ಶಾಂತಿಯುತವಾಗಿ ನಡೆದ ಗಣೇಶೋತ್ಸವದ ಮೆರವಣಿಗೆ

| Published : Dec 01 2024, 01:31 AM IST

ಶಾಂತಿಯುತವಾಗಿ ನಡೆದ ಗಣೇಶೋತ್ಸವದ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಗಣೇಶೋತ್ಸವದ ಮೆರವಣಿಗೆ ೨ನೇ ದಿನವಾದ ಶನಿವಾರವೂ ಶಾಂತಿಯುತವಾಗಿ, ಸಡಗರ, ಸಂಭ್ರಮದಿಂದ ಮುಂದುವರಿದಿದ್ದು, ೨೫ಸಾವಿರಕ್ಕೂ ಹೆಚ್ಚು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ೨೫ಕ್ಕೂ ಹೆಚ್ಚಿನ ಸಾಂಸ್ಕೃತಿಕ ಕಲಾ ತಂಡಗಳು ಜನಮನಸೂರೆಗೊಂಡರೆ, ಭಾರಿ ಮದ್ದು ಗುಂಡುಗಳ ಪ್ರದರ್ಶನ ನೆರೆದಿದ್ದ ಜನರನ್ನು ನಿಬ್ಬೆರಗಾಗಿಸುವಂತೆ ಮಾಡಿದೆ. ಹಿಂದೂ-ಮುಸಲ್ಮಾನ್‌ ಲೋಡರ್ಸ್‌ ಮಜ್ದೂರ್ ಯೂನಿಯನ್ ವತಿಯಿಂದ ಗಣಪತಿಗೆ ಭಾರಿ ಗಾತ್ರದ ಹಾರ ಸಮರ್ಪಿಸಿದರು. ಅಲ್ಲದೇ ಅಂಗಡಿಯ ಪ್ರತಿಯೊಬ್ಬ ವರ್ತಕರೂ ವಿಶೇಷ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಗಣೇಶೋತ್ಸವದ ಮೆರವಣಿಗೆ ೨ನೇ ದಿನವಾದ ಶನಿವಾರವೂ ಶಾಂತಿಯುತವಾಗಿ, ಸಡಗರ, ಸಂಭ್ರಮದಿಂದ ಮುಂದುವರಿದಿದ್ದು, ೨೫ಸಾವಿರಕ್ಕೂ ಹೆಚ್ಚು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ೨೫ಕ್ಕೂ ಹೆಚ್ಚಿನ ಸಾಂಸ್ಕೃತಿಕ ಕಲಾ ತಂಡಗಳು ಜನಮನಸೂರೆಗೊಂಡರೆ, ಭಾರಿ ಮದ್ದು ಗುಂಡುಗಳ ಪ್ರದರ್ಶನ ನೆರೆದಿದ್ದ ಜನರನ್ನು ನಿಬ್ಬೆರಗಾಗಿಸುವಂತೆ ಮಾಡಿದೆ.

ಶುಕ್ರವಾರ ಸಂಜೆ ಆಸ್ಥಾನ ಮಂಟಪದಿಂದ ನಿರ್ಗಮಿಸಿದ ಪ್ರಸನ್ನ ಗಣಪತಿಯೂ ಮೆರವಣಿಗೆಯ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಗಣಪನ ಉತ್ಸವ ಸಂಪ್ರದಾಯದಂತೆ ತಮ್ಮ ಬಡಾವಣೆ, ಮನೆ ಹಾಗೂ ಅಂಗಡಿ-ಮುಂಗಟ್ಟಿನ ಮುಂದೆ ಸಾಗುವ ವಿಘ್ನವಿನಾಯಕನಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿ ತಮ್ಮ ಭಕ್ತಿ ಸಮರ್ಪಿಸುವ ಮೂಲಕ ಬೀಳ್ಕೊಟ್ಟರೆ, ಉತ್ಸವ ಸಾಗುವ ರಸ್ತೆಯುದ್ದಕ್ಕೂ ಹೆಂಗಳೆಯರು ನೀರುಹಾಕಿ ಬಣ್ಣ-ಬಣ್ಣದ ಚಿತ್ತಾರ ಬಿಡಿಸಿದರೆ, ಯುವಕರು ತಳಿರು ತೋರಣಗಳನ್ನು ಕಟ್ಟಿ ಸ್ವಾಗತಿಸಿದರು. ಇನ್ನು ಸಂಘ-ಸಂಸ್ಥೆಗಳ ವತಿಯಿಂದ ನಗರದ ಕೆಲವು ವೃತ್ತಗಳಲ್ಲಿ ಬೃಹತ್ ಹೂವಿನ ಹಾರ ಸಮರ್ಪಿಸಿ ನೆರೆದಿದ್ದ ಭಕ್ತಾದಿಗಳಿಗೆ ಪಾನಕ ಮತ್ತು ಪ್ರಸಾದ ವಿತರಿಸುತಿದ್ದದ್ದು ವಿಶೇಷವಾಗಿತ್ತು.

