ಧಾರವಾಡದಲ್ಲಿ ಸಂಭ್ರಮದಿಂದ ಗಣೇಶ ಮೂರ್ತಿ ಪ್ರತಿಷ್ಠಾನೆ

| Published : Sep 09 2024, 01:40 AM IST

ಧಾರವಾಡದಲ್ಲಿ ಸಂಭ್ರಮದಿಂದ ಗಣೇಶ ಮೂರ್ತಿ ಪ್ರತಿಷ್ಠಾನೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಪ್ರತಿಯೊಂದು ಗಣಪತಿ ಪೆಂಡಾಲ್‌ನಲ್ಲಿ ಗಣೇಶನಿಗೆ ಅದ್ಧೂರಿ ಅಲಂಕಾರ ಮಾಡಲಾಗಿದ್ದು, ಬಹುತೇಕ ಸಾರ್ವಜನಿಕ ಗಣಪತಿಗಳನ್ನು ಶನಿವಾರ ಸಂಜೆ ವರೆಗೂ ಮೆರವಣಿಗೆ ಮೂಲಕ ತರಲಾಯಿತು.

ಧಾರವಾಡ: ಶ್ರಾವಣ ಹಬ್ಬ ಮುಗಿಯುವುದೇ ತಡ ಆಗಮಿಸಿರುವ ಗಣಪತಿ ಹಬ್ಬಕ್ಕೆ ಧಾರವಾಡದಲ್ಲಿ ಅದ್ಧೂರಿ ಚಾಲನೆ ದೊರೆತಿದೆ. ಶನಿವಾರ ನಗರದ ಪ್ರಮುಖ ವೃತ್ತ, ರಸ್ತೆ, ಬೀದಿಗಳಲ್ಲಿ ತರಹೇವಾರಿ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿದ್ದು, ನಗರದಲ್ಲಿ ಹಬ್ಬದ ಸಂಭ್ರಮ ಇಮ್ಮಡಿಗೊಂಡಿದೆ.

ಇಲ್ಲಿಯ ಕೆಸಿಡಿ ವೃತ್ತ, ಸಪ್ತಾಪೂರ ಬಾವಿ, ಹಳಿಯಾಳನಾಕಾ ವೃತ್ತ, ಟಿಕಾರೆ ರಸ್ತೆ, ನೆಹರು ಮಾರುಕಟ್ಟೆ, ಸಂಗಮ ವೃತ್ತ, ಕಮಲಾಪುರ, ಹೆಬ್ಬಳ್ಳಿ ಅಗಸಿ, ಸಾಧನಕೇರಿ, ಕೆಲಗೇರಿ, ಶ್ರೀನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳು ಜನರನ್ನು ಕೈ ಬೀಸಿ ಕರೆಯುತ್ತಿವೆ. ಚಕ್ಕಡಿ ಓಡಿಸುತ್ತಿರುವ ಗಣಪ, ಅಯೋಧ್ಯೆ ರಾಮನ ವೇಷದಲ್ಲಿ ಗಣಪ, ಈಶ್ವರನ ಅವತಾರ ಹೀಗೆ ಹಲವು ಅವತಾರದಲ್ಲಿ ಗಣೇಶ ಮೂರ್ತಿ ಆಗಮಿಸಿದ್ದಾನೆ. ಅಂತೆಯೇ, ಮನೆ ಮನೆಗಳಲ್ಲೂ ಗಣಪತಿ ಸ್ಥಾಪನೆಯಾಗಿದೆ.

ಪ್ರತಿಯೊಂದು ಗಣಪತಿ ಪೆಂಡಾಲ್‌ನಲ್ಲಿ ಗಣೇಶನಿಗೆ ಅದ್ಧೂರಿ ಅಲಂಕಾರ ಮಾಡಲಾಗಿದ್ದು, ಬಹುತೇಕ ಸಾರ್ವಜನಿಕ ಗಣಪತಿಗಳನ್ನು ಶನಿವಾರ ಸಂಜೆ ವರೆಗೂ ಮೆರವಣಿಗೆ ಮೂಲಕ ತರಲಾಯಿತು. ಪ್ರತಿಷ್ಠಾಪನೆಯ ದಿನ ಶನಿವಾರ ಹಾಗೂ ಭಾನುವಾರ ವಿಶೇಷ ಪೂಜೆಗಳು ನಡೆಯುತ್ತಿದ್ದು, 3 ಹಾಗೂ 5ನೇ ದಿನ ಸತ್ಯನಾರಾಯಣ ಪೂಜೆ, ಅನ್ನ ಸಂತರ್ಪಣೆ ಸಹ ಮಾಡಲು ಗಣೇಶೋತ್ಸವ ಮಂಡಳಿಗಳು ಸಿದ್ಧತೆ ನಡೆಸಿವೆ. ಇನ್ನು, ಹಬ್ಬದ ನಿಮಿತ್ತ ಮಕ್ಕಳು ಪಟಾಕಿ ಹಾರಿಸಿ ಸಂಭ್ರಮಿಸುತ್ತಿದ್ದಾರೆ.

ಜೆಎಸ್ಸೆಸ್‌

ಇಲ್ಲಿಯ ಜೆಎಸ್ಸೆಸ್‌ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಗಣೇಶ ಹಬ್ಬವನ್ನು 500ಕ್ಕೂ ಹೆಚ್ಚು ವಿದ್ಯಾರ್ಥಿನಿಯರೊಂದಿಗೆ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ವಸತಿ ನಿಲಯದ ವಾರ್ಡನ್‌ ಜ್ಯೋತಿ ಕಟಗಿ ಹಾಗೂ ಸಿಬಂದಿ ಗಣಪತಿ ಪ್ರತಿಷ್ಠಾಪಿಸಿದರು. ಅದೇ ರೀತಿ ಕವಿವಿ, ಹೊಸ ಬಸ್‌ ನಿಲ್ದಾಣ, ನಗರದ ವಿವಿಧ ಪೊಲೀಸ ಠಾಣೆಗಳಲ್ಲೂ ಗಣಪತಿ ಪ್ರತಿಷ್ಠಾಪ ಆಯಿತು. ಹಬ್ಬದ ನಿಮಿತ್ತ ಯಾವುದೇ ಗಲಾಟೆಗಳು ಆಗದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಪ್ರಮುಖ ಸ್ಥಳಗಳಲ್ಲಿ ಬಂದೋಬಸ್ತ ವಹಿಸಿದ್ದರು.