ತಾಲೂಕಿನ ಸಿಗದಾಳು ಸಮೀಪದ ಪ್ರಬೋಧಿನಿ ಗುರುಕುಲದಲ್ಲಿ ಶನಿವಾರ ಸಂಜೆ ಗಂಗಾ ಸ್ವಾಗತದೊಂದಿಗೆ ಗಂಗಾ ಸಮಾರಾಧನೆ ಆರಂಭಗೊಂಡಿತು. ಶನಿವಾರ ರಾತ್ರಿ ಭಾರತ ಮಾತಾ ಪೂಜೆ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ ಸುಧೀರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು

ಕನ್ನಡಪ್ರಭ ವಾರ್ತೆ ಕೊಪ್ಪ

ತಾಲೂಕಿನ ಸಿಗದಾಳು ಸಮೀಪದ ಪ್ರಬೋಧಿನಿ ಗುರುಕುಲದಲ್ಲಿ ಶನಿವಾರ ಸಂಜೆ ಗಂಗಾ ಸ್ವಾಗತದೊಂದಿಗೆ ಗಂಗಾ ಸಮಾರಾಧನೆ ಆರಂಭಗೊಂಡಿತು. ಶನಿವಾರ ರಾತ್ರಿ ಭಾರತ ಮಾತಾ ಪೂಜೆ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ ಸುಧೀರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು

ಭಾನುವಾರ ಬೆಳಿಗ್ಗೆ ಸಂಕಲ್ಪ ಸ್ನಾನದೊಂದಿಗೆ ಶ್ರೀ ವಿಶ್ವಂಭರ ಪೂಜೆ ಹಾಗೂ ಧನ್ವಂತರಿ ಹೋಮದ ಸಂಕಲ್ಪ ನಡೆದವು. ಇದಾದ ನಂತರ ಗುರುಕುಲದ ವಿದ್ಯಾರ್ಥಿಗಳು ಗುರುಕುಲ ದರ್ಶನಂ ರೂಪಕ ನಡೆಸಿಕೊಟ್ಟರು.

ಆರೆಸ್ಸೆಸ್‌ನ ಅಖಿಲ ಭಾರತ ಸಹ ಸಂಪರ್ಕ ಪ್ರಮುಖ್ ಸುನಿಲ್ ದೇಶಪಾಂಡೆ ಮಾತನಾಡಿ ತೀರ್ಥಸ್ನಾನ, ಪುಣ್ಯ ತೀರ್ಥಗಳಿಗೆ ನಮ್ಮ ಧರ್ಮದಲ್ಲಿ ಬಹಳ ಪೂಜ್ಯ ಸ್ಥಾನವಿದೆ. ಗಂಗಾಸಮಾರಾಧನೆಗೆ ವಿಶಿಷ್ಠವಾದ ಹಿನ್ನೆಲೆ ಇದೆ. ಕಾಲ ಕಾಲಕ್ಕೆ ತಂತಾನೇ ಪರಿಶುದ್ಧಳಾಗುವ ನದಿ ಗಂಗೆ. ಗಂಗೆ ನಮ್ಮ ಸಮಾಜದ ಶ್ರೇಷ್ಠತೆಯ ಪ್ರತೀಕ. ಶ್ರವಣ ಸಂಸ್ಕಾರ ಮತ್ತು ದರ್ಶನ ಸಂಸ್ಕಾರಕ್ಕೆ ಅಂತರವಿದೆ, ಇಷ್ಟು ದಿನ ಗುರುಕುಲದ ಬಗ್ಗೆ ಕೇಳಿದ್ದುಂಟು. ಆದರೆ ಈ ಎರಡು ದಿನದಲ್ಲಿ ಗುರುಕುಲ ಮಾದರಿಯ ಪ್ರತ್ಯಕ್ಷ ದರ್ಶನವಾಗಿದೆ. ಹಿಂದೂ ಸಮಾಜಕ್ಕೆ ಹೊರಗಿನ ದಾಳಿಗಳಿಗಿಂತ ಒಳಗಿನ ಕುಸಿತಗಳೇ ಪ್ರಬಲವಾದ ಸಮಸ್ಯೆಯಾಗಿದೆ. ಹೊರಗಿನವರಿಗೆ ಕಿಂಚಿತ್ತೂ ತೊಂದರೆ ಕೊಡದ ನಾವು ನಮ್ಮ ಸಮಾಜಕ್ಕೇ ಅನೇಕ ಸಮಸ್ಯೆಗಳನ್ನು ತಂದುಕೊAಡಿದ್ದೇವೆ. ಸರಿಯಾದ ಶಿಕ್ಷಣ ಸಿಕ್ಕಾಗ ಅನಂತ ಚಿಂತನೆಗಳು ಅರಳುತ್ತವೆ. ವೀರ ಸಾವರ್ಕರ್‌ರಂತಹ ಮಹಾನ್ ವ್ಯಕ್ತಿಗಳು ಕಂಡ ಗುರುಕುಲ ಶಿಕ್ಷಣದ ಕನಸು ಇಲ್ಲಿ ನನಸಾಗುತ್ತಿದೆ. ಹಣ ಸಂಪಾದನೆಗಾಗಿ ಶಿಕ್ಷಣ ಅಲ್ಲ, ಗುಣ ಸಂಪಾದನೆಗೆ ಶಿಕ್ಷಣ ಎಂದು ನುಡಿದರು.

