ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಆಬಾಲವೃದ್ಧರಾದಿಯಾಗಿ ಎಲ್ಲರನ್ನ ಆಕರ್ಷಿಸುವ ಏಕೈಕ ದೇವತೆ ಎಂದರೆ ಗಣೇಶ ಎಂದು ಸಂಸ್ಕೃತ ನಿವೃತ್ತ ಶಿಕ್ಷಕರು, ಲೇಖಕರಾದ ಮಂಡ್ಯದ ಕೊಕ್ಕಡ ವೆಂಕಟರಮಣ ಭಟ್ ಅಭಿಪ್ರಾಯಪಟ್ಟರು.ದೀಪ್ತಿ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಕಾಳಿಹುಂಡಿ ಶಿವಕುಮಾರ್ ಅವರು ಸಂಗ್ರಹಿಸಿರುವ ಗಣಪತಿಯ ಚಿತ್ರ-ಲೇಖನಗಳ ಮೂರು ದಿನಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಗಣೇಶನ ಮೂರ್ತಿಯೇ ಒಂದು ರೀತಿಯಲ್ಲಿ ವಿಸ್ಮಯವಾದದ್ದು. ಪುರಾತನ ಇತಿಹಾಸವಿರುವ ಗಣೇಶ ಎಲ್ಲರಿಂದಲೂ ಕೂಡ ಪೂಜಿತ ಗೊಳ್ಳುತ್ತಾನೆ. ಅವನ ಕಣ್ಣು, ಕಿವಿ, ಹೊಟ್ಟೆ ಎಲ್ಲದಕ್ಕೂ ಕೂಡ ಅರ್ಥಪೂರ್ಣ ವಿವರಣೆ ಸಿಗುತ್ತದೆ.ಪುರಾತನ ಕಾಲದಿಂದ ಇವತ್ತಿನ ತಂತ್ರಜ್ಞಾನ ಕಾಲದವರೆಗೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಭಕ್ತಿ- ಭಾವ ಮೂಡಿಸಿರುವ ಈ ಬಹುರೂಪಿ ಗಣಪನ ಕುರಿತಾಗಿ ಕಾಳಿಹುಂಡಿ ಶಿವಕುಮಾರ್ ಅವರ ಗಣಪನ ಬೃಹತ್ ಸಂಗ್ರಹ ಸಂಶೋಧನಾ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ಸಿಗುತ್ತದೆ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಶಿಕ್ಷಕ, ಕರ್ನಾಟಕ ರಾಜ್ಯ ಮುಕ್ತಕ ಸಾಹಿತ್ಯ ಪರಿಷತ್ತಿನ ಮುಕ್ತಕ ಕವಿ ಎಂದೇ ಪ್ರಸಿದ್ಧರಾದ ಮುತ್ತುಸ್ವಾಮಿ ಮಾತನಾಡಿ, ವ್ಯಾಸ ಮಹರ್ಷಿ ಹೇಳಿದ ಮಹಾಭಾರತವನ್ನು ಪಾರ್ವತಿ ತನಯ ಗಣಪತಿ ಬರೆದು ಉಪಕರಿಸಿದ. ಗಣೇಶನ ಬಗ್ಗೆ ತಿಳಿದುಕೊಳ್ಳುವ ಮತ್ತಷ್ಟು ವಿಷಯಗಳು ಇವೆ. ಶಿವಕುಮಾರ್ ಅವರ ಈ ಸಂಗ್ರಹಕ್ಕೆ ಸಂಘ ಸಂಸ್ಥೆಗಳ, ಸರ್ಕಾರದ ನೆರವು ಅಗತ್ಯ ಎಂದರು. ಅಲ್ಲದೆ ಇವರು ಸಂಗ್ರಹಿಸಿರುವ ಗಣೇಶನ ಚಿತ್ರಗಳು ಲೇಖನಗಳು ವಿವಿಧ ಮಾಹಿತಿಗಳು ಪುಸ್ತಕ ರೂಪದಲ್ಲಿ ಪ್ರಕಟವಾದರೆ ನಮ್ಮ ಮುಂದಿನ ಪೀಳಿಗೆಗೆ ಅಪರೂಪದ ಮಾಹಿತಿ ಕೊಂಡೊಯ್ಯಬಹುದು ಎಂದರು.ಸಂಗ್ರಹಕ ಕಾಳಿಹುಂಡಿ ಶಿವಕುಮಾರ್ ಮಾತನಾಡಿ, ಪತ್ರಿಕೆಗಳಲ್ಲಿ ಬಂದಿರುವ ಗಣೇಶನ ಚಿತ್ರ-ಲೇಖನಗಳನ್ನು ಮೊದಲು ಪ್ರದರ್ಶನ ಮಾಡಿದ್ದೆ. ಈ ಪ್ರದರ್ಶನ ನನ್ನ ಮತ್ತಷ್ಟು ಹವ್ಯಾಸಗಳಿಗೆ ನಾಂದಿಯಾಯಿತು. ನಾನು ಮುಂದುವರೆದು ಈಗಾಗಲೇ ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ ಸಂಬಂಧಿಸಿದ ಪ್ರತಿಕಾ ಸಂಗ್ರಹ, ಸಾಂಸ್ಕೃತಿಕ ನಗರಿ ಮೈಸೂರಿನ ಬಗ್ಗೆ, ಕನ್ನಡ ನಾಡು- ನುಡಿ ಬಗ್ಗೆ, ಯೋಗ ಕುರಿತಾಗಿ ಪತ್ರಿಕೆಗಳಲ್ಲಿ ಬಂದಿರುವ ಚಿತ್ರ-ಲೇಖನಗಳನ್ನು ಪ್ರದರ್ಶನ ಮಾಡಿದ್ದು, ಮುಂದಿನ ದಿನಗಳಲ್ಲಿ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ಪುನೀತ್ ರಾಜಕುಮಾರ್ ಸೇರಿದಂತೆ ಮತ್ತಷ್ಟು ವ್ಯಕ್ತಿಗಳ ಬಗ್ಗೆ ಪ್ರದರ್ಶನ ಮಾಡುವ ಆಶಯವನ್ನು ವ್ಯಕ್ತಪಡಿಸಿದರು.
ಸಮೃದ್ಧ ಮತ್ತು ಹಿಮಜಿತ್ ಪ್ರಭು ಪ್ರಾರ್ಥಿಸಿದರು. ಮೈಸೂರು ಆರ್ಟ್ ಗ್ಯಾಲರಿಯ ಸಂಚಾಲಕ ಶ್ರೀಕಂಠಮೂರ್ತಿ ನಿರೂಪಿಸಿದರು.