ಎಸ್.ನಾಗಭೂಷಣ ಕನ್ನಡಪ್ರಭವಾರ್ತೆ ತುರುವೇಕೆರೆ

ಮೇಡಂ. ನಾವು ನಮ್ಮ ಊದುಬತ್ತಿಯನ್ನು ಪ್ರಮೋಷನ್ ಮಾಡಕ್ಕೆ ಬಂದಿದ್ದೀವಿ. ಒಂದು ಪ್ಯಾಕ್ ಗೆ ಕೇವಲ 20 ರು.ಮಾತ್ರ. ಇದರಲ್ಲಿ ಒಂದು ಕೂಪನ್ ಇರುತ್ತೆ. ಅದರಲ್ಲಿ ನಿಮ್ಮ ಅದೃಷ್ಠ ಗೊತ್ತಾಗುತ್ತೆ. ಅದರಲ್ಲೇನಾದರೂ ನಿಮಗೆ ಆಫರ್ ಸಿಕ್ಕರೆ ಸುಮಾರು 8 ಸಾವಿರ ರು ಬೆಲೆ ಬಾಳುವ ಐಟಮ್ ಗಳನ್ನು ಕೇವಲ 4 ಸಾವಿರ ರುಪಾಯಿಗೆ ಕೊಡ್ತೀವಿ. ನೋಡಿ ಮೇಡಮ್. ನಿಮ್ಮ ಅದೃಷ್ಠನ ಒಮ್ಮೆ ಟೆಸ್ಟ್ ಮಾಡಿ.

ಹೀಗೆ ನಿಮ್ಮ ಮನೆ ಬಾಗಿಲಿಗೆ ಬರುವ ಇವರು ನಿಮ್ಮ ಮನಸ್ಸಿನ ಭಾವನೆಯನ್ನು ಕೆಲವೇ ಕ್ಷಣಗಳಲ್ಲಿ ಅಳೆದು ಬಿಡ್ತಾರೆ. ನೀವು ಅವರ ಮಾತಿಗೆ ಮರುಳಾಗಿ ಊದುಗಡ್ಡಿ ಪ್ಯಾಕ್ ನ್ನು ಕೊಂಡರೋ, ನೀವು ಗ್ಯಾರಂಟಿ ಗುಂಡಿಗೆ ಬಿದ್ದಿರಿ ಎಂದೇ ಅರ್ಥ. ಈ ರೀತಿಯಾಗಿ ತುರುವೇಕೆರೆಯಲ್ಲಿ ಸುಮಾರು ಎಪ್ಪತ್ತಕ್ಕೂ ಹೆಚ್ಚು ಮಂದಿ ಈ ಭೋಗಸ್ ಗೆ ಸಿಲುಕಿ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಆಗಿದ್ದೇನು? : ಮನೆ ಮನೆಗೆ ಬರುತ್ತಿರುವ ಈ ಗ್ಯಾಂಗ್‌ ಊದುಗಡ್ಡಿ ಗ್ಯಾಂಗ್‌ ಎಂದೇ ಪ್ರಸಿದ್ದಿಯಾಗಿದೆ. ಇವರು ನೀಡುವ ಪ್ಯಾಕ್ ಒಳಗೆ ಒಂದು ಆಫರ್ ಕೂಪನ್ ಇಟ್ಟಿರುತ್ತಾರೆ. ಅದರಲ್ಲಿ ತಮ್ಮ ಶ್ರೀ ಜಯಲಕ್ಷ್ಮಿ ಹೋಂ ಅಪ್ಲೆಯನ್ಸೆಸ್ ಡಿಸ್ಕೌಂಟ್ ಆಫರ್ ಅಂತ ಇದ್ದು 8000 ಸಾವಿರ ರು. ಬದಲಿಗೆ ನಿಮಗೆ ಕೇವಲ 3999 ಕ್ಕೆ ವಿವಿಧ ಗೃಹೋಪಯೋಗಿ ವಸ್ತುಗಳು ನಿಮಗೆ ಸಿಕ್ಕಿದೆ. ನಿಮಗೆ ಶುಭಾಶಯಗಳು ಅಂತ ಇರುತ್ತೆ. ಈಗ ನಿಮಗೆ 3999 ಕ್ಕೆ ಮಿಕ್ಸಿ, ಪ್ರೆಸರ್ ಕುಕ್ಕರ್, ಚಪಾತಿ ಮೇಕರ್, ನಾಸ್ಟಿಕ್ ಕಡಾಯಿ (ದೊಡ್ಡದು), ನಾನ್ ಸ್ಟಿಕ್ ಕಡಾಯಿ (ಚಿಕ್ಕದು), ತೆಂಗಿನಕಾಯಿ ತುರಿಯುವ ಮಣೆ, ಒಂದು ಸೋಲಾರ್ ಲ್ಯಾಂಪ್ ದೊರೆಯಲಿದೆ ಎಂದು ಆಸೆ ಹುಟ್ಟಿಸುತ್ತಾರೆ. ಇದು ಬೇಡ ಅಂದರೆ ಹೇಳಿ ಬೇರೆ ಕಡೆ ಊದುಗಡ್ಡಿ ತೆಗೆದುಕೊಂಡವರಿಗೆ ಯಾವ ಕೂಪನ್ನು ಸಿಕ್ಕಿರಲಿಲ್ಲ. ಅವರಿಗೆ ಕೊಡ್ತೀವಿ ಅಂತ ಹೇಳಿ ಮಾನಸಿಕವಾಗಿ ಬ್ಲಾಕ್ ಮೇಲ್ ಮಾಡ್ತಾರೆ. ತಾವು ಮೊದಲೇ ಕೊಟ್ಟಿದ್ದ ಊದುಗಡ್ಡಿಯಿಂದಲೇ ಆ ಎಲ್ಲಾ ಐಟಮ್ ಗಳಿಗೆ ಪೂಜೆ ಮಾಡಿಸುವ ಅವರು ನೋಡಿ ಮೇಡಮ್ ಇನ್ನೊಂದು ಆಫರ್ ಇದೆ. ಇದು ನಿಮಗೆ ಮಾತ್ರ ಸಿಗುತ್ತೆ. ಎಕ್ಟ್ರಾ 600 ರು ಕೊಟ್ರೆ ನಿಮಗೆ ಒಂದು ವಾಷಿಂಗ್ ಮಷನ್ ಅಥವಾ ಫ್ರಿಡ್ಜ್ ಸಿಗುತ್ತೆ. ಇದು ಕೆಲವೇ ಜನಕ್ಕೆ ಮಾತ್ರ. ಎರಡು ವರ್ಷ ವಾರಂಟಿ ಇರುತ್ತೆ. ಇದಕ್ಕೆ ನೀವು ಹೂ ಅಂದ್ರೆ ಮೂರು ದಿನಗಳ ಒಳಗೆ ನಿಮ್ಮ ಮನೆಗೇ ನಮ್ಮ ಹುಡುಗರು ಬಂದು ವಾಷಿಂಗ್ ಮೆಷಿನ್ ಅಥವಾ ಫ್ರಿಡ್ಜ್ ನ ತಂದುಕೊಡ್ತಾರೆ. ಇವತ್ತು ಮಾತ್ರ ಈ ಚಾನ್ಸ್ ಇರುತ್ತೆ. ನೀವು ಹೂ ಅಂದ್ರೆ ಆರ್ಡರ್ ಬುಕ್ ಮಾಡ್ಕೋತೀವಿ ಅಂತನೂ ನಯವಾಗಿ ಮಾತನಾಡಿ ಕಿವಿಗೆ ಲಾಲ್ ಬಾಗ್ ನ್ನೇ ಮುಡಿಸಿ ಈಗ ಪರಾರಿಯಾಗಿದ್ದಾರೆ. ಇವರ ಮಾತಿಗೆ ಮರುಳಾಗಿರುವ ಜನ ಕೇವಲ 600 ರೂಪಾಯಿಗೆ ವಾಷಿಂಗ್ ಮಷಿನ್ ಅಥವಾ ಫ್ರಿಡ್ಜ್ ಸಿಗುತ್ತೆ ಎಂದು ಹೇಳಿ ಅದನ್ನು ಕಳೆದುಕೊಂಡಿದ್ದಾರೆ. 3999 ರೂ ಕೊಟ್ಟು ಕೊಂಡಿದ್ದ ವಸ್ತುಗಳನ್ನು ಮನೆಯಲ್ಲಿ ಬಿಚ್ಚಿ ನೋಡಿದರೆ ಎಲ್ಲವೂ ಕಳಪೆ ಗುಣಮಟ್ಟದ ವಸ್ತುಗಳು, ತಗಡಿನಿಂದ ಮಾಡಿರುವ ಹಾಗೂ ಕಳಪೆ ಕಚ್ಚಾ ವಸ್ತುಗಳನ್ನು ಬಳಸಿ ಮಾಡಿರುವ ವಸ್ತುಗಳಾಗಿರುತ್ತೆ. ಈ ಎಲ್ಲವನ್ನೂ ಕ್ರೋಢೀಕರಿಸಿದರೂ ಸಹ ಮಾರುಕಟ್ಟೆಯಲ್ಲಿ 1500-2000 ದೊರೆಯಬಹುದು ಅಷ್ಟೇ. ಅವರು ಕೊಟ್ಟಿರುವ ಮೊಬೈಲ್ ನಂಬರ್ ಗೆ ಕರೆ ಮಾಡಿದರೆ, ನೀವು ಯಾವ ನಂಬರ್ ಗೆ ಕರೆ ಮಾಡಿದ್ದೀರೋ ಅವರು ಮೊಬೈಲ್ ನ್ನು ಸ್ಚಿಚ್ ಆಫ್ ಮಾಡಿದ್ದಾರೆ ಎಂದು ಹೇಳುತ್ತೆ. ಇತ್ತ ಊದುಬತ್ತಿ ಮಾರುವವರಿಗೆ ಕನಿಷ್ಠ ಎಂದರೂ ಒಬ್ಬರಿಂದ 2 ಸಾವಿರ ಲಾಭ. ಅಲ್ಲದೇ ಫ್ರಿಡ್ಜ್, ವಾಷಿಂಗ್ ಮೆಷಿನ್ ಆಸೆ ಹುಟ್ಟಿಸಿ ಪಡೆದ 600 ರು ಸಹ ಲಾಭವಾಗಿದ್ದು ನಿಮ್ಮ ಅದೃಷ್ಟ ಪರೀಕ್ಷಿಸಿ ಅಂತ ಬಂದಾರು ಹುಷಾರಾಗಿರಿ ಎಂದು ಹಣ ಕಳೆದುಕೊಂಡುವರು ಪೆಚ್ಚು ಮೋರೆ ಹಾಕಿಕೊಂಡು ಸಂಬಂಧಿಕರಿಗೆ ಪೋನಾಯಿಸಿದ್ದಾರೆ.