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ನೆರವೇರಿತು.

ಗಣೇಶ ವಿಸರ್ಜನೆಗೆ ಮೆರಗು ತಂದ ಮಳೆಕನ್ನಡಪ್ರಭ ವಾರ್ತೆ ಗದಗ

ಗದಗ ಬೆಟಗೇರಿಯಲ್ಲಿ 9ನೇ ದಿನದ ಗಣೇಶೋತ್ಸವದ ವಿಸರ್ಜನಾ ಮಹೋತ್ಸವ ಮಂಗಳವಾರ ಸಂಜೆ ಅತ್ಯಂತ ವಿಜೃಂಭಣೆ, ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ನೆರವೇರಿತು.

ಸಾರ್ವಜನಿಕ ಗಣೇಶ ಮಹಾಮಂಡಳಿಯಲ್ಲಿ ನೋಂದಾಯಿತಗೊಂಡಿದ್ದ ವಿವಿಧ ಮಂಡಳಿಗಳ ಗಣೇಶ ಮೂರ್ತಿಗಳ ಭವ್ಯ ಮೆರವಣಿಗೆಯು ಅವಳಿ ನಗರದ ಪ್ರಮುಖ ರಸ್ತೆಗಳಲ್ಲಿ ಅದ್ಧೂರಿಯಾಗಿ ಸಾಗಿತು.

ಶಿವಮುದ್ರ ಢೋಲ್ ತಾಶಾ ಸದ್ದು, ಯುವಪಡೆಯ ನೃತ್ಯ:

ನಗರದ ಪಂಡಿತ ಪಂಚಾಕ್ಷರ ಗವಾಯಿಗಳ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಪ್ರಾಂಗಣದಲ್ಲಿ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಪ್ರಮುಖ ಆಕರ್ಷಣೆಯಾಗಿತ್ತು. ಮಹಾರಾಷ್ಟ್ರದ ಪುಣೆಯಿಂದ ಆಗಮಿಸಿದ್ದ ಪ್ರಸಿದ್ಧ ಶಿವಮುದ್ರ ಢೋಲ್ ತಾಶಾ ತಂಡದ ನೂರಾರು ಕಲಾವಿದರು ಸಾಂಪ್ರದಾಯಿಕ ಉಡುಪಿನಲ್ಲಿ ನೀಡಿದ ಶಿಸ್ತುಬದ್ಧ ವಾದನ ಪ್ರದರ್ಶನ ಇಡೀ ನಗರವನ್ನು ಮಂತ್ರಮುಗ್ಧಗೊಳಿಸಿತು. ವಾದ್ಯಗಳ ಗಂಭೀರ ನಾದಕ್ಕೆ ತಕ್ಕಂತೆ ಯುವಕ ಯುವತಿಯರು, ಮಹಿಳೆಯರು, ವರ್ತಕರು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.

ಜಯಘೋಷಗಳು, ಸಿಡಿಮದ್ದು-ಪಟಾಕಿಗಳ ಅಬ್ಬರ ಹಾಗೂ ಭಕ್ತಿಗೀತೆಗಳ ಝೇಂಕಾರ ಮೆರವಣಿಗೆಗೆ ವಿಶೇಷ ಕಳೆ ತಂದವು.

ಹೂವಿನ ಹಾಸು, ಭಕ್ತಿಭಾವದ ಪೂಜೆ:

ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ರಸ್ತೆಗಳನ್ನು ರಂಗೋಲಿ ಹಾಗೂ ಹೂವುಗಳಿಂದ ಶೃಂಗರಿಸಲಾಗಿತ್ತು. ಮೆರವಣಿಗೆ ಆರಂಭಕ್ಕೂ ಮುನ್ನ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳು ಗಣೇಶನಿಗೆ ವಿಶೇಷ ಮಹಾಮಂಗಳಾರತಿ ನೆರವೇರಿಸಿ ಬೀಳ್ಕೊಟ್ಟರು.

ಭೀಷ್ಮ ಕೆರೆಯಲ್ಲಿ ವೈಜ್ಞಾನಿಕ ವಿಸರ್ಜನೆ:

ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಭೀಷ್ಮ ಕೆರೆಯಲ್ಲಿ ಗಣೇಶ ಮೂರ್ತಿಗಳ ಸುಗಮ ಮತ್ತು ಪರಿಸರಸ್ನೇಹಿ ವಿಸರ್ಜನೆಗೆ ಗದಗ ಬೆಟಗೇರಿ ನಗರಸಭೆ ಆಡಳಿತದ ವತಿಯಿಂದ ಬೃಹತ್ ಕ್ರೇನ್ ಹಾಗೂ ಪ್ರತ್ಯೇಕ ವಿಸರ್ಜನಾ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆ ನಗರದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು. ಸಂಜೆ ವೇಳೆಗೆ ಎಪಿಎಂಸಿ ಗಣೇಶ ಸೇರಿದಂತೆ ಅವಳಿ ನಗರದ ವಿವಿಧ ಬಡಾವಣೆಗಳ ಗಣಪತಿ ಮೂರ್ತಿಗಳನ್ನು ಭಕ್ತಿಪೂರ್ವಕವಾಗಿ ಭೀಷ್ಮ ಕೆರೆಯ ನೀರಿನಲ್ಲಿ ವಿಸರ್ಜಿಸಲಾಯಿತು.ಮಳೆಯಲ್ಲಿಯೇ ಕುಣಿದ ಯುವಕರು:

ರಾತ್ರಿಯ ವೇಳೆಗೆ ಮೆರವಣಿಗೆ ಹುಯಿಲಗೋಳ ನಾರಾಯಣ ರಾವ್ ವೃತ್ತದಲ್ಲಿ ಆಗಮಿಸುತ್ತಿದ್ದಂತೆ ಮಳೆ ಜೋರಾಯಿತು. ಮಳೆಯಲ್ಲಿಯೇ ಯುವಕರು ಗಣೇಶ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು.