ಸಾರಾಂಶ
46ನೇ ವರ್ಷದ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ವೈಭವದಿಂದ ನಡೆಯಿತು. ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ಸಾಗಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಶಾಂತಿನಿಕೇತನ ಯುವಕ ಸಂಘದ ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ 46ನೇ ವರ್ಷದ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ ಶನಿವಾರ ರಾತ್ರಿ ವೈಭವದಿಂದ ನಡೆಯಿತು.ಶಾಂತಿನಿಕೇತನ ಬಡಾವಣೆ, ಕೆಎಸ್ಆರ್‌ಟಿಸಿ ಬಸ್ ಡಿಪೋ ಬಳಿಯಿಂದ ಶೋಭಾಯಾತ್ರೆಯ ಮೆರವಣಿಗೆ ಆರಂಭಗೊಂಡು ಮಡಿಕೇರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾ ಯಾತ್ರೆ ಸಾಗಿತು.
ಮೆರವಣಿಗೆಯಲ್ಲಿ ‘ಲೋಕ ಕಲ್ಯಾಣಕ್ಕಾಗಿ ಮಯೂರೇಶನಿಂದ ಸಿಂಧು ದೈತ್ಯ ರಾಜನ ಸಂಹಾರ’ ಎಂಬ ಕಥಾವಸ್ತುವನ್ನು ಅಳವಡಿಸಿಕೊಳ್ಳಲಾಗಿತ್ತು. ಕಥಾ ಮಂಟಪದಲ್ಲಿ ಆದ್ದೂರಿ ಶೋಭಾಯಾತ್ರೆಯೊಂದಿಗೆ ಮಡಿಕೇರಿಯ ಮುಖ್ಯ ರಸ್ತೆಗಳಲ್ಲಿ ಕೊಂಡೊಯ್ದು, ನಂತರ ಗೌರಿ ಕೆರೆಯಲ್ಲಿ ವಿಸರ್ಜಿಸಲಾಯಿತು.ಮೆರವಣಿಗೆ ನೋಡಲು ಜನರು ಕಿಕ್ಕಿರಿದು ಸೇರಿದ್ದರು. ಪ್ರತಿ ವರ್ಷ ಶಾಂತಿನಿಕೇತನ ಸಮಿತಿಯು ಅದ್ದೂರಿ ಗೌರಿ ಗಣೇಶ ಮೂರ್ತಿಗಳನ್ನು ಶ್ರದ್ಧಾ ಭಕ್ತಿಯಿಂದ ಮೆರವಣಿಗೆ ನಡೆಸಿ ನಂತರ ವಿಸರ್ಜಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದಾರೆ.
15 ದಿನಗಳ ಕಾಲ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಗಣೇಶೋತ್ಸವ ಪ್ರಯುಕ್ತ ಪ್ರತಿದಿನ ರಾತ್ರಿ 8 ಗಂಟೆಗೆ ಮಹಾಪೂಜೆಯ ನಂತರ ಭಜನೆ ಕಾರ್ಯಕ್ರಮ ಜರುಗಿತು. ಸಾರ್ವಜನಿಕರಿಗಾಗಿ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು.