ತೂಬಗೆರೆಯಲ್ಲಿ ಆನೆ ಮೇಲೆ ಗಣೇಶನ ಅಂಬಾರಿ ವೈಭವ

| Published : Sep 03 2025, 01:00 AM IST

ಸಾರಾಂಶ

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆಯಲ್ಲಿ ಈ ಬಾರಿ ನಡೆದ ಗಣೇಶೋತ್ಸವ ಐತಿಹಾಸಿಕ ಆನೆ ಅಂಬಾರಿ ಮೆರವಣಿಗೆಯೊಂದಿಗೆ ಸಂಪನ್ನಗೊಂಡು ಜನಮನ ಸೆಳೆದಿತು.

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆಯಲ್ಲಿ ಈ ಬಾರಿ ನಡೆದ ಗಣೇಶೋತ್ಸವ ಐತಿಹಾಸಿಕ ಆನೆ ಅಂಬಾರಿ ಮೆರವಣಿಗೆಯೊಂದಿಗೆ ಸಂಪನ್ನಗೊಂಡು ಜನಮನ ಸೆಳೆದಿತು.

ತೂಬಗೆರೆ ಚಾವಡಿ ಗಣೇಶೋತ್ಸವ ಸಮಿತಿ ಮೊದಲ ಬಾರಿಗೆ ಆಯೋಜಿಸಿದ ಆನೆ ಅಂಬಾರಿ ಮೆರವಣಿಗೆ ದಸರಾ ಅಂಬಾರಿ ಮೆರವಣಿಗೆಯ ಮಾದರಿಯಲ್ಲಿ ನಡೆದು, ಸಹಸ್ರಾರು ಜನರ ಭಕ್ತಿಭಾವಕ್ಕೆ ಸಾಕ್ಷಿಯಾಯಿತು. ಅಲಂಕೃತಗೊಂಡ ಅಂಬಾರಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಲಕ್ಷ್ಮೀ ಹೆಸರಿನ ಆನೆಯ ಮೇಲೆ ಹೊರಿಸಲಾಗಿತ್ತು. ಊರಿನ ಪ್ರಮುಖ ಬೀದಿಗಳಲ್ಲಿ ಗಜ ಗಾಂಭೀರ್ಯದಿಂದ ನಡಿಗೆ ಸಾಗಿದ ದೃಶ್ಯವನ್ನು ಭಕ್ತರು ಕಣ್ತುಂಬಿಕೊಂಡರು.

ಭಕ್ತರು ಆನೆಯನ್ನು ಸ್ವಾಗತಿಸಿ, ಭಕ್ತಿ–ಭಾವದಿಂದ ಮೆರವಣಿಗೆಯನ್ನು ಅನುಸರಿಸಿದರು. ನಾದಸ್ವರದ ಮೇಳ, ಡೊಳ್ಳು–ಕುಣಿತ, ಜಾನಪದ ತಂಡಗಳ ಸೊಗಸು ಎಲ್ಲವೂ ಸೇರಿ ಉತ್ಸವವನ್ನು ಜಾತ್ರೆಯಂತೆ ಭವ್ಯಗೊಳಿಸಿತ್ತು.

ಸಚಿವರಿಂದ ಚಾಲನೆ:

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಪುಷ್ಪಾರ್ಚನೆ ಮಾಡುವುದರ ಮೂಲಕ ಆರಂಭವಾದ ಮೆರವಣಿಗೆ ಸಂಜೆವರೆಗೂ ಊರಿನ ಬೀದಿಗಳಲ್ಲಿ ಸಡಗರ–ಸಂಭ್ರಮದಲ್ಲಿ ಸಾಗಿತು. ಯುವಕರು ಕುಣಿದು–ಕುಪ್ಪಳಿಸಿದರು. ಹಿರಿಯರು ಪಾರಂಪರಿಕ ರೀತಿಯಲ್ಲಿ ಮೆರವಣಿಗೆಗೆ ಕೈಜೋಡಿಸಿದರು. ವಿಸರ್ಜನೆ ಕಾರ್ಯಕ್ರಮ ಭಕ್ತರ ಶಿಸ್ತಿನ ಪಾಲ್ಗೊಳ್ಳುವಿಕೆಯಿಂದ ಸಕಾಲಕ್ಕೆ ಯಶಸ್ವಿಯಾಗಿ ನೆರವೇರಿತು. ಸರ್ಕಾರದ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು.ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಅಂಬರೀಶ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಸಿದ್ದಪ್ಪ, ಜಿಪಂ ಮಾಜಿ ಸದಸ್ಯ ಅರವಿಂದ್‌, ವಕೀಲ ಪ್ರತಾಪ್, ಪಂಚಾಯಿತಿ ಸದಸ್ಯರಾದ ಕೃಷ್ಣಪ್ಪ, ಮುನಿಕೃಷ್ಣಪ್ಪ, ಯುವ ಮುಖಂಡ ಉದಯ ಆರಾಧ್ಯ, ರೈತ ಮುಖಂಡ ವಾಸು, ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಾಂತಕುಮಾರ್, ರಂಗಪ್ಪ, ನಿವೃತ್ತ ಯೋಧ ಅನಂತರಾಜ್ ಗೋಪಾಲ್ ಇತರರು ಪಾಲ್ಗೊಂಡಿದ್ದರು.

2ಕೆಡಿಬಿಪಿ2-

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆಯಲ್ಲಿ ಗಣೇಶ ವಿಸರ್ಜನೆ ಅಂಗವಾಗಿ ನಡೆದ ಆನೆ ಮೇಲೆ ಅಂಬಾರಿ ಉತ್ಸವದಲ್ಲಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.