ವಿಘ್ನ ನಿವಾರಕ ಗಣಪತಿ ಹಬ್ಬದ ಆಚರಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಪರಿಸರಕ್ಕೆ ಮಾರಕವಾದ ಪಿಒಪಿ ಗಣೇಶನ ವಿಗ್ರಹಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಅಣ್ಣಾಸಾಬ ತೆಲಸಂಗ
ಕನ್ನಡಪ್ರಭ ವಾರ್ತೆ ಅಥಣಿವಿಘ್ನ ನಿವಾರಕ ಗಣಪತಿ ಹಬ್ಬದ ಆಚರಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಪರಿಸರಕ್ಕೆ ಮಾರಕವಾದ ಪಿಒಪಿ ಗಣೇಶನ ವಿಗ್ರಹಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅಥಣಿ ಪಟ್ಟಣದ ಹೊರವಲಯದಲ್ಲಿ ರಾಜಾರೋಷವಾಗಿ ಪಿಒಪಿ ಮೂರ್ತಿಗಳನ್ನು ತಯಾರಿಸಲಾಗುತ್ತಿದ್ದು, ನೆರೆಯ ಮಹಾರಾಷ್ಟ್ರದಿಂದಲೂ ಪಿಒಪಿ ಮೂರ್ತಿಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡಲಾಗುತ್ತಿದೆ. ಆದರೆ, ತಾಲೂಕು ಆಡಳಿತ, ಪುರಸಭೆ ಆಡಳಿತದ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದಾರೆ ಎಂದು ಪರಿಸರ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರಿಸರಕ್ಕೆ ಹಾನಿಕಾರಕ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟಕ್ಕೆ ನಿಷೇಧ ಹೇರಿದ್ದರೂ ಪಟ್ಟಣದ ಹಲವೆಡೆ ಪಿಒಪಿ ಮೂರ್ತಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು, ಮಾರಾಟ ಮಾಡಲಾಗುತ್ತಿದೆ. ಹಗಲು ಹೊತ್ತಿನಲ್ಲೇ ಪಿಒಪಿ ಗಣಪತಿ ಮೂರ್ತಿಗಳನ್ನು ಸಾಗಿಸುತ್ತಿದ್ದರೂ ಪೊಲೀಸ್ ಇಲಾಖೆ, ಪುರಸಭೆ, ತಾಲೂಕು ಆಡಳಿತದ ಕಣ್ಣಿಗೆ ಬೀಳದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಗಣೇಶನ ಮೂರ್ತಿ ಮಾರಾಟ ಮಾಡುವ ಕೆಲವು ವ್ಯಾಪಾರಿಗಳು ಲಾಭದಾಸೆಗೆ ಜಿಲ್ಲಾಡಳಿತದ ನಿಯಮಗಳನ್ನು ಗಾಳಿಗೆ ತೂರಿ ಪಟ್ಟಣದ ಹೊರವಲಯದಲ್ಲಿ ಪಿಓಪಿ ಗಣೇಶನ ವಿಗ್ರಹಗಳನ್ನು ತಯಾರು ಮಾಡುತ್ತಿದ್ದಾರೆ. ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ, ಪ್ರಮುಖ ಮಾರುಕಟ್ಟೆಯಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪಿಓಪಿ ವಿಗ್ರಹಗಳು ಮಾರಾಟವಾಗುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳೂ ಈ ಮೂರ್ತಿ ವ್ಯಾಪಾರಸ್ಥರಿಂದ ಮಾಮೂಲಿ ಪಡೆದುಕೊಂಡು ಅಕ್ರಮದ ಜೊತೆಗೆ ಶಾಮೀಲಾಗಿದ್ದಾರೆ ಎಂಬ ಅನುಮಾನವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ. ಸಾರ್ವಜನಿಕರು ಮನೆಗಳಲ್ಲಿ ಪ್ರತಿಷ್ಠಾಪಿಸುವ ಮೂರ್ತಿಗಳು ಹೆಚ್ಚಾಗಿ ಮಣ್ಣಿನಿಂದ ತಯಾರಿಸಲಾಗುತ್ತದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಯುವಕ ಮಂಡಳದವರು ಪ್ರತಿಷ್ಠಾಪಿಸುವ ಮೂರ್ತಿಗಳು ಅತ್ಯಂತ ಆಕರ್ಷಣೀಯವಾಗಿರುತ್ತವೆ. ರಾಸಾಯನಿಕ ಬಣ್ಣ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಮೂರ್ತಿಗಳನ್ನು ಖರೀದಿಸುತ್ತಿರುವುದರಿಂದ ಕೆಲವು ವ್ಯಾಪಾರಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಪಿಓಪಿ ಮೂರ್ತಿಗಳನ್ನು ಆಮದು ಮಾಡಿಕೊಂಡು ಮಾರಾಟಕ್ಕೆ ಇರಿಸುತ್ತಿದ್ದಾರೆ. ಪಟ್ಟಣದ ಹೊರವಲಯ ಹಾಗೂ ಜನ ಸಂಚಾರ ಕಡಿಮೆ ಇರುವ ಜಾಗಗಳಲ್ಲಿ ಪಿಓಪಿ ಮೂರ್ತಿಗಳನ್ನು ತಯಾರಿಸಿ ಇರಿಸಲಾಗಿದೆ. ಪಿಓಪಿ ಮೂರ್ತಿಗಳ ಬಗ್ಗೆ ಎಲ್ಲರಿಗೂ ತಿಳಿಯಬಾರದು ಎಂದು ಪ್ಲಾಸ್ಟಿಕ್ ಹೂದಿಕೆ ಹಾಕಲಾಗಿದೆ. ತಾಲ್ಲೂಕು ಆಡಳಿತ ಪರಿಶೀಲನೆ ನಡೆಸಿ ಪಿಓಪಿ ಮೂರ್ತಿಗಳ ಮಾರಾಟ, ತಯಾರಿಕೆಯನ್ನು ತಡೆಗಟ್ಟಬೇಕು, ಪರಿಸರಸ್ನೇಹಿ ಮಣ್ಣಿನ ಮೂರ್ತಿಗಳ ತಯಾರಿಕೆಗೆ ಹಾಗೂ ಮಾರಾಟಕ್ಕೆ ಪ್ರೋತ್ಸಾಹಿಸಬೇಕು ಎಂಬುದು ಪರಿಸರ ಪ್ರೇಮಿಗಳ ಅಗ್ರಹವಾಗಿದೆ.ಪಿಒಪಿ ಮೂರ್ತಿಗಳನ್ನು ಕೆರೆ, ತೆರೆದ ಬಾವಿ, ನಾಲಾಗಳಲ್ಲಿ ವಿಸರ್ಜನೆ ಮಾಡಿದರೇ ನೀರು ವಿಷವಾಗಿ ಜಲಜರಗಳಿಗೆ ಕಂಟಕವಾಗುತ್ತದೆ. ಅಥಣಿ ಪಟ್ಟಣದ್ದಲ್ಲಿ ಪರಿಸರಕ್ಕೆ ಮಾರಕವಾದ ಇಂತಹ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ. ತಾಲೂಕು ಮಟ್ಟದ ಅಧಿಕಾರಿಗಳು ಪರಿಶೀಲಿಸಬೇಕು. ಪಿಒಪಿ ಬದಲಾಗಿ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಪ್ರತಿಷ್ಠಾಪಿಸುವಂತೆ ಆಯೋಜಕರಲ್ಲಿ ಜನ ಜಾಗೃತಿ ಮೂಡಿಸಬೇಕು.
-ಪ್ರಶಾಂತ್ ತೋಡಕರ, ಪರಿಸರ ಪ್ರೇಮಿ, ಅಥಣಿ.ಪಿಒಪಿ ಮತ್ತು ರಾಸಾಯನಿಕ ಬಣ್ಣವನ್ನು ಬಳಸಿ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅಥಣಿ ಪಟ್ಟಣ ಹಾಗೂ ಸುತ್ತ-ಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಪಿಒಪಿ ಮೂರ್ತಿಗಳ ಪತ್ತೆಗೆ ಪರಿಶೀಲನೆಗೆ ಪುರಸಭೆ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ತಂಡ ರಚನೆ ಮಾಡಿ ಕಾರ್ಯಚರಣೆ ನಡೆಸಲಾಗುವುದು.-ಸಿದರಾಯ ಬೋಸಗಿ, ತಹಸೀಲ್ದಾರ್, ಅಥಣಿ. ಪುರಸಭೆ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿ ತಯಾರಿಕೆ ಮಾಡುವ ಕುಶಲಕರ್ಮಿಗಳಿಗೆ ಹಾಗೂ ಮೂರ್ತಿಗಳನ್ನು ಮಾರಾಟ ಮಾಡುವವರಿಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಪಿಒಪಿ ಮೂರ್ತಿಗಳು ಕಂಡುಬಂದಲ್ಲಿ ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗುವದು.
-ಅಶೋಕ ಗುಡಿಮನಿ, ಪುರಸಭೆ ಮುಖ್ಯಾಧಿಕಾರಿ. ಅಥಣಿ.