: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಕ್ತಿ, ಸಡಗರದ ಶ್ರೀ ಗಣೇಶೋತ್ಸವ ಹಬ್ಬ ಆರಂಭಗೊಂಡಿದ್ದು, ನಾಡಿನೆಲ್ಲೆಡೆ ಗಣೇಶನ ಹಬ್ಬದ ವಾತಾವರಣ ಮನೆ ಮಾಡಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಕ್ತಿ, ಸಡಗರದ ಶ್ರೀ ಗಣೇಶೋತ್ಸವ ಹಬ್ಬ ಆರಂಭಗೊಂಡಿದ್ದು, ನಾಡಿನೆಲ್ಲೆಡೆ ಗಣೇಶನ ಹಬ್ಬದ ವಾತಾವರಣ ಮನೆ ಮಾಡಿದೆ.

ಸೋಮವಾರ ಬೆಳಗ್ಗೆ ಜಿಲ್ಲೆಯಾದ್ಯಂತ ಸಾರ್ವಜನಿಕ ಗಣೇಶೋತ್ಸವ ಆಯೋಜಿಸುವ ಕಡೆಗಳಲ್ಲಿ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಒಂದು ದಿನದ ಗಣೇಶೋತ್ಸವ ಆಯೋಜಿಸುವ ಕಡೆಗಳಲ್ಲಿ ಸೋಮವಾರ ಸಂಜೆಯೇ ವೈಭವದ ಶೋಭಾಯಾತ್ರೆ ನಡೆದು, ಸ್ಥಳೀಯ ಹೊಳೆ, ನದಿಗಳಲ್ಲಿ ಗಣಪತಿ ಮೂರ್ತಿಯ ವಿಸರ್ಜಿಸಲಾಯಿತು. ಶೋಭಾಯಾತ್ರೆ ಸಾಗುವ ದಾರಿಯುದ್ದಕ್ಕೂ ಭಕ್ತರು ಗಣಪನಿಗೆ ನಮಸ್ಕರಿಸಿ, ಪೂಜೆ ಸಲ್ಲಿಸಿದರು. ಕುಣಿತ ಭಜನೆ, ವಿಭಿನ್ನ ಸ್ತಬ್ಧ ಚಿತ್ರಗಳು, ಚೆಂಡೆ, ನಾಸಿಕ್‌ ಬ್ಯಾಂಡ್‌ ಶೋಭಾಯಾತ್ರೆಯಲ್ಲಿ ಆಕರ್ಷನೀಯವಾಗಿತ್ತು. ಜೊತೆಗೆ ಮಹಾಗಣಪತಿ ದೇವಸ್ಥಾನಗಳು ಸೇರಿದಂತೆ ದೇವಸ್ಥಾನಗಳಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ, ವಿಶೇಷ ಪೂಜೆ ನೆರವೇರಿಸಲಾಯಿತು. ತೆನೆ ಕಟ್ಟುವ ಕಾರ್ಯಕ್ರವೂ ನಡೆಯಿತು

.

ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಪೊಲೀಸ್‌ ವ್ಯಾಪ್ತಿಯ 230 ಕಡೆಗಳಲ್ಲಿ ಹಾಗೂ ಮಂಗಳೂರು ನಗರ ಕಮಿಷನರೇಟ್‌ ವ್ಯಾಪ್ತಿಯ 174 ಕಡೆಗಳಲ್ಲಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 404 ಕಡೆಗಳಲ್ಲಿ ಗಣೇಶೋತ್ಸವದ ಗಣಪನ ಪ್ರತಿಷ್ಠಾಪಿಸಲಾಗಿತ್ತು. ಇವುಗಳಲ್ಲಿ ಕೆಲವೆಡೆ 3, 5, 7, 10 ದಿನಗಳ ವರೆಗಿನ ಕಾರ್ಯಕ್ರಮಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ, ಸಭಾ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆ.