ಕಾರವಾರ ನಗರ ಗಣೇಶೋತ್ಸವ ಸಮಿತಿಗೆ ಮುಸ್ಲಿಂ, ಈದ್‌ ಮಿಲಾದ್‌ಗೆ ಹಿಂದು ಪದಾಧಿಕಾರಿಗಳು

| Published : Sep 16 2024, 01:58 AM IST / Updated: Sep 16 2024, 07:47 AM IST

ಕಾರವಾರ ನಗರ ಗಣೇಶೋತ್ಸವ ಸಮಿತಿಗೆ ಮುಸ್ಲಿಂ, ಈದ್‌ ಮಿಲಾದ್‌ಗೆ ಹಿಂದು ಪದಾಧಿಕಾರಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಕಾರವಾರದಲ್ಲಿ ಗಣೇಶೋತ್ಸವ ಸಮಿತಿಗೆ ಮುಸ್ಲಿಂ ಧರ್ಮದವರು ಅಧ್ಯಕ್ಷರಾಗಿ, ಈದ್ ಮಿಲಾದ್ ಸಮಿತಿಗೆ ಹಿಂದುಗಳು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎರಡೂ ಧರ್ಮದವರು ಸೇರಿ ಎರಡೂ ಹಬ್ಬಗಳನ್ನು ಸಾಮರಸ್ಯದಿಂದ ಆಚರಿಸುತ್ತಿದ್ದಾರೆ.

ಕಾರವಾರ: ಹಿಂದುಗಳ ಪವಿತ್ರ ಹಬ್ಬವಾದ ಗಣೇಶೋತ್ಸವ ಸಮಿತಿಗೆ ಮುಸ್ಲಿಂ ಧರ್ಮದವರು ಅಧ್ಯಕ್ಷರಾಗಲು ಸಾಧ್ಯವೇ? ಹಾಗೆ ಮುಸ್ಲಿಂ ಧರ್ಮೀಯರಿಗೆ ಪವಿತ್ರವಾದ ಈದ್ ಮಿಲಾದ್‌ಗೆ ಹಿಂದುಗಳು ಅಧ್ಯಕ್ಷರಾದರೆ ಆದೀತೆ? ಆಗದೆ ಏನು? ಕಾರವಾರ ಈ ಅಪರೂಪದ ಭಾವೈಕ್ಯತೆಗೆ ಸಾಕ್ಷಿಯಾಗಿದೆ.

ಇಲ್ಲಿ ಗಣೇಶೋತ್ಸವ ಸಮಿತಿಗೆ ಮುಸ್ಲಿಂ, ಈದ್ ಮಿಲಾದ್ ಸಮಿತಿಗೆ ಹಿಂದುಗಳೆ ಅಧ್ಯಕ್ಷ, ಉಪಾಧ್ಯಕ್ಷರು! ಎರಡೂ ಧರ್ಮದವರು ಸೇರಿ ಎರಡೂ ಧರ್ಮದ ಹಬ್ಬಗಳ ಆಚರಣೆ ಮಾಡುತ್ತ ಸಾಮರಸ್ಯದ ಪಾಠ ಹೇಳುತ್ತಿದ್ದಾರೆ. ಕಾರವಾರ ನಗರದ ಕೋಣೆವಾಡದ ಹಿಂದೂ- ಮುಸ್ಲಿಂ ಯುವಕರು 21 ವರ್ಷಗಳಿಂದ ಈ ಅಪರೂಪದ ಹಬ್ಬಗಳನ್ನು ಆಚರಿಸುತ್ತ ಬಂದಿದ್ದಾರೆ.

