ಸಾರಾಂಶ
ಗದಗ: ಗದಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಗಣೇಶ ಚತುರ್ಥಿ ಆಚರಣೆಯ 5ನೇ ದಿನ ಭಕ್ತಿಭಾವದಿಂದ ಗಣೇಶ ವಿಸರ್ಜನೆ ನೆರವೇರಿತು.
ನಗರದ ಪ್ರಮುಖ ಬಡಾವಣೆಗಳು ಹಾಗೂ ಸಾರ್ವಜನಿಕರ ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ಮೆರವಣಿಗೆಯ ಮೂಲಕ ವಿಸರ್ಜಿಸಲಾಯಿತು. ಭಕ್ತರು ಶ್ರದ್ಧಾಭಕ್ತಿಗಳೊಂದಿಗೆ ಗಣೇಶನಿಗೆ ವಿದಾಯ ಹೇಳಿ ಮುಂದಿನ ವರ್ಷದ ಸಂಕಲ್ಪ ಮಾಡಿದರು.ಈ ಬಾರಿ ಡಿಜೆ ಸಂಗೀತಕ್ಕೆ ಜಿಲ್ಲಾಡಳಿತ ನೀಡಿದ್ದ ನಿಷೇಧದ ಹಿನ್ನೆಲೆಯಲ್ಲಿ, ಮೆರವಣಿಗೆಯಲ್ಲಿ ಸಂಪ್ರದಾಯಬದ್ಧ ರೀತಿಯ ಸಂಭ್ರಮವೇ ಪ್ರಧಾನವಾಗಿತ್ತು. ಸ್ಥಳೀಯ ಭಜನಾ ಸಂಘಗಳು ಹಾಗೂ ಗ್ರಾಮೀಣ ಪ್ರದೇಶಗಳಿಂದ ಕರೆಸಿಕೊಳ್ಳಲಾದ ಡೊಳ್ಳು, ನಾದಸ್ವರ, ಡೊಳ್ಳುಕುಣಿತ, ಜಾನಪದ ನೃತ್ಯ, ಕರಡಿ ಮಜಲುಗಳು, ಜಾಂಜ್ ಮೇಳಗಳು ಮೆರವಣಿಗೆಯಲ್ಲಿನ ಕಳೆ ಹೆಚ್ಚಿಸಿದವು.ಐತಿಹಾಸಿಕ ಹಿನ್ನೆಲೆ: ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸುವ ಪರಂಪರೆಯು 19ನೇ ಶತಮಾನದಲ್ಲಿ ಬಾಲಗಂಗಾಧರ ತಿಲಕರ ನೇತೃತ್ವದಲ್ಲಿ ಸಮಾಜ ಜಾಗೃತಿ ಚಳವಳಿಯ ಅಂಗವಾಗಿ ಪ್ರಾರಂಭವಾಯಿತು. ಗದಗ ಜಿಲ್ಲೆಯಲ್ಲಿಯೂ ಈ ಚಳವಳಿಯ ಪ್ರಭಾವದಿಂದಲೇ ಗ್ರಾಮೀಣ-ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ ದೊರಕಿತು. ವಿಶೇಷವಾಗಿ ಗದಗ ನಗರದಲ್ಲಿ ಭಕ್ತರು ಸಂಪ್ರದಾಯ ಮತ್ತು ಭಕ್ತಿಭಾವವನ್ನು ಕಾಪಾಡಿಕೊಂಡು, ಗಣೇಶೋತ್ಸವವನ್ನು ಸಾಮಾಜಿಕ ಏಕತೆ, ಸಾಂಸ್ಕೃತಿಕ ವೈಭವ ಹಾಗೂ ಜನಜಾಗೃತಿ ವೇದಿಕೆಯಾಗಿ ರೂಪಿಸಿಕೊಂಡಿದ್ದಾರೆ.ಪೊಲೀಸರ ಭದ್ರತೆ ಮತ್ತು ಸಾರ್ವಜನಿಕರ ಸಹಕಾರ: ವಿಸರ್ಜನೆ ಮೆರವಣಿಗೆ ಹಿನ್ನೆಲೆಯಲ್ಲಿ ನಗರ ಮತ್ತು ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಕಠಿಣ ಭದ್ರತೆ ಒದಗಿಸಿತ್ತು. ಸಂಚಾರ ನಿಯಂತ್ರಣ, ಜನಸಂದಣಿ ನಿರ್ವಹಣೆ ಹಾಗೂ ಸುರಕ್ಷತೆಯನ್ನು ದೃಷ್ಟಿಸಿ ನೂರಾರು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸಾರ್ವಜನಿಕರೂ ಸಹ ಕಾನೂನು-ಸುವ್ಯವಸ್ಥೆಗೆ ಸಹಕಾರ ನೀಡಿ, ವಿಸರ್ಜನೆ ಶಿಸ್ತಿನಿಂದ ನೆರವೇರಲು ಕಾರಣರಾದರು.ಭಕ್ತಿಯ ಸಂಭ್ರಮ: ಗಣಪತಿ ಬಪ್ಪಾ ಮೋರಯಾ ಘೋಷಗಳೊಂದಿಗೆ ನಡೆದ ಮೆರವಣಿಗೆಯಲ್ಲಿ ಮಹಿಳೆಯರು, ಮಕ್ಕಳು ಹಾಗೂ ಯುವಕರು ಉತ್ಸಾಹದಿಂದ ಭಾಗವಹಿಸಿದರು. ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆಯೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂತು. ಇದರೊಟ್ಟಿಗೆ ಚಿಣ್ಣರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿಯೂ ಸ್ಥಾಪಿಸಲಾಗಿದ್ದ ಗಣೇಶನ ವಿಸರ್ಜನೆಯೂ 5ನೇ ದಿನವಾದ ಭಾನುವಾರವೇ ನಡೆಯಿತು. ತಮ್ಮ ಠಾಣೆಗಳ ಗಣೇಶ ವಿಸರ್ಜನೆಯೊಂದಿಗೆ ಸೂಕ್ತ ಬಂದೂ ಬಸ್ತ್‌ಗೂ ಇಲಾಖೆ ಆದ್ಯತೆ ನೀಡಿತ್ತು.