ಗಂಗಾಮತಸ್ಥರು ಜಾತಿ ಕಾಲಂ 9ರಲ್ಲಿ ಬೆಸ್ತ ಎಂದು ನಮೂದಿಸಿ: ಕೆ.ಶಾಂತಪ್ಪ

| Published : Sep 19 2025, 01:00 AM IST

ಗಂಗಾಮತಸ್ಥರು ಜಾತಿ ಕಾಲಂ 9ರಲ್ಲಿ ಬೆಸ್ತ ಎಂದು ನಮೂದಿಸಿ: ಕೆ.ಶಾಂತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಇದೇ ಸೆ.22 ರಿಂದ ನಡೆಯುತ್ತಿರುವ ಮನೆ ಮನೆ ಸಮೀಕ್ಷೆಯಲ್ಲಿ ಗಂಗಾಮಸ್ಥರ ಸಮಾಜದವರ ಸಕ್ರಿಯವಾಗಿ ಭಾಗವಹಿಸಬೇಕು ಇಷ್ಟೇ ಅಲ್ಲದೇ ಗಣತಿಯ ಕಲಂ 9 ರಲ್ಲಿ ಬೆಸ್ತ,ಬೆಸ್ತರ ಎಂದು ನಮೂದಿಸಬೇಕು ಎಂದು ಜಿಲ್ಲಾ ಗಂಗಾಮತಸ್ಥ ಸಮಾಜದ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ ಕೋರಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ರಾಜ್ಯದಲ್ಲಿ ಇದೇ ಸೆ.22 ರಿಂದ ನಡೆಯುತ್ತಿರುವ ಮನೆ ಮನೆ ಸಮೀಕ್ಷೆಯಲ್ಲಿ ಗಂಗಾಮಸ್ಥರ ಸಮಾಜದವರ ಸಕ್ರಿಯವಾಗಿ ಭಾಗವಹಿಸಬೇಕು ಇಷ್ಟೇ ಅಲ್ಲದೇ ಗಣತಿಯ ಕಲಂ 9 ರಲ್ಲಿ ಬೆಸ್ತ,ಬೆಸ್ತರ ಎಂದು ನಮೂದಿಸಬೇಕು ಎಂದು ಜಿಲ್ಲಾ ಗಂಗಾಮತಸ್ಥ ಸಮಾಜದ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ ಕೋರಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಗಂಗಾಮತಸ್ಥ ಸಮಾಜದಲ್ಲಿ 39 ಉಪ ಪಂಗಡಗಳಿದ್ದು, ಬೇರೆ ಬೇರೆ ಪ್ರದೇಶಗಳಲ್ಲಿ ಒಂದೊಂದು ಹೆಸರಿನಿಂದ ಗುರುತಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಅರ್ಜಿಯ ಜಾತಿ ಕಲಂನ 9 ರಲ್ಲಿ ಬೆಸ್ತ ಎಂದು ನಮೂದಿಸಬೇಕು ಉಪ ಜಾತಿ ಕಲಂನಲ್ಲಿ ಪರ್ಯಾಯ ಪದ ಇಲ್ಲವೇ ಜಾತಿ ಪ್ರಮಾಣದಲ್ಲಿರುವ ಹೆಸರನ್ನು ಸೂಚಿಸಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಗಂಗಾಮತಸ್ಥರನ್ನು ವಿವಿಧ ಹೆಸರುಗಳಿಂದ ಗುರುತಿಸಲಾಗಿದೆ. ರಾಯಚೂರಿನಲ್ಲಿ ಬೆಸ್ತರು,ಕಬ್ಬಲಿಗರು,ಕಬ್ಬೇರ ಎಂದು ಕರೆದರೇ ಮಧ್ಯಕರ್ನಾಟಕದಲ್ಲಿ ಅಂಬಿಗರು, ಕಬ್ಬಲಿಗರು, ಬೆಸ್ತರು ಎನ್ನುತ್ತಾರೆ ಇನ್ನು ಬೀದರ್, ಕಲಬುರಗಿ ಹಾಗೂ ಯಾದಗಿರಿಯಲ್ಲಿ ಕೋಲಿ ಎಂದು, ಕರಾವಳಿ ಪ್ರಾಂತದಲ್ಲಿ ಮೊಗವೀರ, ಗಂಗಾಮತಸ್ಥರು ಎಂದು ಕರೆಯುತ್ತಾರೆ. ಅದಕ್ಕಾಗಿ ಗಣತಿಯ ಅರ್ಜಿಯಲ್ಲಿ ಧರ್ಮದ ಕಲಂ 8ರಲ್ಲಿ ಹಿಂದೂ, ಜಾತಿ ಕಲಂ 9ರಲ್ಲಿ ಬೆಸ್ತ, ಬೆಸ್ತರ್ (ಕೋಡ್ ಎ-01750) ಎಂದು ಅದೇ ರೀತಿ ಉಪ ಜಾತಿ ಕಲಂ10 ರಲ್ಲಿ ಉಪಜಾತಿ-ಉಪ ಪಂಗಡವನ್ನು ಬರೆಸಬೇಕು. ಯಾವುದೇ ಕಾರಣಕ್ಕೂ ಬೆಸ್ತರ ಕ್ರಿಶ್ಚಿಯನ್ ಎಂದು ನಮೂದಿಸಕೂಡದು ಎಂದು ಮನವಿ ಮಾಡಿದರು.

ಗಂಗಾಮತಸ್ಥ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವ ಬಲವಾದ ಬೇಡಿಕೆಯಿದೆ. ಅಷ್ಟೇ ಅಲ್ಲದೇ ಭವಿಷ್ಯದಲ್ಲಿ ಗಂಗಾಮತಸ್ಥ ಸಮಾಜಕ್ಕೆ ಸಾಮಾಜಿಕ, ಶೈಕ್ಷಣಿಕ, ಉದ್ಯೋಗ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಸಾಧಿಸುವ ಅಗತ್ಯವಿದ್ದು , ಈ ಹಿನ್ನೆಲೆಯಲ್ಲಿ ಸಮೀಕ್ಷೆಯ ಜಾತಿ ಕಲಂ ನಲ್ಲಿ ತಪ್ಪದೇ ಬೆಸ್ತ ಎಂದು ಬರೆಸಬೇಕು ಎಂದು ವಿವರಿಸಿದರು.

ಸಮಾಜದ ಮುಖಂಡರಾದ ಕೆ.ಶರಣಪ್ಪ, ಕಡಗೋಳ ಆಂಜಿನೇಯ್ಯ, ಕಡಗೋಳ ಶರಣಪ್ಪ,ಹನುಮಂತಪ್ಪ, ಕೆ.ಟಿ.ಶ್ರೀನಿವಾಸ, ಪಿ.ಪ್ರಕಾಶ, ರಾಮಚಂದ್ರ ಕಡಗೋಳ ಇದ್ದರು.