ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ವಿರಾಜಮಾನ ಗಣೇಶ!

| Published : Sep 09 2024, 01:30 AM IST

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ವಿರಾಜಮಾನ ಗಣೇಶ!
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿ ಈದ್ಗಾ ಮೈದಾನ (ಕಿತ್ತೂರು ರಾಣಿ ಚೆನ್ನಮ್ಮ ಮೈದಾನ)ದಲ್ಲಿ 3ನೆಯ ವರ್ಷದ ಗಣೇಶ ಪ್ರತಿಷ್ಠಾಪನೆ ಅದ್ಧೂರಿಯಾಗಿ ನಡೆಯಿತು. 3 ದಿನದ ಗಣೇಶೋತ್ಸವವೂ ಪೊಲೀಸ್‌ ಸರ್ಪಗಾವಲಿನಲ್ಲಿ ಶಾಂತಿಯುತವಾಗಿ ನಡೆಯುತ್ತಿದೆ.

ಹುಬ್ಬಳ್ಳಿ: ಇಡೀ ದೇಶದಲ್ಲಿ ಸಂಚಲನ ಮೂಡಿಸಿರುವ ಇಲ್ಲಿನ ಈದ್ಗಾ ಮೈದಾನ (ಕಿತ್ತೂರು ರಾಣಿ ಚೆನ್ನಮ್ಮ ಮೈದಾನ)ದಲ್ಲಿ 3ನೆಯ ವರ್ಷದ ಗಣೇಶ ಪ್ರತಿಷ್ಠಾಪನೆ ಅದ್ಧೂರಿಯಾಗಿ ನಡೆಯಿತು. 3 ದಿನದ ಗಣೇಶೋತ್ಸವವೂ ಪೊಲೀಸ್‌ ಸರ್ಪಗಾವಲಿನಲ್ಲಿ ಶಾಂತಿಯುತವಾಗಿ ನಡೆಯುತ್ತಿದೆ.

ಶನಿವಾರ ಇಲ್ಲಿನ ಮೂರುಸಾವಿರ ಮಠದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಜಾಂಜ್‌, ಡೊಳ್ಳು ಸೇರಿದಂತೆ ವಿವಿಧ ವಾದ್ಯಗಳು ಮೆರವಣಿಗೆಗೆ ಮೆರಗು ತಂದವು. ದಾಜಿಬಾನ ಪೇಟ, ತುಳಜಾಭವಾನಿ ದೇವಸ್ಥಾನ, ರಾಯಣ್ಣ ಸರ್ಕಲ್ ಮೂಲಕ ಈದ್ಗಾ ಮೈದಾನಕ್ಕೆ ಆಗಮಿಸಿ ಆನಂತರ ಪ್ರತಿಷ್ಠಾಪನೆಗೊಂಡಿತು. ಶ್ರೀರಾಮನ ಅವತಾರದಲ್ಲಿರುವ ವಿಶ್ವೇಶ್ವರ ಮೂರ್ತಿ ಜನರನ್ನು ಸೆಳೆಯುತ್ತಿದೆ.

ಶನಿವಾರ ಪ್ರತಿಷ್ಠಾಪನೆಗೊಂಡಾಗಿನಿಂದ ನಿರಂತರವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಹೋಮಹವನಗಳು ನಡೆಯುತ್ತಲೇ ಇವೆ. ಮಹಿಳಾ ಮಂಡಳಿಗಳಿಂದ ನಿರಂತರವಾಗಿ ಭಜನೆ ಕೂಡ ನಡೆಯುತ್ತಿದೆ. ಜನರು ಕೂಡ ಸಾಗರದಂತೆ ಹರಿದು ಬರುತ್ತಿದ್ದಾರೆ. ಎರಡನೆಯ ದಿನವಾದ ಭಾನುವಾರ ಇಲ್ಲಿನ ರಾಯಲ್‌ ರಿಡ್ಜ್‌ ಹೋಟೆಲ್‌ನ ಮಾಲೀಕರು ಪ್ರಸಾದದ ವ್ಯವಸ್ಥೆ ಮಾಡಿದ್ದರು.