ಈ ಸಂದರ್ಭದಲ್ಲಿ ಪ್ರಬೋಧಿನಿ ಗುರುಕುಲದ ನವೀಕೃತ ವೆಬ್ ಸೈಟ್ www.prabodhinigurukula.org ಅನ್ನು ಸುಧೀರ್‌ ಲೋಕಾರ್ಪಣೆ ಮಾಡಿದರು.

ಕಜಂಪಾಡಿ ಸುಬ್ರಹ್ಮಣ್ಯ ಭಟ್. ಕೇಂದ್ರ ಕಾರ್ಯಕಾರಿಣಿ ಸದಸ್ಯರು ರಾಷ್ಟ್ರೀಯ ಸ್ವಯಂಸೇವಕ ಸಂಘ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಸೀತಾರಾಮ ಕೆದಿಲಾಯ, ದಾ.ಮ. ರವೀಂದ್ರ, ಶಿವಮೊಗ್ಗ ವಿಭಾಗ ಸಂಚಾಲಕ ದಿನೇಶ ಭಾರತೀಪುರ, ಬೆಂಗಳೂರು ಹಿಂದೂ ಜಾಗರಣ ವೇದಿಕೆಯ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ, ಅಖಿಲ ಭಾರತ ಸಾಹಿತ್ಯ ಪರಿಷತ್ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ, ವಿಕ್ರಮ ವಾರಪತ್ರಿಕೆ ಗೌರವ ಸಂಪಾದಕ ನ.ನಾಗರಾಜ ಹಾಜರಿದ್ದರು.

ಕೊಪ್ಪ ತಾಲೂಕಿನಲ್ಲಿ ನಡೆದ ಹಿಂದೂ ಸಮಾಜೋತ್ಸವಗಳ ನಿರ್ವಹಣಾ ಸಮಿತಿಯ ಕಾರ್ಯಕರ್ತರು, ಹರಿಹರಪುರ ಹೋಬಳಿಯ ನಾಗರಿಕರು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.

ಪ್ರಬೋಧಿನಿ ಟ್ರಸ್ಟ್‌ ಅಧ್ಯಕ್ಷ ರಾಜಗೋಪಾಲ್, ಉಮೇಶ್ ರಾವ್, ಕೃಷ್ಣ ಶಾಸ್ತ್ರಿ, ಸುಮಂತ ಶೆಟ್ಟಿ, ಸುಬ್ರಹ್ಮಣ್ಯ ಶೆಟ್ಟಿ, ಭೀಮಣ್ಣ, ಅರವಿಂದ, ವಿಜಯಕುಮಾರ್, ಬಿ.ಕೆ.ಗಣೇಶ ರಾವ್, ವಿಶ್ವಜಿತ್, ಆದಿತ್ಯ ಹರಿಹರಪುರ ಮುಂತಾದವರು ಹಾಜರಿದ್ದರು.