ಇಲ್ಲಿನ ಕಿನ್ನಿಮುಲ್ಕಿ - ಕನ್ನರ್ಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 21ನೇ ವರ್ಷದ 10 ದಿನಗಳ ಸಾರ್ವಜನಿಕ ಶ್ರೀ ಗಣೇಶೋತ್ಸವವು ಬುಧವಾರ ರಾತ್ರಿ ವೈಭವದಿಂದ ಸಮಾರೋಪಗೊಂಡಿದೆ.
ಉಡುಪಿ: ಇಲ್ಲಿನ ಕಿನ್ನಿಮುಲ್ಕಿ - ಕನ್ನರ್ಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 21ನೇ ವರ್ಷದ 10 ದಿನಗಳ ಸಾರ್ವಜನಿಕ ಶ್ರೀ ಗಣೇಶೋತ್ಸವವು ಬುಧವಾರ ರಾತ್ರಿ ವೈಭವದಿಂದ ಸಮಾರೋಪಗೊಂಡಿದೆ. ಈ ಬಾರಿ ಇಲ್ಲಿ ಪ್ರತಿಷ್ಠಾಪಿಸಲಾದ ಬೃಹತ್ ಧೂಮ್ರವರ್ಣ ಗಣೇಶನ ವಿಗ್ರಹದ ಶೋಭಾಯಾತ್ರೆ ಮತ್ತು ವಿಸರ್ಜನಾ ಮೆರವಣಿಗೆಯು ಬುಧವಾರ ಸಂಜೆ ಅದ್ಧೂರಿಯಾಗಿ ನಡೆಯಿತು.
ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದ ಈ ಶೋಭಾಯಾತ್ರೆಯಲ್ಲಿ ಅಯ್ಯಪ್ಪ ಸ್ವಾಮಿ, ಪರಶುರಾಮ, ರಾಧಾ-ಕೃಷ್ಣ, ವಸುದೇವ - ಕೃಷ್ಣ, ಕಾಳಿಂಗ ಮರ್ಧನ, ಮತ್ಸ್ಯಾವತಾರಕ, ನರಸಿಂಹ, ದೇವಿ ಮಹಾತ್ಮೆ, ಇತ್ಯಾದಿ 25ಕ್ಕೂ ಹೆಚ್ಚು ಸ್ಥಬ್ದಚಿತ್ರಗಳು ಮೆರವಣಿಗೆಗೆ ವಿಶೇಷ ಕಳೆ ನೀಡಿದವರು. ಮಂಗಳವಾದ್ಯ, ಚಂಡೆವಾದನ, ನಾಸಿಕ್ ಬ್ಯಾಂಡ್ ಗಳಿಗೆ ಯುವಜನರು ಹಾಡುತ್ತಾ ಕುಣಿಯುತ್ತಾ ಮೆರವಣಿಗೆಯನ್ನು ಸ್ಮರಣೀಯಗೊಳಿಸಿದರು.ಸ್ವತಃ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಕೆ. ಕೃಷ್ಣಮೂರ್ತಿ ಆಚಾರ್ಯ ಅವರೇ ಗಣೇಶನನ್ನು ಕೂರಿಸಿದ ವಾಹನವನ್ನು ನಗರ ಮೆರವಣಿಗೆಯುದ್ದಕ್ಕೂ ಚಲಾಯಿಸಿದ್ದು ಗಮನ ಸಳೆಯಿತು.ಈ ವೈಭವ ಗಣೇಶೋತ್ಸವದ ಬಗ್ಗೆ ಅವರು ಮಾತನಾಡಿ, 10 ದಿನಗಳ ಕಾಲ ನಡೆದ ಈ ಉತ್ಸವದಲ್ಲಿ ಪ್ರತಿದಿನವೂ ಪೂಜೆ ಹೋಮಗಳ ಜೊತೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಇದು ಸಾವಿರಕ್ಕೂ ಹೆಚ್ಚು ಕಲಾವಿದರಿಗೆ ವೇದಿಕೆಯಾಯಿತು. ರಾಜ್ಯ ಸಚಿವ ಸಂತೋಷ್ ಲಾಡ್ ಅವರು ಈ ಬಾರಿಯ ಗಣೇಶೋತ್ಸವಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ಗಣೇಶನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ್ದಾರೆ. ಎಲ್ಲ ಸಹಕಾರದಿಂದ ಗಣೇಶೋತ್ಸವ ಯಶಸ್ವಿಯಾಗಿ ನಡೆಯಿತು ಎಂದು ತಿಳಿಸಿದ್ದಾರೆ.