ಗಣೇಶೋತ್ಸವ: ಗ್ರಾಹಕರಿಗೆ ಹೂವು-ಹಣ್ಣು ಬೆಲೆ ಏರಿಕೆ ಬಿಸಿ

| Published : Sep 07 2024, 01:34 AM IST

ಸಾರಾಂಶ

ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಯುವಕ ಸಂಘ, ಸಂಸ್ಥೆಗಳು ಈಗಾಗಲೇ ಎಲ್ಲ ಸಿದ್ದತೆ ಮಾಡಿಕೊಂಡಿವೆ.

ಹೂವಿನಹಡಗಲಿ: ತಾಲೂಕು ಕೇಂದ್ರ ಸೇರಿದಂತೆ ಎಲ್ಲ ಹಳ್ಳಿಗಳಲ್ಲಿ ಗಣೇಶೋತ್ಸವ ಹಬ್ಬಕ್ಕೆ ಭರದ ಸಿದ್ಧತೆ ಜೋರಾಗಿದೆ. ಜತೆಗೆ ಹಬ್ಬಕ್ಕೆ ಅಗತ್ಯವಿರುವ ಹೂವು, ಹಣ್ಣಿನ ಬೆಲೆ ಏರಿಕೆಯು ಗ್ರಾಹಕರಿಗೆ ಬಿಸಿ ಮುಟ್ಟಿದೆ.

ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಯುವಕ ಸಂಘ, ಸಂಸ್ಥೆಗಳು ಈಗಾಗಲೇ ಎಲ್ಲ ಸಿದ್ದತೆ ಮಾಡಿಕೊಂಡಿವೆ. ಗಣೇಶನಿಗೆ ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡಲು ಜನ ಮುಂದಾಗಿದ್ದಾರೆ. ಜತೆಗೆ ಹೂವು, ಹಣ್ಣು ಖರೀದಿಯೂ ಜೋರಾಗಿದೆ.

ಹಣ್ಣಿನ ದರಪಟ್ಟಿ: ಸೇಬು ಕೆಜಿಗೆ ₹180ರಿಂದ ₹200, ಕಿತ್ತಳೆ- ₹100ರಿಂದ ₹150, ದಾಳಿಂಬೆ- ₹200ರಿಂದ ₹250, ಪೇರಲ- ₹60 ರಿಂದ ₹100, ಸೀತಾಫಲ- ₹100ರಿಂದ ₹120, ಮೊಸಂಬಿ- ₹80ರಿಂದ ₹120, ಮಲ್ಲಿಗೆ ಹೂವಿನ ಹಾರ ₹100ರಿಂದ ₹250, ಮಲ್ಲಿಗೆ ಹೂವು ಮೊಳಕ್ಕೆ ₹60ರಿಂದ ₹80, ಕನಕಾಂಬರ- ₹80ರಿಂದ ₹100, ಸೇವಂತಿಗೆ ಹೂವು ಮಾರಿಗೆ ₹100, ಚೆಂಡು ಹೂವು ಮಾರಿಗೆ ₹50 ರಿಂದ ₹80 ಬೆಲೆ ಇದೆ. 2 ಬಾಳೆ ಗಿಡಕ್ಕೆ ₹50ರಿಂದ ₹80, 2 ಕಬ್ಬಿಗೆ ₹30ರಿಂದ ₹50 ಇದೆ.

ಇಷ್ಟೆಲ್ಲ ಬೆಲೆ ಏರಿಕೆ ನಡುವೆ ಗ್ರಾಹಕರು ಗಣೇಶ ಹಬ್ಬಕ್ಕೆ ಜೋರಾಗಿಯೇ ಖರೀದಿ ಮಾಡುತ್ತಿದ್ದಾರೆ. ಪ್ರತಿ ಹಬ್ಬ ಹರಿ ದಿನಗಳಲ್ಲಿ ಏಕಾಏಕಿ ಬೆಲೆ ಏರಿಕೆ ಆಗುತ್ತಿದೆ. ಜತೆಗೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಹಣ್ಣುಗಳೇ ಇಲ್ಲ. ಆದರೆ ಬೆಲೆ ಮಾತ್ರ ಗಗನಕ್ಕೇರಿದೆ. ಬೇಕಾಬಿಟ್ಟಿಯಾಗಿ ಮಾರಾಟ ಮಾಡುತ್ತಿದ್ದಾರೆ. ಅನಿವಾರ್ಯವಾಗಿ ಹಬ್ಬಕ್ಕಾಗಿ ಖರೀದಿಸಬೇಕಿದೆ ಎನ್ನುತ್ತಾರೆ ಗ್ರಾಹಕರು.

ಮಾರುಕಟ್ಟೆ ಧಾರಣೆಯಂತೆ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದೇವೆ. ವರಮಹಾಲಕ್ಷ್ಮೀ ಪೂಜೆಯಂದು ಹಣ್ಣಿನ ಬೆಲೆ ಏರಿಕೆ ಆಗಿತ್ತು. ಆದರೆ ಈ ಬಾರಿ ಗಣೇಶ ಹಬ್ಬಕ್ಕೆ ಕೆಲವು ಹಣ್ಣಿನ ಬೆಲೆ ಮಾತ್ರ ಏರಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.