ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ವಿರಾಜಮಾನ

| Published : Aug 29 2025, 01:00 AM IST

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ವಿರಾಜಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿ ಮೂರುಸಾವಿರ ಮಠದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಜಾಂಜ್, ಡೊಳ್ಳು ಸೇರಿದಂತೆ ವಿವಿಧ ವಾದ್ಯಗಳು ಮೆರವಣಿಗೆಗೆ ಮೆರಗು ತಂದವು. ದಾಜಿಬಾನಪೇಟ, ತುಳಜಾಭವಾನಿ ದೇವಸ್ಥಾನ, ರಾಯಣ್ಣ ಸರ್ಕಲ್ ಮೂಲಕ ಈದ್ಗಾ ಮೈದಾನಕ್ಕೆ ಆಗಮಿಸಿ ಆನಂತರ ಪ್ರತಿಷ್ಠಾಪನೆಗೊಂಡಿತು. ಕಾಳಿಂಗ ಸರ್ಪದ ಮೇಲೆ ಕುಳಿತಿರುವ ಕೃಷ್ಣನ ವೇಷದಲ್ಲಿರುವ ಗಣೇಶನ ವಿಗ್ರಹ ಜನರನ್ನು ಸೆಳೆಯುತ್ತಿದೆ.

ಹುಬ್ಬಳ್ಳಿ: ಇಡೀ ದೇಶದಲ್ಲಿ ಸಂಚಲನ ಮೂಡಿಸಿರುವ ಇಲ್ಲಿನ ಈದ್ಗಾ ಮೈದಾನ (ಕಿತ್ತೂರು ರಾಣಿ ಚೆನ್ನಮ್ಮ ಮೈದಾನ)ದಲ್ಲಿ 4ನೆಯ ವರ್ಷದ ಗಣೇಶ ಪ್ರತಿಷ್ಠಾಪನೆ ಅದ್ಧೂರಿಯಾಗಿ ನಡೆಯಿತು. ಮೂರು ದಿನಗಳ ಗಣೇಶೋತ್ಸವವೂ ಪೊಲೀಸ್ ಸರ್ಪಗಾವಲಿನಲ್ಲಿ ಶಾಂತಿಯುತವಾಗಿ ನಡೆಯುತ್ತಿದೆ.

ಬುಧವಾರ ಇಲ್ಲಿನ ಮೂರುಸಾವಿರ ಮಠದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಜಾಂಜ್, ಡೊಳ್ಳು ಸೇರಿದಂತೆ ವಿವಿಧ ವಾದ್ಯಗಳು ಮೆರವಣಿಗೆಗೆ ಮೆರಗು ತಂದವು. ದಾಜಿಬಾನಪೇಟ, ತುಳಜಾಭವಾನಿ ದೇವಸ್ಥಾನ, ರಾಯಣ್ಣ ಸರ್ಕಲ್ ಮೂಲಕ ಈದ್ಗಾ ಮೈದಾನಕ್ಕೆ ಆಗಮಿಸಿ ಆನಂತರ ಪ್ರತಿಷ್ಠಾಪನೆಗೊಂಡಿತು. ಕಾಳಿಂಗ ಸರ್ಪದ ಮೇಲೆ ಕುಳಿತಿರುವ ಕೃಷ್ಣನ ವೇಷದಲ್ಲಿರುವ ಗಣೇಶನ ವಿಗ್ರಹ ಜನರನ್ನು ಸೆಳೆಯುತ್ತಿದೆ.

ಬುಧವಾರ ಪ್ರತಿಷ್ಠಾಪನೆಗೊಂಡಾಗಿನಿಂದ ನಿರಂತರವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಹೋಮ-ಹವನಗಳು ನಡೆಯುತ್ತಲೇ ಇವೆ. ಮಹಿಳಾ ಮಂಡಳಿಗಳಿಂದ ನಿರಂತರವಾಗಿ ಭಜನೆ ನಡೆಯುತ್ತಿದೆ. ಜನರು ಕೂಡ ಸಾಗರದಂತೆ ಹರಿದು ಬರುತ್ತಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಮೂವರು ಪಿಐ, ಐವರು ಪಿಎಸ್ಐ, ಏಳು ಜನ ಎಎಸ್ಐ ಸೇರಿದಂತೆ ಒಟ್ಟು 75ಕ್ಕೂ ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ತೊಡಗಿದ್ದಾರೆ. ಇದಲ್ಲದೇ, ಪ್ಯಾರಾ ಮಿಲಿಟರಿ ತುಕಡಿಯೊಂದು ಕಾರ್ಯನಿರ್ವಹಿಸುತ್ತಿದೆ. ಮೈದಾನದ ಸುತ್ತಲೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

ರಾಣಿ ಚೆನ್ನಮ್ಮ ಮೈದಾನದ ಗಜಾನನ ಉತ್ಸವ ಮಂಡಳಿಯ ಅಧ್ಯಕ್ಷ ಸಂಜೀವ ಬಡಸ್ಕರ್‌, ಶಾಸಕ ಮಹೇಶ ಟೆಂಗಿನಕಾಯಿ, ಸ್ವಾಗತ ಸಮಿತಿ ಅಧ್ಯಕ್ಷ ಡಾ. ಸಿಎಚ್‌ ವಿ.ಎಸ್‌.ವಿ. ಪ್ರಸಾದ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ ಹಾಗೂ ವಿವಿಧ ಜನಪದ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್‌, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮೇಯರ್‌ ಜ್ಯೋತಿ ಪಾಟೀಲ, ಉಪಮೇಯರ್‌ ಸಂತೋಷ ಚವ್ಹಾಣ, ಮಾಜಿ ಮೇಯರ್‌ಗಳಾದ ಈರೇಶ ಅಂಚಟಗೇರಿ, ವೀರಣ್ಣ ಸವಡಿ, ಮುಖಂಡರಾದ ಮಲ್ಲಿಕಾರ್ಜುನ ಸಾಹುಕಾರ, ಸಂಕಲ್ಪ ಶೆಟ್ಟರ್‌, ನಾಗೇಶ ಕಲ್ಬುರ್ಗಿ, ಜಯತೀರ್ಥ ಕಟ್ಟಿ, ಸುಭಾಷಸಿಂಗ್‌ ಜಮಾದಾರ, ಸಂದೀಪ ಬೂದಿಹಾಳ, ಉಮೇಶ ದುಶಿ, ವೆಂಕಟೇಶ ಕಾಟವೆ, ಮಹೇಂದ್ರ ಕೌತಾಳ ಸೇರಿದಂತೆ ಹಲವರು ದರ್ಶನ ಪಡೆದರು.

ಇಂದು ವಿಸರ್ಜನೆ: ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಅದ್ಧೂರಿಯಾಗಿ ಗಣೇಶನ ಮೂರ್ತಿಯ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಡಿಜೆ ಬಳಸುತ್ತಿಲ್ಲ. ಆದರೆ, ವಿವಿಧ ಕಲಾ ಮೇಳಗಳನ್ನು ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಇನ್ನು ಮಾಜಿ ಸಂಸದ ಪ್ರತಾಪಸಿಂಹ ಸೇರಿದಂತೆ ಹಲವು ಗಣ್ಯರು ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಗಮನ ಸೆಳೆಯುತ್ತಿರುವ ಮೂಷಕ: ಈ ನಡುವೆ ಚೆನ್ನಮ್ಮ ಮೈದಾನದಲ್ಲಿ ಅಂದರೆ ಗಣೇಶನ ಪೆಂಡಾಲ್‌ ಸಮೀಪದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಪ್ಲಾಸ್ಟಿಕ್‌ ಬಾಟಲ್‌ಗಳಿಂದ 20 ಅಡಿ ಎತ್ತರದ ಮೂಷಕ (ಇಲಿ) ರೂಪಕ ವಿಶೇಷ ಗಮನ ಸೆಳೆಯುತ್ತಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮೇಯರ್‌ ಜ್ಯೋತಿ ಪಾಟೀಲ, ಉಪಮೇಯರ್‌ ಸಂತೋಷ ಚವ್ಹಾಣ, ಇಲಿಯ ರೂಪಕವನ್ನು ಅನಾವರಣಗೊಳಿಸಿದರು.