ಜಿಲ್ಲೆಯ ಗ್ರಾಮೀಣ ಭಾಗದ ರೈತರು ಸಾಲ ಮಾಡಿ ಬಿತ್ತಿದ ಬೆಳೆ ಕೈಗೆ ಬರಲಿಲ್ಲ ಎಂದು ಗೋಳಾಡುತ್ತಿದ್ದಾರೆ

ಹೊಸಪೇಟೆ: ಈ ವರ್ಷ ಸಮರ್ಪಕ ಮಳೆ ಇಲ್ಲದೇ ಬರ ಆವರಿಸಿದ್ದರೂ ಸಹ ವಿಜಯನಗರ ಜಿಲ್ಲೆಯಲ್ಲಿ ಗೌರಿ ಗಣೇಶ ಹಬ್ಬವನ್ನು ಅತ್ಯಂತ ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆ ನಡೆದಿದೆ.

ಈ ವರ್ಷ ಮುಂಗಾರು ಮಳೆ ಸಕಾಲಕ್ಕೆ ಬಾರದೇ ಮಳೆ ಕೈಕೊಟ್ಟಿದ್ದು, ಬಿತ್ತಿದ ಬೆಳೆ ಕೈಗೆ ಸಿಗದೇ ಕೃಷಿ ಚಟುವಟಿಕೆ ಕುಂಠಿತಗೊಂಡಿವೆ. ರೈತರು ಆರ್ಥಿಕ ಸಂಕಷ್ಟದಲ್ಲಿದ್ದರೂ ಗಣೇಶ ಹಬ್ಬದ ಸಂಭ್ರಮಕ್ಕೆ ಯಾವುದೇ ಕೊರತೆಯಾಗಿಲ್ಲ.

ಜಿಲ್ಲೆಯ ಗ್ರಾಮೀಣ ಭಾಗದ ರೈತರು ಸಾಲ ಮಾಡಿ ಬಿತ್ತಿದ ಬೆಳೆ ಕೈಗೆ ಬರಲಿಲ್ಲ ಎಂದು ಗೋಳಾಡುತ್ತಿದ್ದಾರೆ. ಇತ್ತ ನಗರ ಪ್ರದೇಶದಲ್ಲಿ ಸಹ ಹಿಂದಿನ ವರ್ಷ ಆಚರಿದಂತೆ ಅದ್ಧೂರಿತನಕ್ಕೆ ತಿಲಾಂಜಲಿ ಇಟ್ಟು ಗಣೇಶನನ್ನು ಪಷ್ತಿಷ್ಠಾಪಿಸಲಾಗುತ್ತಿದೆ. ಬರದ ಸಂಕಷ್ಟದ ನಡುವೆಯೂ ಯುವಕರು ಓಣಿಗಳಲ್ಲಿ ಒಟ್ಟಾಗಿ ಸೇರಿಕೊಂಡು ಗಣೇಶನನ್ನು ಪ್ರತಿಷ್ಠಾಪಿಸಲು ಉತ್ಸುಕರಾಗಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದ್ದರಿಂದ ಮುಂದಿನ ದಿನಗಳಲ್ಲಿಯಾದರೂ ಉತ್ತಮ ಮಳೆ ಸುರಿಯಲಿ, ಹಳ್ಳ-ಕೆರೆಗಳಲ್ಲಿ ನೀರು ತುಂಬಲಿ, ದನಕರುಗಳಿಗೆ ಮೇವು ಸಿಗಲಿ ಎಂದು ಗೌರಿ ಗಣೇಶ ಹಬ್ಬದ ಮೂಲಕ ಮಳೆರಾಯನನ್ನು ಪ್ರಾರ್ಥನೆಗೆ ಮುಂದಾಗಿದ್ದಾರೆ.