9 ದಿನಗಳ ಕಾಲ ನಡೆಯುವ ಗಣೇಶೋತ್ಸವ ಸಮಿತಿಗೆ ನಜೀರ್ ರಾಣಿಬೆನ್ನೂರು ಅಧ್ಯಕ್ಷರಾದರೆ, ಉಪಾಧ್ಯಕ್ಷರು ನಿಸ್ಸಾರ್ ಶೇಖ್. ಎರಡೂ ಧರ್ಮದವರು ಸೇರಿ ಗಣೇಶ ಮಂಟಪದ ಬಳಿ ಅನ್ನಸಂತರ್ಪಣೆ ಮಾಡಿದ್ದಾರೆ. ಕೇಸರಿ ಪತಾಕೆ ಕಟ್ಟಿ ತಳಿರು-ತೋರಣ ಹಾಕಿ ವಿಧ್ಯುಕ್ತವಾಗಿ ಗಣಪನಿಗೆ ಪೂಜೆ ಸಲ್ಲಿಸಿದ್ದಾರೆ. 

ಸಮೀಪದಲ್ಲಿ ಮದೀನಾ ಜಾಮಿಯಾ ಮಸೀದಿ ಕೂಡ ಇದೆ. ಸೆ. 16ರಂದು ಈದ್ ಮಿಲಾದ್ ಆಚರಣೆ ನಡೆಯಲಿದೆ. ಈದ್ ಮಿಲಾದ್ ಸಮಿತಿಗೆ ಅಧ್ಯಕ್ಷರಾಗಿ ನಾಗರಾಜ ಹಾಗೂ ಉಪಾಧ್ಯಕ್ಷರಾಗಿ ವಿನಾಯಕ ವಡ್ಡರ್ ಅವರನ್ನು ಆಯ್ಕೆ ಮಾಡಲಾಗಿದೆ. ಮಸೀದಿ ಎದುರು ಎರಡೂ ಧರ್ಮದವರು ಸೇರಿ ಹಸಿರು ಬಾವುಟ ಕಟ್ಟಿ, ಲೈಟಿಂಗ್ ಅಳವಡಿಸಿ ಸಿದ್ಧತೆ ಮಾಡಿದ್ದಾರೆ.ಗಣೇಶೋತ್ಸವ ಮೆರವಣಿಗೆ ವೇಳೆ ಮಸೀದಿ ಎದುರು ಹಾದು ಹೋಗುವಾಗ ಧ್ವನಿವರ್ಧಕ ಬಂದ್ ಮಾಡಲಾಗುತ್ತದೆ. ಯಾವುದೆ ವಾದ- ವಿವಾದಕ್ಕೆ ಅವಕಾಶವೇ ಇಲ್ಲದೆ ಎರಡೂ ಹಬ್ಬಗಳು ನಡೆಯುತ್ತಿವೆ.

ರಾಜಕೀಯ ಇಲ್ಲ: ಎರಡೂ ಧರ್ಮದವರು ಇಲ್ಲಿ ಸಹೋದರರಂತೆ ಇದ್ದೇವೆ. ಮುಂದೆಯೂ ಇದೇ ರೀತಿ ಇರುತ್ತೇವೆ. ಯಾವುದೆ ರಾಜಕೀಯಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಸ್ಥಳೀಯರಾದ ರಂಗಣ್ಣ ವಡ್ಡರ ತಿಳಿಸಿದರು.

ಭಾವೈಕ್ಯ: ಗಣೇಶೋತ್ಸವಕ್ಕೆ ಮುಸ್ಲಿಂ ಧರ್ಮದವರು ಅಧ್ಯಕ್ಷರಷ್ಟೇ ಅಲ್ಲ, ಮೂರ್ತಿಯನ್ನೂ ಮುಸ್ಲಿಂ ಸಮಾಜದವರು ಕೊಡುಗೆಯಾಗಿ ನೀಡಿದ್ದಾರೆ. ಸಮಿತಿಯಲ್ಲಿ ಎರಡೂ ಧರ್ಮದವರಿದ್ದಾರೆ. ಈದ್ ಮಿಲಾದ್ ಸಮಿತಿಯಲ್ಲೂ ಎರಡೂ ಧರ್ಮದವರಿದ್ದಾರೆ. ಈ ಭಾವೈಕ್ಯತೆಯನ್ನು ಕಾಪಾಡಿಕೊಂಡು ಹೋಗುತ್ತೇವೆ ಎಂದು ಸ್ಥಳೀಯರಾದ ಬಾಬು ಶೇಖ ತಿಳಿಸಿದರು.