ಗಣೇಶಮೂರ್ತಿ ವ್ಯಾಪಾರ ಕುಸಿತ; ವ್ಯಾಪಾರಿಗಳು ಕಂಗಾಲು..!

| Published : Sep 07 2024, 01:35 AM IST

ಸಾರಾಂಶ

ವಿಷಕಾರಿ ರಾಸಾಯನಿಕ ಬಳಸಿ ಗಣಪನ ಮೂರ್ತಿ ತಯಾರಿಸಿ ನೀರಿನಲ್ಲಿ ವಿರ್ಸಜನೆ ಮಾಡುವುದರಿಂದ ನೀರು ಸಹ ಮಲೀನಗೊಳ್ಳುತ್ತದೆ. ಪಿಒಪಿ ಗಣಪನ ವಿಸರ್ಜನೆ ಮಾಡುವುದರಿಂದ ನೀರಿನಲ್ಲಿ ಕರಗುವುದಿಲ್ಲ.

ಅಣ್ಣೂರು ಸತೀಶ್

ಕನ್ನಡಪ್ರಭ ವಾರ್ತೆ ಭಾರತೀನಗರ

ಗೌರಿ- ಗಣೇಶಮೂರ್ತಿಗಳ ವ್ಯಾಪಾರದಲ್ಲಿ ಕುಸಿತ ಉಂಟಾಗಿದ್ದು, ವ್ಯಾಪಾರಿಗಳು ಕಂಗಾಲಾಗಿದ್ದಾರೆ.

ಭಾರತೀನಗರ ವ್ಯಾಪ್ತಿ ದೊಡ್ಡ ದೊಡ್ಡ ಗಣಪಗಳನ್ನು ತಂದಿದ್ದ ಅಂಗಡಿ ಮಾಲೀಕರಿಗೆ ವ್ಯಾಪಾರವಾಗದೆ ಕಾದು ಕುಳಿತಿದ್ದರು. ಕೆಲವು ಅಂಗಡಿಗಳಲ್ಲಿ ಚಿಕ್ಕಚಿಕ್ಕ ಮಣ್ಣಿನ ಗಣಪ ಹಾಗೂ ಅಲಂಕಾರಿಕ ಗಣಪನನ್ನು ಮಾರಾಟ ಮಾಡುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಪರಿಸರ ಹಾನಿ ನಿರಂತರವಾಗಿ ನಡೆಯುತ್ತಿದೆ. ಪರಿಸರ ಸ್ನೇಹಿ ಗಣಪತಿಯನ್ನು ಮನೆಯಲ್ಲೇ ತಯಾರಿಸಬೇಕು ಅಥವಾ ಮಾರಾಟ ಮಾಡುವ ಅಂಗಡಿಯಲ್ಲಿ ತಂದು ಪ್ರತಿಷ್ಠಾಪಿಸಬೇಕು. ಜನತೆ ರಾಸಾಯನಿಕ ಮಿಶ್ರಿತ ಗಣಪತಿಯಿಂದ ದೂರ ಉಳಿದು ಪರಿಸರ ಸ್ನೇಹಿ ಗಣಪತಿ ಕೂರಿಸಬೇಕು.

ವಿಷಕಾರಿ ರಾಸಾಯನಿಕ ಬಳಸಿ ಗಣಪನ ಮೂರ್ತಿ ತಯಾರಿಸಿ ನೀರಿನಲ್ಲಿ ವಿರ್ಸಜನೆ ಮಾಡುವುದರಿಂದ ನೀರು ಸಹ ಮಲೀನಗೊಳ್ಳುತ್ತದೆ. ಪಿಒಪಿ ಗಣಪನ ವಿಸರ್ಜನೆ ಮಾಡುವುದರಿಂದ ನೀರಿನಲ್ಲಿ ಕರಗುವುದಿಲ್ಲ.

ಕೆರೆ, ಕಟ್ಟೆ ಮತ್ತು ಬಾವಿಗಳಲ್ಲಿ ಗಣೇಶ ವಿಸರ್ಜನೆ ಮಾಡುವುದರಿಂದ ನೀರು ಕಲುಷಿತಗೊಂಡು ಜನ-ಜಾನುವಾರುಗಳಿಗೂ ಹಾನಿಯಾಗುತ್ತದೆ. ಹಾಗಾಗಿ ಪರಿಸರ ಸಂರಕ್ಷಣೆಗಾಗಿ ಮನೆಯಲ್ಲೇ ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಣೆ ಮಾಡಬೇಕೆಂಬುವುದು ಎಲ್ಲರ ಆಶಯವಾಗಿದೆ.

ಅಗತ್ಯ ವಸ್ತುಗಳ ಖರೀದಿಗೆ ಮುಂದಾದ ಜನರು:

ಕೆ.ಎಂ.ದೊಡ್ಡಿಯ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಗಣೇಶ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದರು. ಜನರು ಗಣೇಶ ಹಬ್ಬವನ್ನು ಆಚರಿಸಲು ಪಟ್ಟಣಕ್ಕೆ ಆಗಮಿಸಿದ್ದರು. ದ್ವಿಚಕ್ರವಾಹನ ಸವಾರರು ಸ್ಥಳವಿಲ್ಲದೆ ರಸ್ತೆ ಬದಿಯಲ್ಲೇ ನಿಲ್ಲಿಸಿ ತಮಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದರು.

ಹೀಗಾಗಿ ರಸ್ತೆಯುದ್ದಕ್ಕೂ ಸಾಲು-ಸಾಲು ದ್ವಿಚಕ್ರ ವಾಹನಗಳು ನಿಂತಿದ್ದವು. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಪೊಲೀಸರು ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸದಂತೆ ಸೂಚಿಸುತ್ತಿದ್ದರು. ಫುಟ್‌ ಪಾತ್‌ನಲ್ಲಿ ಹಣ್ಣು, ಹೂ, ಗೌರಿ-ಗಣೇಶ ಮೂರ್ತಿಗಳ ವ್ಯಾಪಾರ ಬಲು ಜೋರಾಗಿತ್ತು.

ಇಂದು ದೊಡ್ಡದೊಡ್ಡ ಗಣಪತಿ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ವ್ಯಾಪಾರಿಗಳಿಗೆ ದೊಡ್ಡಪೆಟ್ಟು ಬಿದ್ದಿದೆ ಎಂದು ವ್ಯಾಪಾರಿ ಚಿಕ್ಕರಸಿನಕೆರೆ ರಾಘು ತಿಳಿಸಿದರು.

ಆಡಂಬರದ ಗಣಪತಿ ಪ್ರತಿಷ್ಠಾಪನೆ ಬಿಟ್ಟು ಜನರು ಮನೆಯಲ್ಲಿ ಸರಳವಾಗಿ ಗಣೇಶ ಚತುರ್ಥಿ ಆಚರಿಸಿ ಸಂಭ್ರಮಿಸೋಣ ಎಂದು ಪುರಸಭೆ ಸದಸ್ಯ ಚನ್ನೇಗೌಡನದೊಡ್ಡಿ ಮಹೇಶ್ ಸಲಹೆ ನೀಡಿದರು.

ಜನತೆ ಬಣ್ಣದ ಗಣೇಶನ ವ್ಯಾಮೋಹಕ್ಕೆ ಒಳಗಾಗದೇ ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಠಾಪಿಸುವುದರಿಂದ ಪರಿಸರ ಸಂರಕ್ಷಿಸಿದಂತಾಗುತ್ತದೆ ಎಂದು ರೈತ ಟಿ.ಪಿ.ಅರುಣ್ ಕುಮಾರ್ ಮನವಿ ಮಾಡಿದರು.