ಭಕ್ತರ ಮನೆಗೆ ಬರಲು ಅಣಿಯಾಗಿರುವ ಗಣಪ

| Published : Aug 26 2025, 01:04 AM IST

ಸಾರಾಂಶ

ಸಾರ್ವಜನಿಕರು ಮಣ್ಣಿನಿಂದ ತಯಾರಿಸಿದ ಹಾಗೂ ನೈಸರ್ಗಿಕ ಬಣ್ಣಲೇಪಿತ ಮಣ್ಣಿನ ಗಣೇಶ ಮೂರ್ತಿಗಳೊಂದಿಗೆ ಹಬ್ಬ ಆಚರಿಸಬೇಕು.

ಹಾವೇರಿ: ಹಿಂದೂಗಳು ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ಮಾಡುವ ಗಣೇಶನ ಹಬ್ಬಕ್ಕೆ ಒಂದೇ ದಿನ ಬಾಕಿಯಿದ್ದು, ನಾನಾ ರೂಪ, ಗಾತ್ರಗಳಲ್ಲಿ ಸಿದ್ಧವಾಗಿರುವ ಗಣೇಶನ ಮೂರ್ತಿ ಭಕ್ತರ ಮನೆಗೆ ಬರಲು ಅಣಿಯಾಗುತ್ತಿವೆ. ಕಲಾವಿದರ ಕೈಯಲ್ಲಿ ತಯಾರಾಗಿರುವ ಗಣೇಶನ ಮೂರ್ತಿಗಳು ಕಣ್ಮನ ಸೆಳೆಯುತ್ತಿವೆ.

ಕಳೆದ ಎರಡ್ಮೂರು ತಿಂಗಳಿನಿಂದ ನಿರಂತರ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದ ಕಲಾವಿದರು ಈಗ ಎಲ್ಲ ಮೂರ್ತಿಗಳಿಗೆ ಅಂತಿಮ ಟಚ್‌ಅಫ್ ನೀಡುವ ಮೂಲಕ ಪ್ರತಿಷ್ಠಾಪನೆಗೆ ಸಿದ್ಧಗೊಳಿಸಿದ್ದಾರೆ. ಜಿಲ್ಲಾದ್ಯಂತ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕೇವಲ ಒಂದು ದಿನ ಬಾಕಿ ಉಳಿದಿದ್ದು, ಪ್ರಸಕ್ತ ವರ್ಷದಲ್ಲಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈಗಾಗಲೇ ನಗರದ ವಿವಿಧ ದೇವಸ್ಥಾನ ಸೇರಿದಂತೆ ಗಣೇಶ ಮೂರ್ತಿ ತಯಾರಿಸುವ ಸ್ಥಳಕ್ಕೆ ಸಾರ್ವಜನಿಕರು ತೆರಳಿ ತಮಗೆ ಬೇಕಾದ ಆಕೃತಿಯ ಗಣೇಶ ಮೂರ್ತಿಗಳನ್ನು ಗುರುತಿಸಿ ಮುಂಗಡ ಹಣ ಪಾವತಿಸಿ ಬುಕ್ ಮಾಡುತ್ತಿದ್ದು, ಗಣೇಶ ಚತುರ್ಥಿ ದಿನ ಮೂರ್ತಿಗಳನ್ನು ಮನೆಗೆ ತಂದು ಪ್ರತಿಷ್ಠಾಪಿಸಿ ಸಂಭ್ರಮದಿಂದ ಹಬ್ಬ ಆಚರಿಸಲಾಗುತ್ತದೆ. ಕಣ್ಮನ ಸೆಳೆಯುವ ಮೂರ್ತಿಗಳು: ಗಣೇಶ ಮೂರ್ತಿ ತಯಾರಕರ ಕೈಯಲ್ಲಿ ಈಗಾಗಲೇ ಗಣೇಶ ಮೂರ್ತಿಗಳು ಅಂತಿಮ ರೂಪ ಪಡೆದಿದ್ದು, ಜನರನ್ನು ಆಕರ್ಷಿಸುತ್ತಿವೆ. ಸಿಂಹಾರೂಢ ಗಣಪ, ಪದ್ಮಾಸನ ರೂಪಿ ಗಣೇಶ, ನಂದಿ ಮೇಲೆ ಕುಳಿತಿರುವ ಗಣೇಶ, ಸೂರ್ಯನಾರಾಯಾಣ ರೂಪಿ ಗಣೇಶ, ಶಿವರೂಪಿ ಗಣೇಶ, ಸಾಯಿರೂಪಿ ಗಣೇಶ, ಸನಾತನ ಗಣೇಶ, ಕೃಷ್ಣರೂಪಿ ಗಣೇಶ, ನವಿಲಿನ ಮೇಲೆ ಕುಣಿವ ಗಣೇಶ, ರಥದ ಮೇಲಿರುವ ಗಣೇಶ, ಕಮಲದ ಮೇಲಿರುವ ಗಣೇಶ, ಪಂಚಮುಖಿ ಗಣೇಶ, ವಿಷ್ಣುರೂಪಿ ವಕ್ರತುಂಡ, ಇಡಗುಂಜಿ ಗಣೇಶ, ವೆಂಕಟೇಶ ರೂಪಿ ಗಣೇಶ, ಶ್ರೀರಾಮ ರೂಪಿ ಗಣೇಶ ಸೇರಿದಂತೆ 2 ಸಾವಿರಕ್ಕೂ ಹೆಚ್ಚು ವಿವಿಧ ಭಂಗಿಯ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೆ ಸಜ್ಜಾಗಿವೆ.ಬೆಲೆ ಏರಿಕೆ ಬಿಸಿ: ಕಳೆದ ವರ್ಷಕ್ಕೆ ಹೊಲಿಸಿದರೆ ಈ ವರ್ಷ ಗಣೇಶ ಮೂರ್ತಿಗಳ ಬೆಲೆಯಲ್ಲಿ ಏರಿಕೆ ಕಂಡಿದೆ. ನಗರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗಣೇಶ ಮೂರ್ತಿಗಳನ್ನು ಮಾರಾಟಕ್ಕಿಡಲಾಗಿದ್ದು, ಗಣೇಶನ ಮೂರ್ತಿಗಳ ಆಕಾರ, ಗಾತ್ರಗಳಿಗೆ ಅನುಗುಣವಾಗಿ ಬೆಲೆ ನಿಗದಿಗೊಳಿಸಲಾಗಿದೆ. ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳು ₹500ರಿಂದ ಪ್ರಾರಂಭಗೊಂಡು ₹3 ಸಾವಿರದ ವರೆಗೆ ಮಾರಾಟವಾಗುತ್ತಿವೆ. ಇನ್ನೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ 5ರಿಂದ 10 ಅಡಿ ಗಣೇಶ ಮೂರ್ತಿಗಳು ₹5 ಸಾವಿರದಿಂದ ₹20 ಸಾವಿರದವರೆಗೆ ಮಾರಾಟವಾಗುತ್ತಿವೆ. ಪ್ರೋತ್ಸಾಹ ಅಗತ್ಯ: ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನ ಮೂರ್ತಿಗಳು ಮಾರುಕಟ್ಟೆಯನ್ನು ಆವರಿಸಿದ್ದವು. ಹೀಗಾಗಿ ಮಣ್ಣಿನ ಮೂರ್ತಿ ತಯಾರಕರು ಸಂಕಷ್ಟ ಎದುರಿಸುವಂತಾಗಿತ್ತು. ಈಗ ಸರ್ಕಾರದ ಆದೇಶದಿಂದಾಗಿ ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿದ್ದರಿಂದ ವರ್ಷದಿಂದ ವರ್ಷಕ್ಕೆ ಸಾಂಪ್ರದಾಯಿಕ ಮಣ್ಣಿನ ಮೂರ್ತಿ ತಯಾರಿಕೆ ಕಲಾವಿದರಿಗೆ ಬೇಡಿಕೆ ಬಂದಿದೆ. ವಂಶ ಪಾರಂಪರಿಕವಾಗಿ ಬಂದ ಸಾಂಪ್ರದಾಯಿಕ ಕಲೆ ಉಳಿಸಿ ಬೆಳೆಸಲು ಸಹಕಾರಿಯಾಗಿದ್ದು, ಸರ್ಕಾರ ಮೂರ್ತಿ ತಯಾಕರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ದೇವಗಿರಿಯ ಮೂರ್ತಿ ತಯಾರಕರಾದ ಕಲ್ಲಪ್ಪ ಕಮ್ಮಾರ ತಿಳಿಸಿದರು.

ನೈಸರ್ಗಿಕ ಬಣ್ಣಲೇಪಿತ ಮಣ್ಣಿನ ಗಣೇಶ: ಸಾರ್ವಜನಿಕರು ಮಣ್ಣಿನಿಂದ ತಯಾರಿಸಿದ ಹಾಗೂ ನೈಸರ್ಗಿಕ ಬಣ್ಣಲೇಪಿತ ಮಣ್ಣಿನ ಗಣೇಶ ಮೂರ್ತಿಗಳೊಂದಿಗೆ ಹಬ್ಬ ಆಚರಿಸಬೇಕು. ಭಾರಲೋಹ ಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕೃತಗೊಂಡ ಯಾವುದೇ ರೀತಿಯ ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸಿದ ಗಣೇಶ ವಿಗ್ರಹಗಳ ಉತ್ಪಾದನೆ, ಮಾರಾಟ ಮಾಡುವುದನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಿರುತ್ತದೆ. ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಖರೀದಿಸದೆ, ಮಣ್ಣಿನಿಂದ ತಯಾರಿಸಿದ ಚಿಕ್ಕ ಗಣೇಶ ಮೂರ್ತಿಗಳನ್ನು ಹಾಗೂ ನೈಸರ್ಗಿಕ ಬಣ್ಣಲೇಪಿತ ಮೂರ್ತಿಗಳನ್ನು ಖರೀದಿಸಿ ಪರಿಸರ ಪೂರಕ ಗೌರಿ ಮತ್ತು ಗಣೇಶ ಹಬ್ಬವನ್ನು ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.

ಸೌಹಾರ್ದತೆಯಿಂದ ಆಚರಿಸಿ: ಈ ಸಲ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಡಿಜೆ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಹಾಗಾಗಿ ಸ್ಥಳೀಯ ಕಲಾ ತಂಡಗಳಿಗೆ ಅವಕಾಶ ನೀಡಿ, ನಮ್ಮ ಕಲೆ ಪ್ರೋತ್ಸಾಹಿಸಬೇಕು. 120 ಡೆಸಿಬಲ್ ಮಿರಿ ಧ್ವನಿವರ್ಧಕ ಬಳಕೆ ಮಾಡಬಾರದು. ಹಬ್ಬಗಳನ್ನು ಶಾಂತಿಯುತ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಎಸ್ಪಿ ಯಶೋದಾ ವಂಟಗೋಡಿ ತಿಳಿಸಿದರು.