ಮುಂಜಾಗ್ರತಾ ಕ್ರಮವಾಗಿ ಮೂವರು ಪಿಐ, ಐವರು ಪಿಎಸ್‌ಐ, ಏಳು ಜನ ಎಎಸ್‌ಐ, ಹೆಡ್ ಕಾನ್‌ಸ್ಟೆಬಲ್‌ 12, ಪೊಲೀಸ್‌ ಪೇದೆ 39, ಹೋಮ್‌ ಗಾರ್ಡ್‌ 19 ಸೇರಿದಂತೆ ಒಟ್ಟು 74 ಪೊಲೀಸ್‌ ಸಿಬ್ಬಂದಿ ಭದ್ರತೆಯಲ್ಲಿ ತೊಡಗಿದ್ದಾರೆ. ಇದಲ್ಲದೇ, 140 ಜನ ಇರುವ ಪ್ಯಾರಾ ಮಿಲಿಟರಿ ಇರುವ ತುಕಡಿಯೊಂದು ಕಾರ್ಯನಿರ್ವಹಿಸುತ್ತಿದೆ. ಮೈದಾನದ ಸುತ್ತಲು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಶ್ರೀ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ್‌, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂಎಲ್‌ಸಿ ಪ್ರದೀಪ ಶೆಟ್ಟರ್‌, ಸ್ವರ್ಣಾ ಗ್ರೂಪ್‌ ಆಫ್‌ ಕಂಪನೀಸ್‌ನ ವ್ಯವಸ್ಥಾಪಕ ನಿರ್ದೇಶಕ ವಿಎಸ್‌ವಿ ಪ್ರಸಾದ, ಮೇಯರ್‌ ರಾಮಣ್ಣ ಬಡಿಗೇರ, ರಾಣಿ ಚೆನ್ನಮ್ಮ ಮೈದಾನ ಗಜಾನನ ಮಹಾಮಂಡಳಿ ಅಧ್ಯಕ್ಷ ಸಂಜೀವ ಬಡಸ್ಕರ್‌, ಜಯತೀರ್ಥ ಕಟ್ಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಬಿಜೆಪಿ ಮುಖಂಡ ಮಹೇಂದ್ರ ಕೌತಾಳ ಸೇರಿದಂತೆ ಹಲವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದಾರೆ.

ಇಂದು ವಿಸರ್ಜನೆ: ಈದ್ಗಾ ಮೈದಾನದಲ್ಲಿ ವಿರಾಜಮಾನ ಆಗಿರುವ ಗಣೇಶನ ವಿಸರ್ಜನಾ ಮೆರವಣಿಗೆಯು ಸೆ. 9ರಂದು ಬೆಳಗ್ಗೆ 11.45ಕ್ಕೆ ಪ್ರಾರಂಭವಾಗಲಿದೆ. ಆರ್‌ಎಸ್‌ಎಸ್‌ನ ಪ್ರಮುಖ ಮಂಗೇಶ ಬೇಂಡೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಈದ್ಗಾ ಮೈದಾನದ ಗಣೇಶನಿಗೆ ಗಣೇಶ ಆರತಿ:

ಇಲ್ಲಿನ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಗಣೇಶನಿಗೆ ಆರ್‌ಎಸ್‌ಎಸ್‌ ಘೋಷ್‌(ಬ್ಯಾಂಡ್‌) ಮೂಲಕ ನಮನ ಸಲ್ಲಿಸಲಾಯಿತು. ಇದೇ ವೇಳೆ ಗಂಗಾ ಆರತಿ ಮಾದರಿಯಲ್ಲೇ ವಿಶ್ವ ಹಿಂದೂ ಪರಿಷತ್‌ನಿಂದ ಗಣೇಶ ಆರತಿ ಮಾಡುವ ಮೂಲಕ ಭಕ್ತಿ ಭಾವ ಮೆರೆಯಲಾಯಿತು.

ಭಾನುವಾರ ಸಂಜೆ ಆರ್‌.ಎಸ್‌.ಎಸ್‌. ಘೋಷ್‌ ಮುಖ್ಯ ಶಿಕ್ಷಕ ವಿನಾಯಕ ತಾಂಬೆ ನೇತೃತ್ವದಲ್ಲಿ ನಡೆಯಿತು.

ಬಳಿಕ ವಿಶ್ವ ಹಿಂದೂ ಪರಿಷತ್‌ನ ಹಳೇಹುಬ್ಬಳ್ಳಿ ಪ್ರಖಂಡ ಕಾರ್ಯದರ್ಶಿ ಶಿವು ಗುರಂ ತಂಡದ ನೇತೃತ್ವದಲ್ಲಿ ಗಣೇಶ ಆರತಿ ನಡೆಸಲಾಯಿತು.