ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದಲ್ಲಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಭವನಕ್ಕೆ ಜಾಗ ಗುರುತಿಸಿ, ಭವನಕ್ಕೆ ಅನುದಾನ ನೀಡುವುದಾಗಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಭರವಸೆ ನೀಡಿದ್ದಾರೆ.ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ ಮತ್ತು ತಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಸ್ತ್ರೀಶಕ್ತಿ ತಾಲೂಕು ಮಹಿಳಾ ಒಕ್ಕೂಟ, ಅಂಗನವಾಡಿ ನೌಕರರ ಸಂಘದ ಆಶ್ರಯದಲ್ಲಿ ಬುಧವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಬೇಟಿ ಬಚಾವೋ ಬೇಟಿ ಪಢಾವೋ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಟಿಎಲ್‌ಎಂ ಪ್ರದರ್ಶನ ವೀಕ್ಷಣೆ ಬಳಿಕ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರ ಬಹುದಿನದ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಕ್ಷೇತ್ರದಲ್ಲಿ ಅಂಗನವಾಡಿ ಕೇಂದ್ರಕ್ಕೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸ್ವಂತ ಕಟ್ಟಡಗಳಿಲ್ಲ ಹಾಗೂ ಕಟ್ಟಡಗಳ ದುರಸ್ತಿಯಾಗಬೇಕು ಎಂಬ ಬೇಡಿಕೆ ನನ್ನ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ಹಾಗೂ ದುರಸ್ತಿಗೆ ಅನುದಾನ ನೀಡುವೆ ಎಂದರು.
ಶೇ.99.9 ಪ್ರಗತಿ:ಗೃಹಲಕ್ಷ್ಮೀ ಯೋಜನೆಯಲ್ಲಿ ಶೇ.99.9 ರಷ್ಟು ಯಶಸ್ವಿಯಾಗಿದೆ. ಕೇವಲ 56 ಮಂದಿ ಮಹಿಳೆಯರಿಗೆ ಮಾತ್ರ ತಾಂತ್ರಿಕ ತೊಂದರೆಯಿಂದ ಗೃಹಲಕ್ಷ್ಮೀ ಯೋಜನೆ ತಲುಪಿಲ್ಲ. ರಾಜ್ಯ ಸರ್ಕಾರ ಮಹಿಳೆಯರಿಗೆ ಸಾಕಷ್ಟು ಯೋಜನೆ ಜಾರಿಗೆ ತಂದಿದ್ದು, ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಪುರಸಭೆ ಅಧ್ಯಕ್ಷ ಮಧುಸೂದನ್, ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್‌ಆರ್‌ಎಸ್ ರಾಜಶೇಖರ್, ಎಂ.ಪ್ರದೀಪ್, ತಾಲೂಕು ಅಧ್ಯಕ್ಷ ಉಮಾಪತಿ, ತಹಸೀಲ್ದಾರ್ ಟಿ.ರಮೇಶ್ ಬಾಬು ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ, ಬಾಲ ನ್ಯಾಯ ಮಂಡಳಿ ಸದಸ್ಯೆ ಸರಸ್ವತಿ ಎನ್.ಎಂ,ಪುರಸಭೆ ಸದಸ್ಯರಾದ ರಾಜಗೋಪಾಲ, ಶ್ರೀನಿವಾಸ್ (ಕಣ್ಣಪ್ಪ), ಎಲ್.ನಿರ್ಮಲ, ಮಹದೇವಮ್ಮ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೇಮಾವತಿ ಎಂ,ತಾಲೂಕು ಸ್ತ್ರೀ ಶಕ್ತಿ ಮಹಿಳಾ ಒಕ್ಕೂಟ ಅಧ್ಯಕ್ಷೆ ದಾಕ್ಷಾಯಣಮ್ಮ, ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಂ.ಎಸ್.ಸುಜಯ ಸೇರಿದಂತೆ ಸಾವಿರಾರು ಮಂದಿ ಮಹಿಳೆಯರು ಇದ್ದರು.ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀ ಪಿ, ಕೆಪಿಸಿಸಿ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಅಂದಲಿ, ಸಮತಾ ಸೊಸೈಟಿ ಅಧ್ಯಕ್ಷೆ ದೀಪಾ ಬುದ್ದೆ, ಪೊಲೀಸ್ ಇಲಾಖೆಯ ಪಿ.ಮಹೇಶ್ವರಿ ವಿಶೇಷ ಸಾಧಕರು ಎಂದು ಶಾಸಕರು ಸನ್ಮಾನಿಸಿದರು.
