ಭಕ್ತರ ಗಮನ ಸೆಳೆಯುತ್ತಿದೆ ಕಬ್ಬಿನಲ್ಲಿ ಮೂಡಿದ ಗಣಪತಿGanesha made of sugarcane attracts the attention of devotees

| Published : Aug 29 2025, 01:00 AM IST

ಭಕ್ತರ ಗಮನ ಸೆಳೆಯುತ್ತಿದೆ ಕಬ್ಬಿನಲ್ಲಿ ಮೂಡಿದ ಗಣಪತಿGanesha made of sugarcane attracts the attention of devotees
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಪಿಒಪಿ ಗಣೇಶ ಮೂರ್ತಿಗಳನ್ನು ತ್ಯಜಿಸಿ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸುವಂತೆ ಸರ್ಕಾರ, ಜಿಲ್ಲಾಡಳಿತ ಹಲವೆಡೆ ಅರಿವು ಮೂಡಿಸುತ್ತಿದ್ದರೂ ಬಹುತೇಕ ಕಡೆ ಪಿಒಪಿ ಮಿಶ್ರಿತ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದು ಪರಿಸರಕ್ಕೆ ಮಾರಕವಾಗಿಯೂ ಪರಿಣಮಿಸಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಗೌರಿ- ಗಣೇಶ ಹಬ್ಬದ ಅಂಗವಾಗಿ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಆವರಣದ ಚಾಮುಂಡೇಶ್ವರಿ ದೇವಾಲಯದ ಪ್ರಾಂಗಣದಲ್ಲಿ ಒಂದು ಟನ್ ಕಬ್ಬು ಬಳಸಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯು ಭಕ್ತರು, ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಚಾಮುಂಡೇಶ್ವರಿ ದೇವಾಲಯ ಸ್ಥಾಪನೆ ಆರಂಭದಿಂದಲೂ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪಿಸಲಾಗುತ್ತಿತ್ತು. ಈ ಬಾರಿ ರೈತರಿಗೆ ವಿಶೇಷ ಗೌರವ ನೀಡುವ ಸಲುವಾಗಿ ಕಾರ್ಖಾನೆ ವತಿಯಿಂದ ಕಬ್ಬಿನಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ಪರಿಸರ ಸ್ನೇಹಿಯಾಗಿರುವುದರಿಂದ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ. ಇದರಿಂದ ಕಾರ್ಖಾನೆ ಆಡಳಿತ ಮಂಡಳಿ ಬಗ್ಗೆ ಪ್ರಶಂಸೆಯೂ ವ್ಯಕ್ತವಾಗಿದೆ.

ಪ್ರಸ್ತುತ ಪಿಒಪಿ ಗಣೇಶ ಮೂರ್ತಿಗಳನ್ನು ತ್ಯಜಿಸಿ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸುವಂತೆ ಸರ್ಕಾರ, ಜಿಲ್ಲಾಡಳಿತ ಹಲವೆಡೆ ಅರಿವು ಮೂಡಿಸುತ್ತಿದ್ದರೂ ಬಹುತೇಕ ಕಡೆ ಪಿಒಪಿ ಮಿಶ್ರಿತ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದು ಪರಿಸರಕ್ಕೆ ಮಾರಕವಾಗಿಯೂ ಪರಿಣಮಿಸಿದೆ.

ಇದರ ನಡುವೆ ಚಾಂಷುಗರ್ ಕಾರ್ಖಾನೆ ವತಿಯಿಂದ ಆವರಣದಲ್ಲಿ ಅದರಲ್ಲೂ ಕಬ್ಬಿನ ಮೂಲಕವೇ ಪ್ರತಿಷ್ಠಾಪಿಸಿರುವ ಪರಿಸರ ಸ್ನೇಹಿ ಗಣೇಶ ಮೂರ್ತಿ ನೋಡುಗರನ್ನು ಆಕರ್ಷಿಸುತ್ತಿದೆ. ಅಲ್ಲದೆ ಈ ಗಣೇಶನನ್ನು ನೋಡಲು ಸಾರ್ವಜನಿಕರು, ಭಕ್ತರು, ರೈತರು ಆಗಮಿಸಿ ಆಶ್ಚರ್ಯಪಡುತ್ತಿದ್ದಾರೆ.

ಕಾರ್ಖಾನೆಯ ವಿಶೇಷ ಆಸಕ್ತಿಯೊಂದಿಗೆ 10 ಅಡಿ ಎತ್ತರ, 5 ಅಡಿ ಅಗಲ ಇರುವ ವಿಶೇಷ ವಿನಾಯಕನ ನಿರ್ಮಾಣಕ್ಕೆ ಮುರುಗೇಶ್ ಎಂಬುವವರು ಪ್ರೇಂ ತಯಾರು ಮಾಡಿದ್ದರು. ಆ ಪ್ರೇಂಗೆ ಒಂದು ಟನ್ ಕಬ್ಬು ಬಳಸಿ ವಿಜಯ್ ಅವರು ವಕ್ರತುಂಡನ ಮೂರ್ತಿ ಸಿದ್ಧಪಡಿಸಿದ್ದಾರೆ. ರೈತರು ಸೇರಿದಂತೆ ಹಲವು ಜನತೆ ಭೇಟಿ ನೀಡಿ ದರ್ಶನ ಪಡೆದು ಹೋಗುತ್ತಿದ್ದಾರೆ.

------------

ನಮ್ಮ ಕಾರ್ಖಾನೆಯ ಸಿಬ್ಬಂದಿ ವಿಶೇಷ ಆಸಕ್ತಿಯೊಂದಿಗೆ ಸಕ್ಕರೆ ನಾಡು, ಕಬ್ಬಿನ ಬೀಡು ಎಂದೆ ಖ್ಯಾತಿ ಪಡೆದಿರುವ ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿಯಲ್ಲಿ ಕಬ್ಬಿನಿಂದಲೇ ಗಣೇಶ ಮೂರ್ತಿ ತಯಾರಿಸಿರುವುದು ನನಗೂ ಬಹಳ ಸಂತೋಷವನ್ನುಂಟು ಮಾಡಿದೆ. ವಿಶೇಷತೆಯನ್ನು ಹೊಂದಿರುವ ಗಣೇಶ ಮೂರ್ತಿ ನೋಡಲು ಭಕ್ತರು, ಸಾರ್ವಜನಿಕರು ಬರುತ್ತಿದ್ದಾರೆ.

ಮಣಿ, ಚಾಂಶುಗರ್ ಕಾರ್ಖಾನೆ ಹಿರಿಯ ಉಪಾಧ್ಯಕ್ಷರು.

------------

ಚಾಮುಂಡೇಶ್ವರಿ ದೇವಾಲಯ ಸ್ಥಾಪನೆ ಆರಂಭದಿಂದಲೂ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪಿಸಲಾಗುತ್ತಿತ್ತು. ಕಾರ್ಖಾನೆಯು ಹಲವು ವರ್ಷಗಳಿಂದ ರೈತ ಸ್ನೇಹಿ ಆಲೋಚನೆಗಳೊಂದಿಗೆ ಕೆಲಸ ಮಾಡುತ್ತಿದೆ. ಹೀಗಾಗಿ ಕಬ್ಬಿನ ಮೂಲಕ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಮುಂದಿನ ಮಂಗಳವಾರದವರೆಗೆ ಗಣೇಶ ಮೂರ್ತಿ ಇಟ್ಟು ಪ್ರತಿ ದಿನ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಕಾರ್ತಿಕ್ ಆರಾಧ್ಯ, ಪ್ರಧಾನ ಅರ್ಚಕರು, ಚಾಮುಂಡೇಶ್ವರಿ ದೇವಾಲಯ.