ಓದಿದ ಶಾಲೆ ದತ್ತು ಪಡೆದ ಗಣೇಶ್‌ರಾವ್ ಕೇಸರ್ಕರ್

| Published : Feb 16 2025, 01:48 AM IST

ಸಾರಾಂಶ

ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಗೋಷ್ಠಿಯಲ್ಲಿ ಚಿತ್ರರಂಗದ ಹಿರಿಯ ನಟ ಗಣೇಶ್ ರಾವ್ ಕೇಸರ್ಕರ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಾನು ಹುಟ್ಟಿದ ಊರಲ್ಲಿ ಗುರು ಸಿದ್ದೇಶ್ವರ ಬಸವ ದೇವಸ್ಥಾನ ಸಂಪ್ರೋಕ್ಷಣೆ ಹಾಗೂ ನಾನು ಓದಿದ ಶಾಲೆಯನ್ನು ದತ್ತು ಸ್ವೀಕರಿಸುತ್ತಿರುವುದಾಗಿ ಕನ್ನಡ ಚಿತ್ರ ರಂಗದ ಹಿರಿಯ ನಟ ಗಣೇಶ್ ರಾವ್ ಕೇಸರ್ಕರ್ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ತಂದೆ ಮಾಜಿ ಸುಬೇದಾರ್ ಆರ್. ಕೃಷ್ಣರಾವ್, ತಾಯಿ ಸರಸುಬಾಯಿ ಅವರ ಸ್ಮರಣಾರ್ಥ ನಾನು ಹುಟ್ಟಿ ಬೆಳೆದ ಕೊಳ್ಳೇಗಾಲ ತಾಲೂಕಿನ ಹೊಂಡರಬಾಳು ಗ್ರಾಮಕ್ಕೆ ಹಾಗೂ ನಾನು ಓದಿದ ಶಾಲೆಗೆ ಏನಾದರೂ ಮಾಡಬೇಕೆಂಬ ಹಂಬಲದಿಂದ ಗ್ರಾಮದಲ್ಲಿನ ಗುರುಸಿದ್ದೇಶ್ವರ ಬಸವ ದೇವಸ್ಥಾನದ ಸಂಪ್ರೋಕ್ಷಣಾ ಮಾಡಿ, ಗ್ರಾಮದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಮೂಲಭೂತ ಸೌಕರ್ಯಗಳ ಜೊತೆಗೆ ಶಾಲಾಭಿವೃದ್ದಿ ಮಾಡಬೇಕೆಂಬ ಅಭಿಲಾಷೆ ಹೊಂದಿದ್ದೇನೆ ಎಂದರು.ಈ ಕಾರ್ಯಕ್ರಮಗಳು ಫೆ.೨೦ಹಾಗೂ ೨೧ ರಂದು ನಡೆಯಲಿದೆ. ಫೆ.೨೧ರಂದು ಬೆಳಗ್ಗೆ ೧೦ ಗಂಟೆಗೆ ದಿವ್ಯ ಸಾನ್ನಿಧ್ಯವನ್ನು ಮತ್ತು ದೇವಸ್ಥಾನದ ಉದ್ಘಾಟನೆಯನ್ನು ಮಲೆಮಹದೇಶ್ವರ ಸಾಲೂರು ಬೃಹನ್ ಮಠದ ಪೀಠಾಧಿಪತಿ ಡಾ.ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೆರವೇರಿಸಲಿದ್ದಾರೆ. ಪೂಜಾ ಕಾರ್ಯಕ್ರಮ ಹೊಂಡರಬಾಳು ಆದಿ ಗುರು ಶಂಬಿನ ಸ್ವಾಮಿ ಮಠಾಧಿಪತಿ ವಿದ್ವಾನ್ ನೀಲಕಂಠ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ. ಗೋಸಾಯಿ ಮಹಾ ಸಂಸ್ಥಾನ ಮಠದ ವೇದಾಂತಚಾರ್ಯ ಮಂಜುನಾಥ ಭಾರತಿ ಸ್ವಾಮೀಜಿ ಘನ ಉಪಸ್ಧಿತಿ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿವಿಧ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಹಾಗೂ ಮುಖಂಡರು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಹೊಂಡರಬಾಳು ಗ್ರಾಮದ ಅಧ್ಯಕ್ಷರು ಹಾಗೂ ಎಲ್ಲ ಸಮಾಜದ ಮುಖಂಡರು, ತಾಲೂಕು ದಂಡಾಧಿಕಾರಿಗಳು, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ವಿದ್ಯಾ ಇಲಾಖೆಯ ಗೌರವಾನ್ವಿತರು ಭಾಗವಹಿಸಲಿದ್ದಾರೆ. 2 ದಿನವು ಅನ್ನ ಸಂತರ್ಪಣೆ ನಡೆಯಲಿದೆ ಎಂದರು.

ಶಾಲೆಯ ಮುಖ್ಯೋಪಾಧ್ಯಾಯ ಎಂ.ವಾಸು ಮಾತನಾಡಿ, ಗಣೇಶ್ ರಾವ್ ಕೇಸರ್ಕರ್ ಅವರು ನಮ್ಮ ಶಾಲೆಯನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ ಮೇಲೆ ಹಲವು ದಾನಿಗಳು ಮುಂದೆ ಬಂದಿದ್ದಾರೆ ಎಂದರು. ನಮ್ಮ ಶಾಲೆಯಲ್ಲಿ ೧ರಿಂದ ೭ನೇ ತರಗತಿವರೆಗೆ ೭೪ ಮಕ್ಕಳಿದ್ದಾರೆ, ಅವರಿಗೆ ಬಿಳಿ ಸಮವಸ್ತ್ರ, ಲೇಖನ ಸಾಮಗ್ರಿಗಳನ್ನು ಕೊಡಿಸಿದ್ದಾರೆ. ಮುಂದೆ ಶಾಲೆಗೆ ಬೇಕಾದ ಎಲ್ಲ ಮೂಲ ಸೌಕರ್ಯಗಳನ್ನು ನೀಡುವುದಾಗಿ ಹೇಳಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಹಳ್ಳಿಕಾರ್ ಮಲ್ಲೇಶ್, ಗ್ರಾಪಂ ಸದಸ್ಯ ಸಿದ್ದಲಿಂಗಸ್ವಾಮಿ ಇದ್ದರು.