ಸರ್ಕಾರದಲ್ಲಿ ಯಾವುದೇ ಸಮಸ್ಯೆಗಳಿಲ್ಲವಿಪಕ್ಷಗಳು ಸರ್ಕಾರದಲ್ಲಿ ಹಣವಿಲ್ಲ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಆದರೆ, ಗುಂಡ್ಲುಪೇಟೆಯಲ್ಲಿ ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿವೆ. ಜೊತೆಗೆ ಅನೇಕ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ಸರ್ಕಾರದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಸಿಎಂ, ಡಿಸಿಎಂ ಹಾಗು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಹೊಸ ಯೋಜನೆಗೆ ಚಾಲನೆ ಸಿಗಲಿದೆ. ರಾಜ್ಯದಲ್ಲಿ ಸ್ತ್ರೀಯರಿಗೆ ಶಕ್ತಿ ತುಂಬಿದ್ದೆ ನಮ್ಮ ಸರ್ಕಾರ ಎಂದರು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಅಲ್ಲದೆ ಜಿಲ್ಲೆಯಲ್ಲಿ ಪ್ರಮುಖ ಹುದ್ದೆಗಳು ಮಹಿಳೆಯರೇ ಇರುವ ಕಾರಣ ಯಾವ ಅಡೆತಡೆ ಇಲ್ಲದೆ ಕೆಲಸ ನಡೆಯುತ್ತಿವೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಪಂ ಸಿಇಒ, ಜಿಪಂ ಉಪ ಕಾರ್ಯದರ್ಶಿ, ಹೆಚ್ಚುವರಿ ಜಿಲ್ಲಾಧಿಕಾರಿ ಹೀಗೆ ಮಹಿಳೆಯರಿಗೆ ಜಿಲ್ಲೆಯಲ್ಲಿ ಪ್ರಾಶಸ್ತ್ಯ ಸಿಕ್ಕಿದೆ. ಮಹಿಳಾ ಅಧಿಕಾರಿಗಳು ಇರುವ ಕಾರಣ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದರು.
ಸಚಿವರು, ಜನಪ್ರತಿನಿಧಿಗಳ ಗೈರು!ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಬೇಟಿ ಬಚಾವೋ ಬೇಟಿ ಪಢಾವೋ ಕಾರ್ಯಕ್ರಮ ಹಾಗೂ ಟಿಎಲ್‌ಎಂ ಪ್ರದರ್ಶನ ಉದ್ಘಾಟಿಸಬೇಕಿದ್ದ ಪಶು ಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಗೈರಾಗಿದ್ದರು. ಸಂಸದ ಸುನೀಲ್ ಬೋಸ್, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಮಧು ಜಿ. ಮಾದೇಗೌಡ, ಸಿ.ಎನ್.ಮಂಜೇಗೌಡ, ಕೆ.ವಿವೇಕಾನಂದ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಪಂ ಸಿಇಒ ಮೋನಾ ರೋತ್, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಉಪಾಧ್ಯಕ್ಷ ಕೆ.ಎನ್.ಪ್ರದೀಪ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಂಜುನಾಥ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಷಣ್ಮುಗಂ ಎ.ಆರ್ ಗೈರಾಗಿದ್ದರು.