ಶನಿವಾರ ಬೆಳಗ್ಗೆ ಶ್ಯಾನುಭೋಗರ ಬೀದಿ, ಸಾಯಿನಾಥ ರಸ್ತೆ, ಕರಿಯಮ್ಮನಗುಡಿ ಬೀದಿ, ಲಕ್ಷ್ಮೀಪುರ, ರಂಗೇಗೌಡರ ಬೀದಿ, ಸುಭಾಷ್ ನಗರ, ಕೃಷಿ ಉತ್ಪನ್ನ ಮಾರುಕಟ್ಟೆ ಆವರಣ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ನೆರೆದಿದ್ದ ಸದ್ಭಕ್ತರು ಮಹಾಮಂಗಳಾರತಿ ಮಾಡುವ ಮೂಲಕ ಭಕ್ತಿ ಸಮರ್ಪಿಸಿದರು. ರಾಷ್ಟ್ರೀಯ ಹೆದ್ದಾರಿಯ ಮೂಲಕ ಕಂತೇನಹಳ್ಳಿ ಕೆರೆಯತ್ತ ಮೆರವಣಿಗೆ ಸಾಗಿದ್ದು, ಭಾನುವಾರ ರಾತ್ರಿ 7. 30 ಗಂಟೆಗೆ ಗಂಟೆಗೆ ಭಾರಿ ಮದ್ದು-ಗುಂಡುಗಳ ಪ್ರದರ್ಶನವನ್ನು ನಂತರ ಗಣಪತಿ ವಿಸರ್ಜಿಸಲಾಗುವುದು.

ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಹೊರಟ ಉತ್ಸವದಲ್ಲಿ ಕಾಳಿಕಾಂಬ ಕುಣಿತ, ಕೇರಳ ಚಂಡೇ ವಾದ್ಯ, ಡೊಳ್ಳು ಕುಣಿತ, ಕೊಟ್ಟೂರಿನ ನಂದೀಧ್ವಜ ಕುಣಿತ ನಗಾರಿ ವೀರಭದ್ರ ಕುಣಿತ ತಮಟೆ ಚಮತ್ಕಾರ ಹಾಗೂ ಗೊಂಬೆಯಾಟ , ಡಿ.ಜೆಗಳು ಸೇರಿದಂತೆ ಸುಮಾರು ೨೫ಕ್ಕೂ ಹೆಚ್ಚಿನ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತಸಮೂಹಕ್ಕೆ ಮನರಂಜನೆ ನೀಡಿದರು.

ಶನಿವಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ , ಇನ್ನಿತರರು ಪೂಜೆ ಸಲ್ಲಿಸಿದರು. ಹಿಂದೂ-ಮುಸಲ್ಮಾನ್‌ ಲೋಡರ್ಸ್‌ ಮಜ್ದೂರ್ ಯೂನಿಯನ್ ವತಿಯಿಂದ ಗಣಪತಿಗೆ ಭಾರಿ ಗಾತ್ರದ ಹಾರ ಸಮರ್ಪಿಸಿದರು. ಅಲ್ಲದೇ ಅಂಗಡಿಯ ಪ್ರತಿಯೊಬ್ಬ ವರ್ತಕರೂ ವಿಶೇಷ ಪೂಜೆ ಸಲ್ಲಿಸಿದರು.ಮೆರವಣಿಗೆಯ ನೇತೃತ್ವ ವಹಿಸಿರುವ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಉತ್ಸವ ಆರಂಭದಿಂದ ಕಂತೇನಹಳ್ಳಿ ಕೆರೆ ತಲುಪುವವರೆಗೆ ಪ್ರತಿ ಹಂತದಲ್ಲಿ ತೀವ್ರ ನಿಗಾವಹಿಸಿ ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ಜಾಗರೂಕತೆ ವಹಿಸಿ ಹಗಲು-ರಾತ್ರಿಯೆನ್ನದೇ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಪೋಟೋ:- ಅರಸೀಕೆರೆ ಶ್ರೀ ಪ್ರಸನ್ನ ಗಣೇಶ ಮೂರ್ತಿ ಮೆರವಣಿಗೆ.