ನಗರದ ಪ್ರಮುಖ ವೃತ್ತ, ಪ್ರಮುಖ ರಸ್ತೆ ಬದಿ ಹಾಗೂ ಜನನಿಬಿಡ ಬಡಾವಣೆಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪಣೆಗಾಗಿ ಆಕರ್ಷಕ ಮಂಟಪ ಮತ್ತು ಬೃಹತ್‌ ಪೆಂಡಾಲ್‌ ಹಾಕಿದ್ದು, ಸೋಮವಾರ ಬೆಳಗ್ಗೆಯಿಂದಲೇ ಗಣೇಶನನ್ನು ಪ್ರತಿಷ್ಠಾಪಿಸಲು ಹಬ್ಬದ ವಾತಾವರಣ ಮನೆ ಮಾಡಿದೆ. ಯುವಕರು ತಂಡೋಪ ತಂಡವಾಗಿ ತಮ್ಮ ತಮ್ಮ ವಾರ್ಡ್‌ನ ಮತ್ತು ಸಂಘ-ಸಂಸ್ಥೆಗಳಲ್ಲಿ ಗಣೇಶ ಪ್ರತಿಷ್ಠಾಪಿಸಲು ತಲ್ಲೀನರಾಗಿದ್ದಾರೆ.

ಪ್ರಚಲಿತ ಸಾಮಾಜಿಕ ಸಂದೇಶ ಸಾರುವ ವಿನೂತನ ಪರಿಕಲ್ಪನೆಯ ಮಾದರಿ ಗಣೇಶನನ್ನು ಪ್ರತಿಷ್ಠಾಪನೆಗೆ ಮಂಟಪಗಳನ್ನು ಕೆಲ ನುರಿತ ಕುಶಲಕರ್ಮಿಗಳಿಂದ ವಿನ್ಯಾಸಗೊಳಿಸಿ, ಬಣ್ಣಬಣ್ಣದ ವಸ್ತ್ರಾಲಂಕಾರ ಹಾಗೂ ಕಣ್ಮನ ಸೆಳೆಯುವ ವಿದ್ಯುತ್‌ ದೀಪ ಅಳವಡಿಸಿದ್ದಾರೆ.

ಹೊಸಪೇಟೆ ನಗರದಲ್ಲಿ ಕಳೆದ ನಾಲ್ಕು ತಿಂಗಳಿಂದ ಗಣೇಶ ತಯಾರಿಸುವ ಕಲಾವಿದರು ವಿವಿಧ ಬಗೆಯ, ವಿಭಿನ್ನ ಶೈಲಿಯ ಮತ್ತು ಆಕರ್ಷಕ ಭಂಗಿಯ ಗಣೇಶ ಮೂರ್ತಿ ಸಾರ್ವಜನಿಕರ ಗಮನ ಸೆಳೆಯುವಂತಹ ₹10 ಸಾವಿರದಿಂದ ₹2 ಲಕ್ಷದವರೆಗಿನ ಗಣೇಶ ಮೂರ್ತಿ ಸಿದ್ದಪಡಿಸಿದ್ದು, ತಮ್ಮ ಶಕ್ತಾನುಸಾರವಾಗಿ ಈಗಾಗಲೇ ಹಲವು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ತಮಗೆ ಬೇಕಾದ ವಿಶಿಷ್ಠ ವಿನ್ಯಾಸದ ಗಣೇಶ ಮೂರ್ತಿಗಳನ್ನು ಮುಂಗಡ ಹಣ ನೀಡಿ ಕಾಯ್ದಿರಿಸಿದ್ದು, ಕೆಲವರು ಈಗಾಗಲೇ ಶನಿವಾರ ಮತ್ತು ಭಾನುವಾರವೇ ದೂರದ ಊರಿನ ಕೆಲವರು ಲಾರಿಗಳಲ್ಲಿ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ತೆಗೆದುಕೊಂಡು ಹೋಗಿದ್ದಾರೆ.

ಗೌರಿ ಗಣೇಶ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಬೇಕು. ಸಾರ್ವಜನಿಕ ಶಾಂತಿ, ಆರೋಗ್ಯ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ ಡಿಜೆ ಸೌಂಡ್ ಸಿಸ್ಟಮ್‌ಗಳು ಹಾಗೂ ಹೆಚ್ಚಿನ ಡೆಸಿಬಲ್ ಶಬ್ದ ಉಂಟುಮಾಡುವ ಧ್ವನಿವರ್ಧಕಗಳ ಬಳಕೆ ಜಿಲ್ಲೆಯಾದ್ಯಂತ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.